Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 24 - ಕನ್ನಡ ಸಮಕಾಲಿಕ ಅನುವಾದ


ಅಂಜೂರ ಹಣ್ಣಿನ ಎರಡು ಬುಟ್ಟಿಗಳು

1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಯೆಹೂದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ, ಯೆಹೂದದ ಪ್ರಧಾನರನ್ನೂ, ಬಡಗಿಯರನ್ನೂ, ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಗೆ ಒಯ್ದನು. ಯೆಹೋವ ದೇವರ ದೇವಾಲಯದ ಮುಂದೆ ಇಟ್ಟಿರುವ ಎರಡು ಬುಟ್ಟಿ ಅಂಜೂರದ ಹಣ್ಣುಗಳನ್ನು ಯೆಹೋವ ದೇವರು ನನಗೆ ತೋರಿಸಿದರು.

2 ಒಂದು ಬುಟ್ಟಿಯಲ್ಲಿ ಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳು ತುಂಬಿದ್ದವು. ಅವು ಅತ್ಯುತ್ತಮವಾದ ಅಂಜೂರದ ಹಣ್ಣುಗಳು. ಇನ್ನೊಂದು ಬುಟ್ಟಿಯಲ್ಲಿ ಯಾರೂ ತಿನ್ನಲಾಗದಷ್ಟು ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.

3 ಆಗ ಯೆಹೋವ ದೇವರು ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ.

4 ಆಗ ಯೆಹೋವ ದೇವರು ನನಗೆ ದಯಪಾಲಿಸಿದ ಸಂದೇಶ ಇದು:

5 “ಇಸ್ರಾಯೇಲರ ದೇವರಾದ ಯೆಹೋವ ದೇವರು ಹೇಳುವುದನ್ನು ಕೇಳು, ‘ನಾನು ಈ ಸ್ಥಳದಿಂದ ಬಾಬಿಲೋನಿಗೆ ಕಳುಹಿಸಿಬಿಟ್ಟು, ಅಲ್ಲಿ ಸೆರೆಯಾಳುಗಳಾಗಿರುವ ಯೆಹೂದ್ಯರು ಈ ಉತ್ತಮವಾದ ಅಂಜೂರದ ಹಣ್ಣುಗಳಂತವರು. ನಾನು ಅವರನ್ನು ಒಳ್ಳೆಯವರಂತೆ ಪರಿಗಣಿಸುತ್ತೇನೆ.

6 ಏಕೆಂದರೆ ನಾನು ಅವರ ಒಳ್ಳೆಯದರ ಮೇಲೆ ನನ್ನ ದೃಷ್ಟಿಯನ್ನು ಇಟ್ಟುಕೊಳ್ಳುತ್ತೇನೆ. ಈ ದೇಶಕ್ಕೆ ಅವರನ್ನು ತಿರುಗಿ ಬರಮಾಡುವೆನು. ಕೆಡವಿಹಾಕದೆ ಅವರನ್ನು ಕಟ್ಟುವೆನು. ಕೀಳದೆ ಅವರನ್ನು ನೆಡುವೆನು.

7 ನಾನೇ ಯೆಹೋವನೆಂದು ನನ್ನನ್ನು ತಿಳಿದುಕೊಳ್ಳುವುದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಹಿಂದಿರುಗಿಕೊಳ್ಳುವರು.

8 “ ‘ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳಾಗಿರುವ ಆ ಕೆಟ್ಟ ಅಂಜೂರದ ಹಣ್ಣುಗಳ ಹಾಗೆ ನಿಶ್ಚಯವಾಗಿ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಈ ದೇಶದಲ್ಲಿ ಉಳಿಯುವ ಯೆರೂಸಲೇಮಿನ ಶೇಷವನ್ನೂ, ಈಜಿಪ್ಟ್ ದೇಶದಲ್ಲಿ ವಾಸಿಸುವವರನ್ನೂ ಒಪ್ಪಿಸುತ್ತೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ.

9 ‘ನಾನು ಅವರನ್ನು ಅಸಹ್ಯಪಡಿಸುತ್ತೇನೆ. ನಿಂದೆಗೂ, ಗಾದೆಗೂ, ಹಾಸ್ಯಕ್ಕೂ, ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.

10 ನಾನು ಅವರಿಗೂ, ಅವರ ತಂದೆಗಳಿಗೂ ಕೊಟ್ಟ ದೇಶದೊಳಗಿಂದ ಅವರು ನಾಶವಾಗುವವರೆಗೂ ಖಡ್ಗವನ್ನೂ, ಕ್ಷಾಮವನ್ನೂ, ವ್ಯಾಧಿಯನ್ನೂ ಅವರಲ್ಲಿ ಕಳುಹಿಸುವೆನು.’ ”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು