Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 3 - ಕನ್ನಡ ಸಮಕಾಲಿಕ ಅನುವಾದ


ಸಮಾಧಾನದ ಸಮರ್ಪಣೆ

1 “ ‘ಯಾರಾದರು ಸಮಾಧಾನ ಸಮರ್ಪಣೆಗಾಗಿ ಬಲಿದಾನ ಮಾಡಬೇಕಾದರೆ, ಅಂಥವನು ಸಮರ್ಪಿಸುವ ಪ್ರಾಣಿ ದನಕರುವಾಗಿದ್ದಲ್ಲಿ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಯೆಹೋವ ದೇವರ ದೃಷ್ಟಿಯಲ್ಲಿ ಕಳಂಕರಹಿತವಾಗಿರಬೇಕು.

2 ಅವನು ಅರ್ಪಿಸಬೇಕಾದ ಆ ಪ್ರಾಣಿಯನ್ನು ಯೆಹೋವ ದೇವರ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈ ಇಡಬೇಕು. ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.

3 ಅವನು ಸಮಾಧಾನದ ಕಾಣಿಕೆಯ ಯಜ್ಞಾರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ,

4 ಎರಡು ಮೂತ್ರ ಜನಕಾಂಗಗಳನ್ನೂ, ಪಕ್ಕೆಯ ಬದಿಯಲ್ಲಿಯ ಅವುಗಳ ಮೇಲಿರುವ ಕೊಬ್ಬನ್ನೂ, ಮೂತ್ರ ಜನಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಯೆಹೋವ ದೇವರಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು.

5 ಆರೋನನ ಪುತ್ರರು ಅದನ್ನು ಬಲಿಪೀಠದಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನಬಲಿಯಾಗಿ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು, ಯೆಹೋವ ದೇವರಿಗೆ ಸುವಾಸನೆಯಾಗಿರುವುದು.

6 “ ‘ಅವನ ಕಾಣಿಕೆಯು ಸಮಾಧಾನದ ಬಲಿಯಾಗಿ, ಅದು ಯೆಹೋವ ದೇವರಿಗೆ ತನ್ನ ಆಡುಕುರಿಗಳಿಂದಾದ ಕಾಣಿಕೆಯಾಗಿದ್ದರೆ, ಗಂಡಾಗಲಿ, ಹೆಣ್ಣಾಗಲಿ ಕಳಂಕರಹಿತವಾದದ್ದನ್ನು ಅವನು ಸಮರ್ಪಿಸಬೇಕು.

7 ಅವನು ಕುರಿಮರಿಯನ್ನು ಅರ್ಪಣೆಗೋಸ್ಕರ ಅರ್ಪಿಸುವುದಾದರೆ, ಅದನ್ನು ಅವನು ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು.

8 ಅವನು ತನ್ನ ಅರ್ಪಣೆಯ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು, ಅದನ್ನು ದೇವದರ್ಶನದ ಗುಡಾರದ ಎದುರಿನಲ್ಲಿ ವಧಿಸಬೇಕು. ಇದಲ್ಲದೆ ಆರೋನನ ಪುತ್ರರು ಬಲಿಪೀಠದ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸಬೇಕು.

9 ಸಮಾಧಾನದ ಬಲಿಗಾಗಿ ಅದರ ಇಡೀ ಹಿಂಭಾಗವನ್ನೂ, ಅದರ ಕೊಬ್ಬನ್ನೂ, ಅವನು ಬೆನ್ನೆಲುಬಿನಿಂದ ತೆಗೆದು ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ, ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ,

10 ಎರಡು ಮೂತ್ರ ಜನಕಾಂಗಗಳನ್ನೂ, ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ, ಕಾಳಿಜದ ಉತ್ತಮ ಭಾಗ, ಮೂತ್ರಜನಕಾಂಗಗಳೊಂದಿಗೆ ವಪೆಯ ಮೇಲಿರುವ ಪೊರೆಯನ್ನೂ ತೆಗೆದುಕೊಂಡು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.

11 ಯಾಜಕನು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುವುದು.

12 “ ‘ಸಮರ್ಪಣೆಯು ಮೇಕೆಯಾಗಿದ್ದರೆ, ಅದನ್ನು ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು.

13 ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ದೇವದರ್ಶನದ ಗುಡಾರದ ಮುಂದೆ ಅದನ್ನು ವಧಿಸಬೇಕು. ಆಗ ಆರೋನನ ಪುತ್ರರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.

14 ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ, ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ,

15 ಎರಡು ಮೂತ್ರ ಜನಕಾಂಗಗಳನ್ನೂ ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗ, ಮೂತ್ರಜನಕಾಂಗಗಳೊಂದಿಗೆ ವಪೆಯ ಮೇಲಿರುವ ಪೊರೆಯನ್ನೂ ತೆಗೆದುಕೊಂಡು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.

16 ಯಾಜಕನು ಅವುಗಳನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಸುವಾಸನೆಯ ಯಜ್ಞಾರ್ಪಣೆಯ ಆಹಾರವಾಗಿರುವುದು. ಎಲ್ಲಾ ಕೊಬ್ಬು ಯೆಹೋವ ದೇವರದೇ.

17 “ ‘ನೀವು ಕೊಬ್ಬನ್ನಾಗಲಿ, ರಕ್ತವನ್ನಾಗಲಿ ತಿನ್ನದೆ ಇರುವುದು ನಿಮ್ಮ ಸಂತತಿಯವರಿಗೆಲ್ಲಾ ನಿಮ್ಮ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವುದು,’ ” ಎಂದು ಹೇಳಿದರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು