ಯೆರೆಮೀಯ 42 - ಕನ್ನಡ ಸಮಕಾಲಿಕ ಅನುವಾದ1 ಆಗ ಸೈನ್ಯಾಧಿಪತಿಗಳೆಲ್ಲರೂ ಕಾರೇಹನ ಮಗನಾದ ಯೋಹಾನಾನನೂ, ಹೋಷಾಯನ ಮಗನಾದ ಎಜನೀಯನೂ, ಕಿರಿಯರು ಮೊದಲುಗೊಂಡು ಹಿರಿಯರವರೆಗೆ ಜನರೆಲ್ಲರು ಹತ್ತಿರ ಬಂದು, 2 ಪ್ರವಾದಿಯಾದ ಯೆರೆಮೀಯನಿಗೆ, “ನಮ್ಮ ವಿಜ್ಞಾಪನೆ ನಿಮ್ಮ ಮುಂದೆ ಬರಲಿ. ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ, ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ? ನಮಗೋಸ್ಕರವೂ ಎಂದರೆ ಈ ಸಮಸ್ತ ಶೇಷಕ್ಕೋಸ್ಕರವೂ, 3 ನಾವು ನಡೆಯತಕ್ಕ ಮಾರ್ಗವನ್ನೂ, ನಾವು ಮಾಡತಕ್ಕ ಕಾರ್ಯವನ್ನೂ ನಿನ್ನ ದೇವರಾದ ಯೆಹೋವ ದೇವರು ನಮಗೆ ತಿಳಿಸುವ ಹಾಗೆ, ನಿನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡು,” ಎಂದರು. 4 ಆಗ ಪ್ರವಾದಿಯಾದ ಯೆರೆಮೀಯನು ಅವರಿಗೆ, “ನಾನು ಕೇಳಿದ್ದೇನೆ, ನಿಮ್ಮ ಮಾತುಗಳ ಪ್ರಕಾರ ನಿಮ್ಮ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡುತ್ತೇನೆ. ಯೆಹೋವ ದೇವರು ನಿಮಗೆ ಯಾವ ಉತ್ತರವನ್ನು ಕೊಡುವರೋ, ಅದನ್ನು ನಿಮಗೆ ತಿಳಿಸುವೆನು. ಒಂದು ಮಾತನ್ನಾದರೂ ನಿಮ್ಮಿಂದ ಹಿಂದೆಗೆಯುವುದಿಲ್ಲ,” ಎಂದು ಹೇಳಿದನು. 5 ಆಗ ಅವರು ಯೆರೆಮೀಯನಿಗೆ, “ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾರೋ, ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ, ಯೆಹೋವ ದೇವರು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳುವಾಗ, ನಮಗೆ ಒಳ್ಳೆಯದಾಗುವ ಹಾಗೆ, 6 ನಾವು ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇವೋ, ಆ ನಮ್ಮ ದೇವರಾದ ಯೆಹೋವ ದೇವರ ಮಾತನ್ನು ಅದು ಹಿತವಾದರೂ ಸರಿಯೇ, ಅಹಿತವಾದರೂ ಸರಿಯೇ ಕೇಳುವೆವು,” ಎಂದರು. 7 ಹತ್ತು ದಿವಸಗಳಾದ ಮೇಲೆ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂತು. 8 ಆಗ ಕಾರೇಹನ ಮಗ ಯೋಹಾನಾನನನ್ನೂ, ಅವನ ಸಂಗಡ ಇದ್ದ ಸೇನಾಪತಿಗಳೆಲ್ಲರನ್ನೂ, ಕಿರಿಯರು ಮೊದಲುಗೊಂಡು ಹಿರಿಯರೆಲ್ಲರವರೆಗೆ ಜನರೆಲ್ಲರನ್ನೂ ಕರೆದು, 9 ಅವರಿಗೆ ಹೇಳಿದ್ದೇನೆಂದರೆ, “ಯಾರ ಮುಂದೆ ನಿಮ್ಮ ವಿಜ್ಞಾಪನೆಯನ್ನು ತರುವುದಕ್ಕೆ ನನ್ನನ್ನು ಕಳುಹಿಸಿದ್ದೀರೋ, ಆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: 10 ‘ನೀವು ಇನ್ನು ಈ ದೇಶದಲ್ಲಿ ವಾಸಮಾಡಿದರೆ, ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತು ಹಾಕದೆ ನೆಡುವೆನು. ಏಕೆಂದರೆ ನಾನು ನಿಮಗೆ ಮಾಡಿರುವ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಡುತ್ತೇನೆ. 11 ನೀವು ಭಯಪಡುವ ಬಾಬಿಲೋನಿನ ಅರಸನಿಗೆ ಭಯಪಡಬೇಡಿರಿ; ಅವನಿಗೆ ಭಯಪಡಬೇಡಿರೆಂದು ಯೆಹೋವ ದೇವರು ಹೇಳುತ್ತಾರೆ; ಏಕೆಂದರೆ ನಿಮ್ಮನ್ನು ರಕ್ಷಿಸುವುದಕ್ಕೂ, ಅವನ ಕೈಯಿಂದ ನಿಮ್ಮನ್ನು ತಪ್ಪಿಸುವುದಕ್ಕೂ ನಾನು ನಿಮ್ಮ ಸಂಗಡ ಇದ್ದೇನೆ. 12 ಇದಲ್ಲದೆ ನಾನು ನಿಮಗೆ ಕರುಣೆಯನ್ನು ತೋರಿಸುವೆನು; ಆಗ ಅವನು ನಿಮ್ಮನ್ನು ಕರುಣಿಸಿ, ನಿಮ್ಮನ್ನು ತಿರುಗಿ ನಿಮ್ಮ ಸ್ವದೇಶಕ್ಕೆ ಬರಮಾಡುವನು.’ 13 “ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ‘ನಾವು ಈ ದೇಶದಲ್ಲಿ ವಾಸಮಾಡುವುದಿಲ್ಲ’ ಎಂದು ಹೇಳಿದರೆ, 14 ನೀವು, ‘ಇಲ್ಲ, ನಾವು ಈಜಿಪ್ಟ್ ದೇಶಕ್ಕೆ ಹೋಗುತ್ತೇವೆ; ಅಲ್ಲಿ ನಾವು ಯುದ್ಧವನ್ನು ನೋಡುವುದಿಲ್ಲ, ತುತೂರಿಯ ಶಬ್ದವನ್ನು ಕೇಳುವುದಿಲ್ಲ, ರೊಟ್ಟಿಯ ವಿಷಯ ಕ್ಷಾಮವಾಗುವುದಿಲ್ಲ.’ ಅಲ್ಲಿ ವಾಸಮಾಡುವೆವೆಂದು ಹೇಳಿದರೆ, 15 ಯೆಹೂದದ ಶೇಷವೇ, ಹಾಗಾದರೆ ಈಗ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀವು ನಿಶ್ಚಯವಾಗಿ ನಿಮ್ಮ ಮುಖಗಳನ್ನು ಈಜಿಪ್ಟಿಗೆ ಹೋಗುವಹಾಗೆ ಇಟ್ಟರೆ ಮತ್ತು ನೀವು ಅಲ್ಲಿ ತಂಗುವುದಕ್ಕೆ ಹೋದರೆ, 16 ನೀವು ಭಯಪಡುವ ಖಡ್ಗವು ಈಜಿಪ್ಟ್ ದೇಶದಲ್ಲಿ ನಿಮ್ಮನ್ನು ಹಿಡಿಯುವುದು. ನೀವು ಹೆದರಿಕೊಳ್ಳುವ ಕ್ಷಾಮವು ಈಜಿಪ್ಟ್ ದೇಶಕ್ಕೆ ನಿಮ್ಮನ್ನು ಹಿಂದಟ್ಟುವುದು, ನೀವು ಅಲ್ಲೇ ಸಾಯುವಿರಿ. 17 ಈಜಿಪ್ಟಿಗೆ ಹೋಗಿ ಅಲ್ಲಿ ವಾಸಿಸುವ ಹಾಗೆ ತಮ್ಮ ಮುಖಗಳನ್ನಿಡುವ ಮನುಷ್ಯರಿಗೆಲ್ಲಾ ಹೀಗಾಗುವುದು. ಅವರು ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಸಾಯುವರು. ನಾನು ಅವರ ಮೇಲೆ ಬರಮಾಡುವ ಕೇಡಿಗೆ ತಪ್ಪಿಸಿಕೊಂಡು ಉಳಿಯುವವನು ಒಬ್ಬನೂ ಅವರೊಳಗೆ ಇರುವುದಿಲ್ಲ.’ 18 ಇಸ್ರಾಯೇಲಿನ ದೇವರೂ, ಸರ್ವಶಕ್ತರೂ ಆದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಯೆರೂಸಲೇಮಿನ ಮೇಲೆ ಹೇಗೆ ಸುರಿಯಿತೋ, ಹಾಗೆಯೇ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೇ, ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ಸ್ಥಳವನ್ನು ನೀವು ಮತ್ತೆ ನೋಡಲಾರಿರಿ.’ 19 “ಯೆಹೂದದ ಶೇಷವೇ, ಯೆಹೋವ ದೇವರು ನಿಮ್ಮ ವಿಷಯವಾಗಿ ಹೇಳಿದ್ದೇನೆಂದರೆ: ‘ಈಜಿಪ್ಟಿಗೆ ಹೋಗಬೇಡಿರಿ,’ ಇದನ್ನು ಖಚಿತಪಡಿಸಿಕೊಳ್ಳಿ: ನಾನು ಇಂದು ನಿಮಗೆ ಎಚ್ಚರಿಕೆ ನೀಡುತ್ತೇನೆ. 20 ನೀವೇ ನನ್ನ ಬಳಿಗೆ ಬಂದು ನಮ್ಮ ದೇವರಾದ ಯೆಹೋವ ದೇವರನ್ನು ನಮಗಾಗಿ ಪ್ರಾರ್ಥಿಸು, ‘ನಮ್ಮ ದೇವರಾದ ಯೆಹೋವ ದೇವರು ಯಾವ ಅಪ್ಪಣೆ ಕೊಡುತ್ತಾರೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು,’ ಎಂದು ಹೇಳಿ ಮಾರಣಾಂತಿಕ ತಪ್ಪನ್ನು ಮಾಡಿದ್ದೀರಿ. 21 ನಾನು ಈ ಹೊತ್ತು ಅದನ್ನು ನಿಮಗೆ ತಿಳಿಸಿದ್ದೇನೆ. ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಶಬ್ದವನ್ನಾದರೂ ಅವರು ಯಾವುದರ ವಿಷಯವಾಗಿ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೋ ಅದರಲ್ಲಿ ಯಾವುದನ್ನಾದರೂ ಕೇಳಲಿಲ್ಲ. 22 ಹೀಗಿರುವುದರಿಂದ ನೀವು ವಾಸಿಸುವುದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಸಾಯುವಿರೆಂದು ಈಗ ನಿಶ್ಚಯವಾಗಿ ತಿಳಿದುಕೊಳ್ಳಿರಿ,” ಎಂದನು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.