Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಫಿಲಿಪ್ಪಿಯವರಿಗೆ 3 - ಕನ್ನಡ ಸಮಕಾಲಿಕ ಅನುವಾದ


ಸ್ವಶರೀರದಲ್ಲಿ ಭರವಸೆಯಿಡದಿರುವುದು

1 ಕಡೆಯದಾಗಿ ನನ್ನ ಪ್ರಿಯರೇ, ಕರ್ತನಲ್ಲಿ ಆನಂದಿಸಿರಿ. ಬರೆದದ್ದನ್ನೇ ನಿಮಗೆ ಬರೆಯುವುದರಲ್ಲಿ ನನಗೆ ಬೇಸರವಿಲ್ಲ, ಅದು ನಿಮಗೆ ಸುರಕ್ಷಿತವೇ.

2 ನಾಯಿಗಳಂತೆ ವರ್ತಿಸುವವರಿಗೆ ಎಚ್ಚರಿಕೆ. ದುಷ್ಟಕಾರ್ಯಮಾಡುವವರಿಗೆ ಎಚ್ಚರಿಕೆ, ಸುಳ್ಳು ಸುನ್ನತಿಗಾಗಿ ವಾಗ್ವಾದಿಸುವವರಿಗೆ ಎಚ್ಚರಿಕೆ.

3 ಏಕೆಂದರೆ ದೇವರನ್ನು ಪವಿತ್ರಾತ್ಮರಿಂದ ಆರಾಧಿಸಿ ಕ್ರಿಸ್ತ ಯೇಸುವನ್ನು ಮಹಿಮೆಪಡಿಸುತ್ತಾ ಹರ್ಷಗೊಳ್ಳುವವರೂ ಮಾಂಸದಲ್ಲಿ ಭರವಸೆಯಿಡದ ನಾವೇ ಸುನ್ನತಿಯಾಗಿದ್ದೇವೆ.

4 ಮಾಂಸದಲ್ಲಿ ಭರವಸೆ ಇಡಲು ನನಗೆ ಸಾಕಷ್ಟು ಕಾರಣಗಳಿವೆ. ಬೇರೆ ಯಾವನಾದರೂ ಮಾನವೀಯ ಪ್ರಯತ್ನಗಳಲ್ಲಿ ಭರವಸೆ ಇಡಬಹುದೆಂದು ಭಾವಿಸುವುದಾದರೆ, ನಾನು ಅದಕ್ಕಿಂತಲೂ ಹೆಚ್ಚಾಗಿ ಹೇಳಬಹುದು:

5 ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, ನಾನು ಇಸ್ರಾಯೇಲ್ ವಂಶದವನು; ಬೆನ್ಯಾಮೀನನ ಕುಲದವನು; ಹೀಬ್ರಿಯರಿಂದ ಹುಟ್ಟಿದ ಹೀಬ್ರಿಯನು; ಮೋಶೆಯ ನಿಯಮದ ಅನುಸಾರವಾಗಿ ನಾನು ಫರಿಸಾಯನು.

6 ಆಸಕ್ತಿಯನ್ನು ನೋಡಿದರೆ, ನಾನು ಸಭೆಯ ಹಿಂಸಕನು; ಮೋಶೆಯ ನಿಯಮದಲ್ಲಿರುವ ನೀತಿಯ ಅನುಸಾರವಾಗಿ ನಾನು ನಿರ್ದೋಷಿ.

7 ನನಗೆ ಲಾಭವಾಗಿದ್ದ ಎಲ್ಲವನ್ನೂ ಈಗ ನಾನು ಕ್ರಿಸ್ತನ ನಿಮಿತ್ತ ನಷ್ಟವೆಂದು ಎಣಿಸುತ್ತೇನೆ.

8 ಇದಲ್ಲದೆ, ನನ್ನ ಕರ್ತದೇವರು ಆಗಿರುವ ಕ್ರಿಸ್ತ ಯೇಸುವನ್ನು ಅರಿತುಕೊಳ್ಳುವುದೇ ಅತಿ ಶ್ರೇಷ್ಠವಾದುದ್ದೆಂದು, ನಾನು ಎಲ್ಲವನ್ನೂ ನಷ್ಟವೆಂದು ಎಣಿಸುತ್ತೇನೆ. ಕ್ರಿಸ್ತನನ್ನೇ ಲಾಭವನ್ನಾಗಿಸಿಕೊಳ್ಳಲು ನಾನು ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ.

9 ಹೀಗೆ ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು ಅವರಲ್ಲಿ ಒಂದಾಗಿರ ಬಯಸುತ್ತೇನೆ. ನಿಯಮದಿಂದ ಬರುವ ಸ್ವನೀತಿಯನ್ನು ಆಶ್ರಯಿಸಿಕೊಳ್ಳದೆ, ಕ್ರಿಸ್ತನನ್ನು ನಂಬುವುದರ ಮೂಲಕ ವಿಶ್ವಾಸದ ಆಧಾರದ ಮೇಲೆ ದೇವರು ಕೊಡುವ ನೀತಿಯನ್ನೇ ಹೊಂದಿದವನಾಗಿರ ಬಯಸುತ್ತೇನೆ.

10 ಕ್ರಿಸ್ತನನ್ನೂ ಅವರ ಪುನರುತ್ಥಾನದ ಶಕ್ತಿಯನ್ನೂ ನಾನು ಅರಿತುಕೊಂಡು, ಕ್ರಿಸ್ತನ ಶ್ರಮೆಯಲ್ಲಿ ಪಾಲುಗೊಳ್ಳುವ ಅನ್ಯೋನ್ಯತೆಯನ್ನೂ ಅವರ ಮರಣದಲ್ಲಿ ಅವರ ಹಾಗೆ ಆಗುವುದನ್ನೂ ತಿಳಿಯುವುದೇ ನನ್ನ ಅಪೇಕ್ಷೆ.

11 ಹೇಗಾದರೂ, ನಾನೂ ಸಹ ಸತ್ತವರೊಳಗಿಂದ ಪುನರುತ್ಥಾನ ಹೊಂದುವೆನು.

12 ಇದನ್ನೆಲ್ಲಾ ನಾನು ಸಾಧಿಸಿದ್ದೇನೆಂದಲ್ಲ ಅಥವಾ ಈಗಲೇ ನಾನು ಪರಿಪೂರ್ಣನಾಗಿದ್ದೇನೆಂದೂ ನಾನು ಹೇಳುತ್ತಾ ಇಲ್ಲ. ಆದರೆ ಕ್ರಿಸ್ತ ಯೇಸು ನನ್ನನ್ನು ಅನುಸರಿಸಬೇಕೆಂದು ಯಾವುದಕ್ಕಾಗಿ ಆರಿಸಿಕೊಂಡರೋ, ಆ ಪೂರ್ಣತೆಯೆಡೆಗೆ ತಲುಪುವಂತೆ ನಾನು ಪರಿಶ್ರಮಿಸುತ್ತಿದ್ದೇನೆ.

13 ಪ್ರಿಯರೇ, ನಾನಂತೂ ಆ ಗುರಿಯನ್ನು ತಲುಪಿದ್ದೇನೆಂದು ಭಾವಿಸಿಕೊಂಡಿಲ್ಲ. ಆದರೆ ಒಂದು ಸಂಗತಿ, ನಾನು ಹಿಂದಿನ ವಿಷಯಗಳನ್ನು ಮರೆತುಬಿಟ್ಟು, ಮುಂದಿನ ವಿಷಯಗಳನ್ನು ಮಾತ್ರ ಲಕ್ಷ್ಯವನ್ನಾಗಿ ಮಾಡಿಕೊಂಡು ಅದನ್ನೇ ಪಡೆದುಕೊಳ್ಳುವುದಕ್ಕಾಗಿ ಓಡುತ್ತಿದ್ದೇನೆ.

14 ಹೀಗೆ ನಾನು ಕ್ರಿಸ್ತ ಯೇಸುವಿನಲ್ಲಿ ದೇವರ ಸ್ವರ್ಗೀಯ ಕರೆಯ ಬಹುಮಾನದ ಗುರಿಯೆಡೆಗೆ ಮುಂದೆ ಸಾಗುತ್ತಾ ಇದ್ದೇನೆ.


ಪೌಲನ ಮಾದರಿಯನ್ನು ಅನುಸರಿಸುವುದು

15 ಆದ್ದರಿಂದ ನಮ್ಮಲ್ಲಿ ಆತ್ಮಿಕ ಪರಿಪಕ್ವತೆಯುಳ್ಳವರು ಇದೇ ಮನೋಭಾವವುಳ್ಳವರಾಗಿರಬೇಕು. ಕೆಲವು ವಿಷಯಗಳ ಮೇಲೆ ಭಿನ್ನಾಭಿಪ್ರಾಯವಿದ್ದರೆ, ಅದನ್ನೂ ದೇವರು ನಿಮಗೆ ಸ್ಪಷ್ಟಪಡಿಸುವರು.

16 ಆದರೂ ಈಗಾಗಲೇ ನಾವು ಯಾವುದರಲ್ಲಿ ಮುಂದುವರೆದಿದ್ದೇವೋ ಆ ಸೂತ್ರದ ಪ್ರಕಾರ ಒಂದೇ ಮನಸ್ಸುಳ್ಳವರಾಗಿ ಬಾಳೋಣ.

17 ಪ್ರಿಯರೇ, ನೀವು ನನ್ನನ್ನು ಅನುಸರಿಸುವವರಾಗಿರಿ. ನಮ್ಮ ಹಾಗೆ ಬಾಳುವ ಆದರ್ಶದ ಪ್ರಕಾರ ನಡೆದುಕೊಳ್ಳುವವರನ್ನು ಗಮನಿಸಿರಿ.

18 ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ಬಾಳುತ್ತಿದ್ದಾರೆ. ಅವರ ವಿಷಯದಲ್ಲಿ ನಾನು ನಿಮಗೆ ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಕಣ್ಣೀರಿನಿಂದ ಹೇಳುತ್ತೇನೆ.

19 ವಿನಾಶನವೇ ಅವರ ಅಂತ್ಯವು. ಹೊಟ್ಟೆಯೇ ಅವರ ದೇವರು. ನಾಚಿಕೆ ಕಾರ್ಯಗಳಲ್ಲಿಯೇ ಅವರ ಪ್ರಭಾವ. ಅವರು ಲೌಕಿಕವಾದವುಗಳ ಮೇಲೆ ಮನಸ್ಸಿಡುತ್ತಾರೆ.

20 ಆದರೆ ನಮ್ಮ ಪೌರತ್ವವು ಪರಲೋಕದಲ್ಲಿದೆ. ನಾವು ಪರಲೋಕದಿಂದಲೇ ರಕ್ಷಕರಾಗಿರುವ ಒಬ್ಬರ ಬರುವಿಕೆಗಾಗಿ ಆತುರದಿಂದ ಎದುರುನೋಡುತ್ತಿದ್ದೇವೆ. ಅವರೇ ಕರ್ತದೇವರು ಆಗಿರುವ ಕ್ರಿಸ್ತ ಯೇಸು.

21 ಹೀಗೆ ಕ್ರಿಸ್ತ ಯೇಸು ಎಲ್ಲವನ್ನೂ ತಮಗೆ ಅಧೀನ ಮಾಡಿಕೊಳ್ಳುವ ತಮ್ಮ ಶಕ್ತಿಯ ಪ್ರಕಾರ, ಮಹಿಮೆಯುಳ್ಳ ತಮ್ಮ ದೇಹಕ್ಕೆ ಸಮವಾಗಿ ಸಾರೂಪ್ಯವಾಗುವಂತೆ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸುವರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು