ಮಾರ್ಕ 16 - ಕನ್ನಡ ಸಮಕಾಲಿಕ ಅನುವಾದಪುನರುತ್ಥಾನ 1 ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಸಲೋಮೆಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡುಕೊಂಡು ಬಂದರು. 2 ವಾರದ ಮೊದಲನೆಯ ದಿನ ಮುಂಜಾನೆ ಸೂರ್ಯೋದಯವಾಗಲು ಅವರು ಸಮಾಧಿಯ ಬಳಿಗೆ ಬರುವಾಗ, 3 “ಸಮಾಧಿಯ ದ್ವಾರದಿಂದ ಆ ಬಂಡೆಯನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 4 ಏಕೆಂದರೆ ಆ ಬಂಡೆ ಬಹಳ ದೊಡ್ಡದಾಗಿತ್ತು. ಆದರೆ ಅವರು ಮತ್ತೆ ಕಂಡಾಗ ಆ ಬಂಡೆ ಉರುಳಿಸಲಾಗಿತ್ತು. 5 ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದಾಗ, ಬಿಳಿ ಉಡುಪನ್ನು ತೊಟ್ಟುಕೊಂಡಿದ್ದ ಒಬ್ಬ ಯುವಕನು ಬಲಗಡೆಯಲ್ಲಿ ಕುಳಿತಿರುವುದನ್ನು ಕಂಡು ಭಯಭ್ರಾಂತರಾದರು. 6 ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲಾದ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರೊ? ಅವರು ಜೀವಿತರಾಗಿ ಎದ್ದಿದ್ದಾರೆ! ಇಲ್ಲಿ ಇಲ್ಲ; ಅವರನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ. 7 ಆದರೆ ನೀವು ಹೊರಟುಹೋಗಿ ಯೇಸು ನಿಮಗೆ ಹೇಳಿದಂತೆ, ‘ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ, ಅಲ್ಲಿ ನೀವು ಯೇಸುವನ್ನು ಕಾಣುವಿರಿ’ ಎಂದು ಅವರ ಶಿಷ್ಯರಿಗೆ ಮತ್ತು ಪೇತ್ರನಿಗೆ ಹೇಳಿರಿ,” ಎಂದನು. 8 ಅವರು ವಿಸ್ಮಯಗೊಂಡು ಭಯದಿಂದ ನಡುಗುತ್ತಾ ಸಮಾಧಿಯ ಬಳಿಯಿಂದ ಓಡಿಹೋದರು. ಅವರು ಹೆದರಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ. 9 ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದ ಮೇಲೆ ತಾವು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಅವರು ಮೊದಲು ಕಾಣಿಸಿಕೊಂಡರು. 10 ಯೇಸುವಿನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಯೇಸುವಿನ ಬಗ್ಗೆ ಹೇಳಿದಳು. 11 ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ, ಶಿಷ್ಯರು ನಂಬಲಿಲ್ಲ. 12 ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಯೇಸು ಅವರಿಗೆ ಬೇರೊಂದು ರೀತಿಯಲ್ಲಿ ಕಾಣಿಸಿಕೊಂಡರು. 13 ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಇವರನ್ನೂ ಅವರು ನಂಬಲಿಲ್ಲ. 14 ತರುವಾಯ ಊಟಕ್ಕೆ ಕುಳಿತಿದ್ದ ಹನ್ನೊಂದು ಮಂದಿಗೆ ಯೇಸು ಕಾಣಿಸಿಕೊಂಡರು. ತಾವು ಜೀವಿತರಾಗಿ ಎದ್ದು ಬಂದ ಮೇಲೆ ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅಪನಂಬಿಕೆಯನ್ನೂ ಹೃದಯದ ಕಾಠಿಣ್ಯವನ್ನೂ ಯೇಸು ಗದರಿಸಿದರು. 15 ಯೇಸು ಅವರಿಗೆ, “ನೀವು ಜಗತ್ತಿನ ಎಲ್ಲಾ ಕಡೆಗಳಿಗೆ ಹೋಗಿ ಸರ್ವಸೃಷ್ಟಿಗೂ ಸುವಾರ್ತೆಯನ್ನು ಸಾರಿರಿ. 16 ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು. 17 ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವುವು: ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಓಡಿಸುವರು, ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು. 18 ಅವರು ಸರ್ಪಗಳನ್ನು ಎತ್ತುವರು ಮತ್ತು ಮಾರಣಾಂತಿಕವಾದ ಯಾವುದನ್ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವುದಿಲ್ಲ. ಅವರು ರೋಗಿಗಳ ಮೇಲೆ ಕೈಗಳನ್ನಿಟ್ಟಾಗ ರೋಗಿಗಳು ಸ್ವಸ್ಥರಾಗುವರು,” ಎಂದು ಹೇಳಿದರು. 19 ಕರ್ತ ಯೇಸು ಅವರೊಂದಿಗೆ ಮಾತನಾಡಿದ ನಂತರ, ಅವರು ಪರಲೋಕಕ್ಕೆ ಏರಿ ದೇವರ ಬಲಪಾರ್ಶ್ವದಲ್ಲಿ ಕುಳಿತುಕೊಂಡರು. 20 ಶಿಷ್ಯರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು. ಕರ್ತನು ಅವರ ಜೊತೆಯಲ್ಲಿ ಕೆಲಸ ಮಾಡುತ್ತಾ, ಸೂಚಕಕಾರ್ಯಗಳಿಂದ ತಮ್ಮ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.