ಮಲಾಕಿ 4 - ಕನ್ನಡ ಸಮಕಾಲಿಕ ಅನುವಾದನ್ಯಾಯತೀರ್ಪು ಮತ್ತು ಒಡಂಬಡಿಕೆಯ ನವೀಕರಣ 1 “ಖಂಡಿತವಾಗಿ ಆ ದಿನ ಬರುತ್ತದೆ, ಅದು ಒಲೆಯಂತೆ ಉರಿಯುತ್ತದೆ. ಆಗ ಗರ್ವಿಷ್ಠರೆಲ್ಲರೂ ಕೆಟ್ಟದ್ದನ್ನು ಮಾಡುವವರೆಲ್ಲರೂ ಹುಲ್ಲಿನಂತಿರುವರು. ಬರುವ ಆ ದಿನವು ಅವರನ್ನು ಸುಟ್ಟುಬಿಡುವುದು. ಬೇರನ್ನಾದರೂ, ಕೊಂಬೆಯನ್ನಾದರೂ ಅವರಿಗೆ ಬಿಡದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 2 ಆದರೆ ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೆ, ನೀತಿ ಸೂರ್ಯನು ತಮ್ಮ ಕಿರಣಗಳಿಂದ ಸ್ವಸ್ಥತೆಯನ್ನುಂಟು ಮಾಡುವವನಾಗಿ ಉದಯಿಸುವನು. ನೀವು ಹೊರಟು ಕೊಟ್ಟಿಗೆಯಿಂದ ಹೊರಬಂದ ಕರುಗಳ ಹಾಗೆ ಕುಣಿದಾಡುವಿರಿ. 3 ಆಗ ದುಷ್ಟರನ್ನು ತುಳಿದುಬಿಡುವಿರಿ. ಏಕೆಂದರೆ ನಾನು ಕಾರ್ಯಸಾಧಿಸುವ ದಿವಸದಲ್ಲಿ ಅವರು ನಿಮ್ಮ ಪಾದಗಳ ಕೆಳಗೆ ಬೂದಿಯಾಗಿರುವರೆಂದು ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 4 “ನನ್ನ ಸೇವಕನಾದ ಮೋಶೆಯ ನಿಯಮವನ್ನು ನಾನು ಅವನಿಗೆ ಹೋರೇಬಿನಲ್ಲಿ ಸಮಸ್ತ ಇಸ್ರಾಯೇಲಿಗೋಸ್ಕರ ಆಜ್ಞಾಪಿಸಿದ್ದನ್ನೂ ವಿಧಿ ನಿಯಮಗಳನ್ನೂ ಜ್ಞಾಪಕಮಾಡಿಕೊಳ್ಳಿರಿ. 5 “ಇಗೋ, ಯೆಹೋವ ದೇವರ ಮಹಾ ಭಯಂಕರವಾದ ದಿವಸವು ಬರುವುದಕ್ಕಿಂತ ಮುಂಚೆ ನಿಮಗೆ ಪ್ರವಾದಿಯಾದ ಎಲೀಯನನ್ನು ಕಳುಹಿಸುವೆನು. 6 ನಾನು ಬಂದು ಭೂಮಿಯನ್ನು ಶಾಪದಿಂದ ಹೊಡೆಯದ ಹಾಗೆ ಅವನು ತಂದೆಯರ ಹೃದಯವನ್ನು ಮಕ್ಕಳ ಕಡೆಗೂ ಮಕ್ಕಳ ಹೃದಯವನ್ನು ತಮ್ಮ ತಂದೆಯರ ಕಡೆಗೂ ತಿರುಗಿಸುವನು.” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.