Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 8 - ಕನ್ನಡ ಸಮಕಾಲಿಕ ಅನುವಾದ

1 ಜ್ಞಾನಿಯ ಹಾಗೆ ಇರುವವರು ಯಾರು? ಈ ಸಂಗತಿಗಳ ಅರ್ಥವನ್ನು ವಿವರಿಸಬಲ್ಲವರು ಯಾರು? ಒಬ್ಬ ಮನುಷ್ಯನ ಜ್ಞಾನವು ಅವನ ಮುಖವನ್ನು ಬೆಳಗಿಸುತ್ತದೆ ಜ್ಞಾನವು ಕಠಿಣ ಮುಖಭಾವವನ್ನು ಸಹ ಬದಲಾಯಿಸುತ್ತದೆ.


ಅರಸನ ಆಜ್ಞೆ ಪಾಲಿಸು

2 ನೀವು ದೇವರ ಮುಂದೆ ಪ್ರಮಾಣ ಮಾಡಿದ್ದರಿಂದ, ಅರಸನ ಆಜ್ಞೆಯನ್ನು ಕೈಕೊಳ್ಳಿರಿ ಎಂದು ಹೇಳುತ್ತೇನೆ.

3 ಅರಸನನ್ನು ಬಿಟ್ಟುಹೋಗುವುದಕ್ಕೆ ಆತುರ ಪಡಬೇಡಿರಿ. ಅರಸನು ತನಗೆ ಇಷ್ಟಬಂದದ್ದನ್ನೆಲ್ಲಾ ಮಾಡುತ್ತಾನೆ. ನೀವು ಕೆಟ್ಟ ಕಾರ್ಯಕ್ಕಾಗಿ ನಿಲ್ಲಬೇಡಿರಿ.

4 ಅರಸನ ಮಾತುಗಳೇ ಸರ್ವೋನ್ನತವಾದುದರಿಂದ, “ನೀನು ಮಾಡುವುದೇನು?” ಎಂದು ಅವನಿಗೆ ಪ್ರಶ್ನಿಸುವವರಾರು?

5 ಅರಸನ ಆಜ್ಞೆಯನ್ನು ಪಾಲಿಸುವವನಿಗೆ ಕೇಡು ಸಂಭವಿಸುವುದಿಲ್ಲ, ಜ್ಞಾನಿಯ ಹೃದಯವು ಸರಿಯಾದ ಕಾಲ ಕ್ರಮವನ್ನು ತಿಳಿದುಕೊಳ್ಳುತ್ತದೆ.

6 ಮನುಷ್ಯನಿಗೆ ಕಷ್ಟಸಂಕಟವು ಭಾರವಾಗಿದ್ದರೂ ಪ್ರತಿಯೊಂದು ಕಾರ್ಯಕ್ಕೂ ಸರಿಯಾದ ಕಾಲ ಮತ್ತು ಕ್ರಮ ಇರುತ್ತದೆ.

7 ಏಕೆಂದರೆ ಮುಂದೆ ಆಗುವುದೇನೆಂದು ಯಾರಿಗೂ ತಿಳಿಯದು. ಮುಂದೆ ಏನಾಗುವುದೆಂದು ಮನುಷ್ಯನಿಗೆ ತಿಳಿಸುವವರು ಯಾರು ಇಲ್ಲ.

8 ನಮ್ಮ ಆತ್ಮವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಹಾಗೆಯೇ ಸಾಯುವ ಸಮಯವನ್ನು ತಡೆಯುವ ಶಕ್ತಿಯು ಸಹ ಯಾರಿಗೂ ಇಲ್ಲ. ಯುದ್ಧ ಸಮಯದಲ್ಲಿ ಹೇಗೆ ವಿರಾಮ ಇರುವುದಿಲ್ಲವೋ, ಹಾಗೆಯೇ ದುಷ್ಟನಿಗೆ ದುಷ್ಟತ್ವದಿಂದ ಬಿಡುಗಡೆಯೇ ಇಲ್ಲ.

9 ನಾನು ಇದನ್ನೆಲ್ಲಾ ನೋಡಿ, ಸೂರ್ಯನ ಕೆಳಗೆ ಮಾಡುವ ಪ್ರತಿಯೊಂದು ಕೆಲಸಕ್ಕೂ ನನ್ನ ಹೃದಯವನ್ನು ಪ್ರಯೋಗಿಸಿದ್ದೇನೆ. ಒಬ್ಬ ಮನುಷ್ಯನು ಇನ್ನೊಬ್ಬನ ಮೇಲೆ ತನ್ನ ಹಾನಿಗಾಗಿ ಅಧಿಕಾರ ನಡೆಸುವ ಕಾಲವೂ ಇದೆ.

10 ಇದಲ್ಲದೆ ದುರ್ಜನರು ಸತ್ತು ಸಮಾಧಿಯಾಗುವುದನ್ನೂ ನಾನು ನೋಡಿದ್ದೇನೆ. ಆದರೆ ಜನರು ಪರಿಶುದ್ಧ ಸ್ಥಳಕ್ಕೆ ಹೋಗಿ ಬಂದ ಆ ದುಷ್ಟರನ್ನು ಅವರಿದ್ದ ಪಟ್ಟಣದಲ್ಲಿ ಹೊಗಳುತ್ತಾರೆ. ಇದೂ ಸಹ ನಿರರ್ಥಕವಾದದ್ದು.

11 ಏಕೆಂದರೆ ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವುದರಿಂದ ಮನುಷ್ಯರ ಹೃದಯವು ಅವರನ್ನು ಕೆಟ್ಟದ್ದು ಮಾಡುವ ಯುಕ್ತಿಯಲ್ಲಿಯೇ ತುಂಬಿರುವುದು.

12 ಪಾಪಿಯು ನೂರು ಸಾರಿ ಕೆಟ್ಟದ್ದನ್ನು ಮಾಡಿ, ಬಹುಕಾಲ ಬದುಕಿದರೂ ದೇವರಿಗೆ ಹೆದರಿ ದೈವಭಕ್ತಿಯುಳ್ಳವರಿಗೆ ಒಳ್ಳೆಯದಾಗುವುದೆಂದು ನಾನು ಬಲ್ಲೆನು.

13 ದುಷ್ಟರು ದೇವರಿಗೆ ಭಯಪಡುವುದಿಲ್ಲ. ಆದ್ದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ನೆರಳಿನ ಹಾಗಿರುವ ದುಷ್ಟರ ದಿನಗಳು ಹೆಚ್ಚುವುದಿಲ್ಲ.

14 ಭೂಮಿಯ ಮೇಲೆ ನಡೆಯುವ ಇನ್ನೊಂದು ವ್ಯರ್ಥ ಕಾರ್ಯವಿದು: ದುಷ್ಟರಿಗೆ ಆಗಬೇಕಾದ ಶಿಕ್ಷೆಯನ್ನು ನೀತಿವಂತರು ಅನುಭವಿಸುತ್ತಾರೆ. ನೀತಿವಂತರಿಗೆ ಆಗಬೇಕಾದ ಪ್ರತಿಫಲವನ್ನು ದುಷ್ಟರು ಅನುಭವಿಸುತ್ತಾರೆ. ಇದು ಸಹ ವ್ಯರ್ಥವೆಂದು ನಾನು ಹೇಳುತ್ತೇನೆ.

15 ಆದುದರಿಂದ ನಾನು ಸಂತೋಷವನ್ನು ಮೆಚ್ಚಿದೆನು. ಏಕೆಂದರೆ ಮನುಷ್ಯನಿಗೆ ಸೂರ್ಯನ ಕೆಳಗೆ ಕುಡಿಯುವುದೂ ತಿನ್ನುವುದೂ ಸಂತೋಷಪಡುವುದೇ ಹೊರತು ಬೇರೇನೂ ಒಳ್ಳೆಯದಿಲ್ಲ. ಸೂರ್ಯನ ಕೆಳಗೆ ದೇವರು ಮನುಷ್ಯನಿಗೆ ಕೊಡುವ ಜೀವನದ ದಿವಸಗಳಲ್ಲಿ ಅವನು ಪಡುವ ಕಷ್ಟಕ್ಕೆ ಸುಖಾನುಭವವು ಅವನಿಗೆ ಸೇರಿರುತ್ತದೆ.

16 ಜ್ಞಾನವನ್ನು ತಿಳಿದುಕೊಳ್ಳುವುದಕ್ಕೂ ಭೂಮಿಯ ಮೇಲೆ ಮಾಡುವ ಪರಿಶ್ರಮವನ್ನು ನೋಡುವುದಕ್ಕೂ ನಾನು ನನ್ನ ಹೃದಯವನ್ನು ಪ್ರಯೋಗಿಸಿದೆನು. ಜನರು ರಾತ್ರಿ ಹಗಲು ತಮ್ಮ ಕಣ್ಣುಗಳಿಗೆ ನಿದ್ರೆ ಹಚ್ಚಗೊಡದವರೂ ಇದ್ದಾರೆ.

17 ತರುವಾಯ ದೇವರ ಮಾಡುವ ಎಲ್ಲಾ ಕೆಲಸಗಳನ್ನು ನಾನು ನೋಡಿದೆನು. ಅದೇನೆಂದರೆ, ಸೂರ್ಯನ ಕೆಳಗೆ ಮಾಡುವ ದೇವರ ಕೆಲಸಗಳನ್ನು ಮನುಷ್ಯನು ಗ್ರಹಿಸಲಾರನು. ಮನುಷ್ಯನು ಅದನ್ನು ಹುಡುಕುವುದಕ್ಕೆ ಎಷ್ಟು ಕಷ್ಟಪಟ್ಟರೂ ಅದನ್ನು ಕಂಡುಕೊಳ್ಳಲಾರನು. ಹೌದು, ಜ್ಞಾನಿಯು ಸಹ ದೇವರು ಮಾಡುವುದನ್ನು ತಿಳಿದುಕೊಳ್ಳಲು ಯೋಚಿಸಿದರೂ ಅವನು ಅದನ್ನು ಕಂಡುಕೊಳ್ಳಲಾರನು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು