ಪ್ರಲಾಪಗಳು 4 - ಕನ್ನಡ ಸಮಕಾಲಿಕ ಅನುವಾದ1 ಬಂಗಾರವು ಹೇಗೆ ಮಸುಕಾಯಿತು! ಬಹಳ ಶುದ್ಧವಾದ ಬಂಗಾರವು ಹೇಗೆ ಬದಲಾಯಿತು! ಪರಿಶುದ್ಧಸ್ಥಳದ ಕಲ್ಲುಗಳೂ ಬೀದಿಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. 2 ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಪುತ್ರರು, ಈಗ ಕುಂಬಾರನ ಕೈಕೆಲಸದ ಮಣ್ಣಿನ ಮಡಕೆಯಂತೆ ತಿರಸ್ಕೃತರಾಗಿದ್ದಾರಲ್ಲಾ! 3 ನರಿಗಳೂ ತಮ್ಮ ಕೆಚ್ಚಲನ್ನು ಹೊರ ಎಳೆದು ತಮ್ಮ ಮರಿಗಳಿಗೆ ಹಾಲು ಕುಡಿಸುತ್ತವೆ. ಆದರೆ ನನ್ನ ಜನರು ಅರಣ್ಯದಲ್ಲಿರುವ ಉಷ್ಟ್ರಪಕ್ಷಿಗಳ ಹಾಗೆ ಕ್ರೂರವಾಗಿದ್ದಾರೆ. 4 ಹಸುಳೆಗಳ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ. ಎಳೆಯ ಕೂಸುಗಳು ಅನ್ನ ಕೇಳುತ್ತವೆ. ಆದರೆ ಅವರಿಗೆ ಯಾರೂ ಅದನ್ನು ಕೊಡುವುದಿಲ್ಲ. 5 ರುಚಿಯಾದವುಗಳನ್ನು ಒಮ್ಮೆ ತಿಂದವರು ಬೀದಿಗಳಲ್ಲಿ ಹಾಳಾಗಿದ್ದಾರೆ. ಚಿಕ್ಕಂದಿನಿಂದಲೂ ಶ್ರೇಷ್ಠ ವಸ್ತ್ರವನ್ನು ತೊಡುತ್ತಿದ್ದವರು, ತಿಪ್ಪೆಗಳಲ್ಲಿ ಬಿದ್ದುಕೊಂಡಿದ್ದಾರೆ. 6 ನನ್ನ ಜನರ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು. ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲಾಯಿತು ಮತ್ತು ಅವಳಿಗೆ ಸಹಾಯಮಾಡಲು ಯಾವ ಕೈಗಳೂ ಇರಲಿಲ್ಲ. 7 ಅವಳ ರಾಜಕುಮಾರರು ಹಿಮಕ್ಕಿಂತಲೂ ಪ್ರಕಾಶಮಾನವಾಗಿದ್ದರು. ಹಾಲಿಗಿಂತಲೂ ಬೆಳ್ಳಗಿದ್ದರು. ಅವರು ಮೈಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು. ಅವರ ಹೊಳಪು ಇಂದ್ರನೀಲ ಮಣಿಯ ಹಾಗಿತ್ತು. 8 ಆದರೆ ಈಗ ಅವರ ರೂಪವು ಕಲ್ಲಿದ್ದಲಿನಂತೆ ಕಪ್ಪಾಗಿದೆ. ಬೀದಿಗಳಲ್ಲಿ ಅವರು ಯಾರೆಂಬುದು ತಿಳಿಯಲಿಲ್ಲ. ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ. ಅದು ಒಣಗಿ ಕಡ್ಡಿಯ ಹಾಗೆ ಆಗಿದೆ. 9 ಖಡ್ಗದಿಂದ ಹತರಾದವರು ಹಸಿವೆಯಿಂದ ಹತರಾದವರಿಗಿಂತಲೂ ಲೇಸು. ಏಕೆಂದರೆ, ಇವರು ಭೂಮಿಯ ಫಲಗಳಿಲ್ಲದೆ ಕ್ಷಾಮದ ಪೆಟ್ಟನ್ನು ತಿಂದು, ಕ್ಷಯಿಸಿ ಹೋದರು. 10 ಕನಿಕರ ತುಂಬಿದ ಸ್ತ್ರೀಯರ ಕೈಗಳು ತಮ್ಮ ಸ್ವಂತ ಮಕ್ಕಳನ್ನೇ ಬೇಯಿಸಿದವು. ಇವರು ನನ್ನ ಜನರ ನಾಶದಲ್ಲಿ ಅವರಿಗೆ ಆಹಾರವಾದರು. 11 ಯೆಹೋವ ದೇವರು ತಮ್ಮ ರೋಷವನ್ನು ತೀರಿಸಿದ್ದಾರೆ. ಅವರು ತಮ್ಮ ಉಗ್ರವಾದ ಕೋಪವನ್ನು ಸುರಿದಿದ್ದಾರೆ. ಚೀಯೋನಿನಲ್ಲಿ ಹೊತ್ತಿಸಿದ ಬೆಂಕಿಯು ಅದರ ಅಸ್ತಿವಾರಗಳನ್ನು ತಿಂದುಬಿಟ್ಟಿತು. 12 ಭೂರಾಜರೂ, ವಿರೋಧಿಯೂ, ಶತ್ರುವೂ ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಿದ್ದನ್ನು ಪ್ರಪಂಚದ ಎಲ್ಲಾ ನಿವಾಸಿಗಳೂ ನಂಬುತ್ತಿರಲಿಲ್ಲ. 13 ಅವಳ ಪ್ರವಾದಿಗಳ ಪಾಪಗಳಿಗೋಸ್ಕರವೂ, ಅವಳ ಯಾಜಕರ ಅಕ್ರಮಗಳಿಗೋಸ್ಕರವೂ ಹೀಗಾಯಿತು. ಏಕೆಂದರೆ ಇವರು ನೀತಿವಂತರ ರಕ್ತವನ್ನು ಅವರ ಮಧ್ಯದಲ್ಲಿ ಚೆಲ್ಲಿದ್ದರು. 14 ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು. ಅವರು ರಕ್ತದಿಂದ ತಮ್ಮನ್ನು ತಾವೇ ಕಲುಷಿತಗೊಳಿಸಿಕೊಂಡರು. ಆದ್ದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೇ ಹೋದರು. 15 ಅವರು ಜನರಿಗೆ, ನೀವು ದೂರ ಹೋಗಿರಿ, ನೀವು ಅಶುದ್ಧವಾಗಿದ್ದೀರಿ; ದೂರ ಹೋಗಿರಿ, ದೂರ ಹೋಗಿರಿ, ಮುಟ್ಟಬೇಡಿರಿ, ಎಂದು ಕೂಗಿಕೊಂಡರು. ಅವರು ಓಡಿಹೋಗಿ ಅಲೆದಾಡುತ್ತಿರುವಾಗ, ಅವರು ಇನ್ನು ಮೇಲೆ ಅಲ್ಲಿ ವಾಸಮಾಡುವುದಿಲ್ಲ, ಎಂದು ಬೇರೆ ಜನಾಂಗಗಳೊಳಗೆ ಹೇಳಿದರು. 16 ಯೆಹೋವ ದೇವರ ಕೋಪವು ಅವರನ್ನು ಚದುರಿಸಿತು. ಅವರು ಇನ್ನು ಅವರನ್ನು ಲಕ್ಷಿಸುವುದಿಲ್ಲ. ಅವರು ಯಾಜಕರನ್ನು ಗೌರವಿಸಲಿಲ್ಲ. ಅವರು ಹಿರಿಯರಿಗೆ ದಯೆ ತೋರಿಸಲಿಲ್ಲ. 17 ನಮಗಾದರೋ ನಮ್ಮ ಕಣ್ಣುಗಳು ನಮ್ಮ ವ್ಯರ್ಥವಾದ ಸಹಾಯಕ್ಕಾಗಿ ನೋಡಿ ಸೋತು ಹೋದವು. ನಮ್ಮ ಕಣ್ಣುಗಳು ನಮ್ಮನ್ನು ರಕ್ಷಿಸಲಾರದಂಥ ಜನಾಂಗಕ್ಕಾಗಿ ಕಾವಲಾಗಿದ್ದವು. 18 ನಾವು ನಮ್ಮ ಬೀದಿಗಳಲ್ಲಿ ಹೋಗದ ಹಾಗೆ, ಶತ್ರುಗಳು ನಮ್ಮ ಹೆಜ್ಜೆಗಳನ್ನೇ ಬೇಟೆಯಾಡುತ್ತಾರೆ. ನಮ್ಮ ಅಂತ್ಯವು ಸಮೀಪಿಸಿತು, ನಮ್ಮ ದಿನಗಳು ತೀರಿದವು. ಏಕೆಂದರೆ ನಮ್ಮ ಅಂತ್ಯವು ಬಂದಿತು. 19 ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರವಾಗಿದ್ದಾರೆ. ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ, ಅರಣ್ಯದಲ್ಲಿ ಹೊಂಚು ಹಾಕಿದರು. 20 ಯಾರ ವಿಷಯವಾಗಿ ನಾವು ಅವನ ನೆರಳಿನ ಕೆಳಗೆ ಬೇರೆ ಜನಾಂಗಗಳೊಳಗೆ ಬದುಕುವೆವು ಎಂದು ಹೇಳಿಕೊಂಡೆವೋ, ನಮ್ಮ ಮೂಗಿನ ಉಸಿರಾದ ಆ ಯೆಹೋವ ದೇವರ ಅಭಿಷಿಕ್ತನು ಅವರ ಬಲೆಗಳಲ್ಲಿ ಸಿಕ್ಕಿಕೊಂಡನು. 21 ಎದೋಮಿನ ಪುತ್ರಿಯೇ, ಊಚ್ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು ಮತ್ತು ಸಂತೋಷಪಡು; ಆದರೆ ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವುದು. ನೀನು ಕುಡಿದು, ಬೆತ್ತಲೆಯಾಗಿರುವೆ. 22 ಚೀಯೋನ್ ಪುತ್ರಿಯೇ, ನಿನ್ನ ಅಕ್ರಮದ ಶಿಕ್ಷೆಯು ತೀರಿ ಹೋಯಿತು. ಅವರು ಇನ್ನು ಮೇಲೆ ನಿನ್ನ ಗಡಿಪಾರನ್ನು ಹೆಚ್ಚಿಸುವುದಿಲ್ಲ. ಎದೋಮಿನ ಪುತ್ರಿಯೇ, ಅವರು ನಿನ್ನ ಅಕ್ರಮವನ್ನು ವಿಚಾರಿಸುವನು. ಆತನು ನಿನ್ನ ಪಾಪಗಳನ್ನು ಬಹಿರಂಗಪಡಿಸುವರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.