ಪ್ರಕಟನೆ 8 - ಕನ್ನಡ ಸಮಕಾಲಿಕ ಅನುವಾದಏಳನೆಯ ಮುದ್ರೆ ಮತ್ತು ಚಿನ್ನದ ಧೂಪಾರತಿ 1 ಕುರಿಮರಿ ಆಗಿರುವವರು ಏಳನೆಯ ಮುದ್ರೆಯನ್ನು ಒಡೆದಾಗ ಪರಲೋಕದಲ್ಲಿ ಸುಮಾರು ಅರ್ಧ ತಾಸಿನವರೆಗೂ ನಿಶ್ಶಬ್ದವಿತ್ತು. 2 ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಗಿತ್ತು. 3 ಚಿನ್ನದ ಧೂಪಾರತಿಯಿದ್ದ ಮತ್ತೊಬ್ಬ ದೇವದೂತನು ಬಂದು ಬಲಿಪೀಠದ ಬಳಿ ನಿಂತನು. ಸಿಂಹಾಸನದ ಮುಂದಿನ ಚಿನ್ನದ ಧೂಪವೇದಿಯ ಮೇಲೆ ದೇವಜನರೆಲ್ಲರ ಪ್ರಾರ್ಥನೆಗಳೊಂದಿಗೆ ಅರ್ಪಿಸಲು ಅವನಿಗೆ ಬಹಳ ಧೂಪವು ಕೊಡಲಾಗಿತ್ತು. 4 ದೇವದೂತನ ಕೈಯಿಂದ ಧೂಪದ ಹೊಗೆಯು, ದೇವಜನರ ಪ್ರಾರ್ಥನೆಗಳೊಂದಿಗೆ ಸೇರಿ, ದೇವಸನ್ನಿಧಿಗೆ ಏರಿಹೋಯಿತು. 5 ಆಗ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ಬಲಿಪೀಠದ ಬೆಂಕಿಯಿಂದ ಅದನ್ನು ತುಂಬಿಸಿ, ಭೂಮಿಯ ಮೇಲೆ ಎಸೆದನು. ಆಗ ಗುಡುಗುಗಳೂ ಸಪ್ಪಳವೂ ಮಿಂಚುಗಳೂ ಮತ್ತು ಭೂಕಂಪವೂ ಉಂಟಾದವು. ತುತೂರಿಗಳು 6 ಆಗ ಏಳು ತುತೂರಿಗಳನ್ನು ಹಿಡಿದಿರುವ ಏಳು ದೇವದೂತರು ಅವುಗಳನ್ನು ಊದಲು ಸಿದ್ಧರಾದರು. 7 ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಲು, ರಕ್ತದೊಂದಿಗೆ ಮಿಶ್ರಿತವಾದ ಆಲಿಕಲ್ಲಿನ ಮಳೆಯೂ ಬೆಂಕಿಯೂ ಭೂಮಿಯ ಮೇಲೆ ಸುರಿದವು. ಭೂಮಿಯ ಮೂರರಲ್ಲಿ ಒಂದು ಭಾಗವು ಸುಟ್ಟುಹೋಯಿತು. ಮರಗಳಲ್ಲಿ ಮೂರನೆಯ ಒಂದು ಭಾಗ ಭಸ್ಮವಾಯಿತು ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋಯಿತು. 8 ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಉರಿಯುತ್ತಿರುವ ದೊಡ್ಡ ಬೆಟ್ಟದಂಥದ್ದು ಸಮುದ್ರದಲ್ಲಿ ಎಸೆಯಲಾಯಿತು. ಸಮುದ್ರದ ಮೂರರಲ್ಲಿ ಒಂದು ಭಾಗವು ರಕ್ತವಾಯಿತು. 9 ಸಮುದ್ರದ ಜೀವಿಗಳಲ್ಲಿ ಮೂರರಲ್ಲಿ ಒಂದು ಭಾಗ ಸತ್ತವು ಮತ್ತು ಹಡಗುಗಳಲ್ಲಿ ಮೂರರಲ್ಲಿ ಒಂದು ಭಾಗ ನಾಶವಾದವು. 10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೀಪದಂತೆ ಉರಿಯುವ ದೊಡ್ಡ ನಕ್ಷತ್ರವು ಆಕಾಶದಿಂದ ನದಿಗಳ ಹಾಗೂ ನೀರಿನ ಬುಗ್ಗೆಗಳ ಮೂರರಲ್ಲಿ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರದ ಹೆಸರು, ಮಾಚಿಪತ್ರೆ, ಆಗ ಮೂರರಲ್ಲಿ ಒಂದು ಭಾಗವು ಕಹಿಯಾಯಿತು ಮತ್ತು ಆ ನೀರು ಕಹಿಯಾದ್ದರಿಂದ ಅನೇಕ ಜನರು ಸತ್ತರು. 12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು, ಆಗ ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಮೂರರಲ್ಲಿ ಒಂದು ಭಾಗವು ಬಡೆದಿದ್ದರಿಂದ ಮೂರನೇ ಭಾಗವು ಕತ್ತಲಾಯಿತು. ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಬಡೆದಿದ್ದರಿಂದ, ಮೂರನೇ ಭಾಗವು ಕತ್ತಲಾಯಿತು. ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಹೋಯಿತು. ರಾತ್ರಿಯು ಹಾಗೆಯೇ ಆಯಿತು. 13 ನಾನು ನೋಡಲಾಗಿ, ಆಕಾಶದ ಮಧ್ಯದಲ್ಲಿ ಹಾರುತ್ತಿರುವ ಒಂದು ಗರುಡ ಪಕ್ಷಿ ಮಹಾಧ್ವನಿಯಿಂದ: ಇನ್ನೂ ಊದಲಿರುವ ಮೂವರು ದೂತರ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿಗಳಿಗೆ, “ಅಯ್ಯೋ! ಅಯ್ಯೋ! ಅಯ್ಯೋ!” ಎಂದಿತು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.