Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 9 - ಕನ್ನಡ ಸಮಕಾಲಿಕ ಅನುವಾದ

1 ಐದನೆಯ ದೇವದೂತನು ತನ್ನ ತುತೂರಿಯನ್ನು ಊದಲು; ಆಕಾಶದಿಂದ ಒಂದು ನಕ್ಷತ್ರವು ಭೂಮಿಗೆ ಬಿದ್ದದ್ದನ್ನು ಕಂಡೆನು. ಅದಕ್ಕೆ ಪಾತಾಳ ಸುರಂಗದ ಬೀಗದ ಕೈ ಕೊಡಲಾಗಿತ್ತು.

2 ಆತನು ಆ ಪಾತಾಳವನ್ನು ತೆರೆಯಲು, ಅದರೊಳಗಿಂದ ಹೊಗೆಯು ಮಹಾ ಕುಲುಮೆಯಿಂದ ಬರುವ ಹೊಗೆಯಂತೆ ಏರಿತು. ಪಾತಾಳದ ಆ ಹೊಗೆಯಿಂದ ಸೂರ್ಯ ಮತ್ತು ಆಕಾಶಕ್ಕೆ ಕತ್ತಲು ಕವಿಯಿತು.

3 ಆ ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಬಂದವು. ಅವುಗಳಿಗೆ ಭೂಮಿಯ ಮೇಲಿನ ಚೇಳುಗಳಿಗೆ ಇರುವಂತೆ ಶಕ್ತಿಯನ್ನು ಕೊಡಲಾಗಿತ್ತು.

4 ಅವುಗಳಿಗೆ ಹಣೆಯ ಮೇಲೆ ದೇವರ ಮುದ್ರೆಯನ್ನು ಹಾಕಿಸಿಕೊಳ್ಳದ ಮನುಷ್ಯರನ್ನು ಬಿಟ್ಟು, ಭೂಮಿಯ ಮೇಲಿನ ಹುಲ್ಲು ಅಥವಾ ಯಾವುದೇ ಪಲ್ಯ ಅಥವಾ ಮರ, ಈ ಯಾವುದಕ್ಕೂ ತೊಂದರೆ ಕೊಡಬಾರದೆಂಬುದಾಗಿ ಹೇಳಲಾಯಿತು.

5 ಅವುಗಳು ಅವರನ್ನು ಕೊಲ್ಲದೆ, ಐದು ತಿಂಗಳುಗಳವರೆಗೆ ಯಾತನೆಪಡಿಸುವುದಕ್ಕೆ ಅಧಿಕಾರ ಕೊಡಲಾಯಿತು. ಅವರ ಯಾತನೆಯು, ಚೇಳು ತನ್ನ ಕೊಂಡಿಯಿಂದ ಮನುಷ್ಯರನ್ನು ಕುಟುಕಿಹಾಕಿದಾಗ ಆಗುವ ನೋವಿನಂತಿತ್ತು.

6 ಆ ದಿನಗಳಲ್ಲಿ ಜನರು ಮರಣವನ್ನು ಹುಡುಕುವರು, ಆದರೆ ಅದನ್ನು ಯಾವ ರೀತಿಯಿಂದಲೂ ಕಾಣರು; ಅವರು ಸಾಯಲು ಹಾರೈಸುವರು, ಆದರೆ ಮರಣವು ಅವರಿಂದ ಓಡಿ ಹೋಗುವುದು.

7 ಆ ಮಿಡತೆಗಳು ಯುದ್ಧಕ್ಕೆ ಸನ್ನದ್ಧವಾದ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದಂತಿರುವ ಕಿರೀಟಗಳಿದ್ದವು. ಅವುಗಳ ಮುಖವು ಮಾನವರ ಮುಖಗಳಂತೆ ಇದ್ದವು.

8 ಅವುಗಳ ಕೂದಲು ಸ್ತ್ರೀಯರ ಕೂದಲಿನಂತಿದ್ದು, ಅವುಗಳಿಗೆ ಸಿಂಹಗಳಿಗಿದ್ದಂತೆ ಹಲ್ಲುಗಳಿದ್ದವು.

9 ಅವುಗಳಿಗೆ ಕಬ್ಬಿಣದ ಕವಚದಂಥ ಕವಚಗಳಿದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳಂತಿತ್ತು.

10 ಅವುಗಳಿಗೆ ಚೇಳಿನಂತೆ ಬಾಲವೂ ಕೊಂಡಿಯೂ ಇದ್ದವು. ಅವುಗಳಿಗೆ ಮನುಷ್ಯರನ್ನು ಐದು ತಿಂಗಳುಗಳ ಕಾಲ ತಮ್ಮ ಬಾಲಗಳಿಂದ ಬಾಧಿಸುವ ಸಾಮರ್ಥ್ಯವಿತ್ತು.

11 ಹೀಬ್ರೂ ಭಾಷೆಯಲ್ಲಿ, ಅಬದ್ದೋನ್ ಎಂದೂ ಗ್ರೀಕ್ ಭಾಷೆಯಲ್ಲಿ, ಅಪೊಲ್ಲುವೋನ್ ಎಂಬ ಹೆಸರಿನ ಪಾತಾಳ ಲೋಕದ ದೂತನು ಅವರ ಅರಸನು.

12 ಮೊದಲನೆಯ ವಿಪತ್ತು ಕಳೆದುಹೋಯಿತು; ಇಗೋ, ಇವುಗಳ ನಂತರ ಇನ್ನೂ ಎರಡು ವಿಪತ್ತುಗಳು ಬರಲಿವೆ.

13 ಆರನೆಯ ದೇವದೂತನು ತನ್ನ ತುತೂರಿಯನ್ನು ಊದಲು, ದೇವರ ಮುಂದೆ ಇರುವ ಚಿನ್ನದ ಬಲಿಪೀಠದ ನಾಲ್ಕು ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು.

14 ಅದು ತುತೂರಿಯನ್ನು ಹೊಂದಿರುವ ಆರನೆಯ ದೇವದೂತನಿಗೆ, “ಯೂಫ್ರೇಟೀಸ್ ಮಹಾನದಿಯ ಬಳಿ ಕಟ್ಟಿರುವ ನಾಲ್ಕು ದೇವದೂತರನ್ನು ಬಿಚ್ಚಿಬಿಡು,” ಎಂದು ಹೇಳಿತು.

15 ಮಾನವಕುಲದ ಮೂರರಲ್ಲೊಂದು ಭಾಗವನ್ನು ಕೊಲ್ಲುವುದಕ್ಕಾಗಿ ಆ ಗಳಿಗೆ, ದಿನ, ತಿಂಗಳು ಮತ್ತು ವರ್ಷಕ್ಕಾಗಿಯೇ ಸಿದ್ಧವಾಗಿದ್ದ ನಾಲ್ಕು ದೇವದೂತರನ್ನು ಬಿಡುಗಡೆ ಮಾಡಲಾಯಿತು.

16 ಕುದುರೆ ಸೈನಿಕರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು.

17 ನಾನು ನನ್ನ ದರ್ಶನದಲ್ಲಿ ಕುದುರೆಗಳನ್ನೂ ಸವಾರರನ್ನೂ ಕಂಡೆನು. ಅವರ ಕವಚಗಳು ಬೆಂಕಿಯ ಕೆಂಪು, ನೀಲಮಣಿ ಹಾಗೂ ಹಳದಿ ಬಣ್ಣದಂತೆಯೂ ಇದ್ದವು. ಕುದುರೆಗಳ ತಲೆಗಳು ಸಿಂಹದ ತಲೆಗಳಂತಿದ್ದವು. ಅವುಗಳ ಬಾಯೊಳಗಿಂದ ಬೆಂಕಿ, ಹೊಗೆ ಮತ್ತು ಗಂಧಕ ಹೊರಬಂದವು.

18 ಅವುಗಳ ಬಾಯೊಳಗಿಂದ ಬಂದ ಬೆಂಕಿ ಹೊಗೆ ಮತ್ತು ಗಂಧಕಗಳೆಂಬ ಮೂರು ಉಪದ್ರವಗಳಿಂದ ಮಾನವಕುಲದ ಮೂರರಲ್ಲೊಂದು ಭಾಗದ ಜನರು ಹತರಾದರು.

19 ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲದಲ್ಲಿಯೂ ಇತ್ತು. ಏಕೆಂದರೆ ಅವುಗಳ ಬಾಲಗಳು ತಲೆಗಳನ್ನು ಹೊಂದಿದ್ದ ಸರ್ಪಗಳಂತಿದ್ದವು. ಅವುಗಳಿಂದ ಅವು ಕೇಡನ್ನುಂಟು ಮಾಡುತ್ತವೆ.

20 ಈ ಉಪದ್ರವಗಳಿಂದ ಸಾಯದೆ ಉಳಿದ ಮನುಷ್ಯರು ಇನ್ನೂ ತಮ್ಮ ದುಷ್ಟಕೃತ್ಯಗಳನ್ನು ಬಿಟ್ಟು ಪಶ್ಚಾತ್ತಾಪ ಪಡಲಿಲ್ಲ. ಅವರು ದೆವ್ವಗಳನ್ನೂ, ನೋಡಲು, ಕೇಳಲು, ನಡೆಯಲು ಆಗದ ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳ ವಿಗ್ರಹಗಳನ್ನು ಆರಾಧಿಸುವುದನ್ನೂ ನಿಲ್ಲಿಸಲಿಲ್ಲ.

21 ಇದಲ್ಲದೆ ಅವರು ಕೊಲೆ, ಮಾಟ, ಜಾರತ್ವ ಮತ್ತು ಕಳ್ಳತನಗಳಿಗಾಗಿಯೂ ಪಶ್ಚಾತ್ತಾಪ ಪಡಲಿಲ್ಲ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು