Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 2 - ಕನ್ನಡ ಸಮಕಾಲಿಕ ಅನುವಾದ


ಧಾನ್ಯ ಸಮರ್ಪಣೆ

1 “ ‘ಯಾರಾದರೂ ಯೆಹೋವ ದೇವರಿಗೆ ಧಾನ್ಯ ಸಮರ್ಪಣೆಯನ್ನು ಸಮರ್ಪಿಸುವುದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಸಬೇಕು, ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು.

2 ಇದಲ್ಲದೆ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಅವನು ಹಿಟ್ಟಿನಲ್ಲಿಯೂ, ಎಣ್ಣೆಯಲ್ಲಿಯೂ ಒಂದು ಹಿಡಿಯನ್ನು ಅದರ ಎಲ್ಲಾ ಸಾಂಬ್ರಾಣಿಯ ಸಂಗಡ ತೆಗೆದುಕೊಳ್ಳಬೇಕು. ಯಾಜಕನು ಅದನ್ನು ಜ್ಞಾಪಕಾರ್ಥವಾಗಿ ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿ ಬೆಂಕಿಯಿಂದ ಸುಡಬೇಕು.

3 ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು.

4 “ ‘ನೀನು ಒಲೆಯಲ್ಲಿ ಸುಟ್ಟ ಧಾನ್ಯ ಸಮರ್ಪಣೆಯನ್ನು ಕಾಣಿಕೆಯಾಗಿ ತರುವುದಾದರೆ, ಅದು ಹುಳಿಯಿಲ್ಲದ ಮತ್ತು ಎಣ್ಣೆಯಿಂದ ಬೆರೆಸಿದ ನಯವಾದ ಹಿಟ್ಟಿನ ರೊಟ್ಟಿಗಳು ಇಲ್ಲವೆ ಹುಳಿಯಿಲ್ಲದ ಎಣ್ಣೆ ಹೊಯ್ದ ದೋಸೆಗಳಾಗಿರಬೇಕು.

5 ನಿನ್ನ ಕಾಣಿಕೆಯು ಬೋಗುಣಿಯಲ್ಲಿ ಬೇಯಿಸಿದ ಧಾನ್ಯ ಸಮರ್ಪಣೆಯಾಗಿದ್ದರೆ, ಅದು ಹುಳಿಯಿಲ್ಲದ ನಯವಾದ ಹಿಟ್ಟಿನಿಂದ ಎಣ್ಣೆ ಮಿಶ್ರಿತವಾದದ್ದು ಆಗಿರಬೇಕು.

6 ನೀನು ಅದನ್ನು ತುಂಡುಗಳನ್ನಾಗಿ ವಿಭಾಗಿಸಿ, ಅದರ ಮೇಲೆ ಎಣ್ಣೆ ಸುರಿಯಬೇಕು, ಅದು ಆಹಾರ ಸಮರ್ಪಣೆಯಾಗಿದೆ.

7 ನಿನ್ನ ಕಾಣಿಕೆಯು ತವೆಯಲ್ಲಿ ಬೇಯಿಸಿದ ಧಾನ್ಯವಾಗಿದ್ದರೆ, ಅದು ನಯವಾದ ಎಣ್ಣೆಯಿಂದ ಕೂಡಿದ ಹಿಟ್ಟಿನಿಂದ ಮಾಡಿದ್ದಾಗಿರಬೇಕು.

8 ನೀನು ಇವುಗಳಿಂದ ಮಾಡಿದ ಧಾನ್ಯ ಸಮರ್ಪಣೆಯನ್ನು ಯೆಹೋವ ದೇವರಿಗೆ ತರಬೇಕು. ಅದು ಯಾಜಕನಿಗೆ ಒಪ್ಪಿಸಿದಾಗ, ಅವನು ಅದನ್ನು ಬಲಿಪೀಠದ ಬಳಿಗೆ ತರುವನು.

9 ಆಗ ಯಾಜಕನು ಅದರಿಂದ ಜ್ಞಾಪಕಾರ್ಥವಾಗಿ ಧಾನ್ಯ ಸಮರ್ಪಣೆಯನ್ನಾಗಿ ತೆಗೆದುಕೊಂಡು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು, ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿರುವುದು.

10 ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು.

11 “ ‘ಯೆಹೋವ ದೇವರಿಗೆ ನೀನು ತರುವ ಧಾನ್ಯ ಸಮರ್ಪಣೆಯು ಯಾವುದೂ ಹುಳಿಯಿಂದ ಮಾಡಿದ್ದಾಗಿರಬಾರದು. ಏಕೆಂದರೆ ಯೆಹೋವ ದೇವರಿಗೆ ನೀವು ಬೆಂಕಿಯಿಂದ ಮಾಡುವ ಯಾವ ಸಮರ್ಪಣೆಯಲ್ಲಿ ಹುಳಿಯನ್ನಾಗಲಿ, ಜೇನನ್ನಾಗಲಿ ಬೆರೆಸಬಾರದು.

12 ಪ್ರಥಮ ಫಲದ ಕಾಣಿಕೆಯ ವಿಷಯದಲ್ಲಿಯಾದರೋ ನೀವು ಅವುಗಳನ್ನು ಯೆಹೋವ ದೇವರಿಗೆ ಸಮರ್ಪಿಸಬೇಕು. ಆದರೆ ಅವುಗಳನ್ನು ಬಲಿಪೀಠದ ಮೇಲೆ ಸುವಾಸನೆಗಾಗಿ ಸುಡಬಾರದು.

13 ನಿನ್ನ ಪ್ರತಿಯೊಂದು ಧಾನ್ಯ ಸಮರ್ಪಣೆಯೂ ಉಪ್ಪಿನಲ್ಲಿ ಬೆರಕೆಯಾಗಿರಬೇಕು. ನಿನ್ನ ದೇವರ ಒಡಂಬಡಿಕೆಯ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು. ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು.

14 “ ‘ನೀನು ನಿನ್ನ ಪ್ರಥಮ ಫಲಗಳ ಧಾನ್ಯ ಸಮರ್ಪಣೆಯನ್ನು ಯೆಹೋವ ದೇವರಿಗೆ ಮಾಡಿದರೆ, ನಿನ್ನ ಪ್ರಥಮ ಫಲ ಧಾನ್ಯ ಕಾಣಿಕೆಯನ್ನು ಬೆಂಕಿಯಿಂದ ಸುಟ್ಟ ಕಾಳಿನ ಹಸಿರು ತೆನೆಗಳನ್ನೂ ಅಲ್ಲದೆ ತುಂಬಿದ ತೆನೆಗಳಿಂದ ಬಡಿದ ಒಣಗಿದ ಕಾಳುಗಳನ್ನೂ ಸಮರ್ಪಿಸಬೇಕು.

15 ನೀನು ಅದರ ಮೇಲೆ ಎಣ್ಣೆಯನ್ನು ಸಾಂಬ್ರಾಣಿಯನ್ನು ಹಾಕು. ಇದೇ ಧಾನ್ಯ ಸಮರ್ಪಣೆ.

16 ಯಾಜಕನು ಬಡಿದ ಕಾಳುಗಳಲ್ಲಿ ಕೆಲವು ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿಯನ್ನು ಜ್ಞಾಪಕಾರ್ಥವಾಗಿ ಸುಡಬೇಕು. ಇದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು