ನ್ಯಾಯಸ್ಥಾಪಕರು 21 - ಕನ್ನಡ ಸಮಕಾಲಿಕ ಅನುವಾದಬೆನ್ಯಾಮೀನರಿಗೆ ಹೆಂಡತಿಯರು 1 ಇಸ್ರಾಯೇಲರು ತಮ್ಮಲ್ಲಿ, “ಯಾವನೂ ತನ್ನ ಮಗಳನ್ನು ಬೆನ್ಯಾಮೀನ್ಯರಿಗೆ ಮದುವೆಮಾಡಿ ಕೊಡುವುದಿಲ್ಲ,” ಎಂದು ಮಿಚ್ಪೆಯಲ್ಲಿ ಆಣೆಯಿಟ್ಟಿದ್ದರು. 2 ಆದ್ದರಿಂದ ಜನರು ಬೇತೇಲಿಗೆ ಬಂದು, ಅಲ್ಲಿ ದೇವರ ಮುಂದೆ ಸಾಯಂಕಾಲದವರೆಗೆ ಇದ್ದು, ತಮ್ಮ ಧ್ವನಿ ಎತ್ತಿ ಬಹಳವಾಗಿ ಅತ್ತು, 3 “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರ ಕೊರತೆಯಾದದ್ದೇನು?” ಎಂದರು. 4 ಜನರು ಮಾರನೆಯ ದಿವಸ ಉದಯದಲ್ಲಿ ಎದ್ದು, ಅಲ್ಲಿ ಬಲಿಪೀಠವನ್ನು ಕಟ್ಟಿ, ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು. 5 ಅನಂತರ ಅವರು, “ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಬಾರದವರು ಯಾರು?” ಎಂದರು. ಏಕೆಂದರೆ ಯೆಹೋವ ದೇವರ ಬಳಿಗೆ ಮಿಚ್ಪೆಗೆ ಬಾರದವನು ಖಂಡಿತವಾಗಿ ಸಾಯಬೇಕೆಂದು ದೊಡ್ಡ ಆಣೆ ಇಟ್ಟುಕೊಂಡಿದ್ದರು. 6 ಆಗ ಇಸ್ರಾಯೇಲರು ತಮ್ಮ ಸಹೋದರರಾದ ಬೆನ್ಯಾಮೀನನ ವಿಷಯವಾಗಿ ಪಶ್ಚಾತ್ತಾಪಪಟ್ಟು, “ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರವು ಕಡಿದು ಹೋಯಿತು. 7 ನಾವು ನಮ್ಮ ಪುತ್ರಿಯರಲ್ಲಿ ಒಬ್ಬಳನ್ನಾದರೂ ಅವರಿಗೆ ಕೊಡುವುದಿಲ್ಲ, ಎಂದು ನಾವು ಯೆಹೋವ ದೇವರ ಮೇಲೆ ಆಣೆ ಇಟ್ಟುಕೊಂಡದ್ದರಿಂದ ಉಳಿದವರಿಗೆ ಹೆಂಡರು ದೊರಕುವಂತೆ ನಾವು ಅವರಿಗೋಸ್ಕರ ಏನು ಮಾಡೋಣ? 8 ಇಸ್ರಾಯೇಲಿನ ಗೋತ್ರಗಳಲ್ಲಿ ಮಿಚ್ಪೆಗೆ ಯೆಹೋವ ದೇವರ ಬಳಿಗೆ ಬಾರದವರು ಯಾರಾದರೂ ಒಬ್ಬರಿದ್ದಾರೋ?” ಎಂದರು. ಆಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಸಭೆಯ ಬಳಿಗೆ ಪಾಳೆಯಕ್ಕೆ ಬಂದಿರಲಿಲ್ಲ. 9 ಜನರು ಲೆಕ್ಕಿಸಿದಾಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಇರಲಿಲ್ಲ. 10 ಆಗ ಸಭೆಯು ಪರಾಕ್ರಮಶಾಲಿಗಳಲ್ಲಿ ಹನ್ನೆರಡು ಸಾವಿರ ಮನುಷ್ಯರನ್ನು ಅಲ್ಲಿಗೆ ಕಳುಹಿಸುವಾಗ, ಅವರಿಗೆ, “ನೀವು ಹೋಗಿ, ಯಾಬೇಷ್ ಗಿಲ್ಯಾದಿನ ನಿವಾಸಿಗಳನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಕೂಡ, ಖಡ್ಗದಿಂದ ಸಂಹರಿಸಿಬಿಡಿರಿ. 11 ಎಲ್ಲಾ ಗಂಡಸರನ್ನೂ ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲ ಮಾಡಿರಿ,” ಎಂದು ಆಜ್ಞಾಪಿಸಿದರು. 12 ಹಾಗೆಯೇ ಯಾಬೇಷ್ ಗಿಲ್ಯಾದಿನ ನಿವಾಸಿಗಳಲ್ಲಿ ನಾನೂರು ಮಂದಿ ಪ್ರಾಯದ ಕನ್ನಿಕೆಯರನ್ನು ಕಂಡರು. ಅವರು ಯಾವುದೇ ಪುರುಷರೊಂದಿಗೆ ಸಂಬಂಧ ಹೊಂದಿರಲಿಲ್ಲ. ಅವರನ್ನು ಕಾನಾನ್ ದೇಶದಲ್ಲಿರುವ ಶೀಲೋವಿನಲ್ಲಿದ್ದ ಪಾಳೆಯಕ್ಕೆ ತಂದರು. 13 ಆಗ ಸಭೆಯವರೆಲ್ಲರೂ ರಿಮ್ಮೋನ್ ಗುಡ್ಡದಲ್ಲಿರುವ ಬೆನ್ಯಾಮೀನ್ಯರ ಸಂಗಡ ಮಾತನಾಡಿ, ಅವರಿಗೆ ಸಮಾಧಾನವನ್ನು ಸಾರಲು ಕೆಲವರನ್ನು ಕಳುಹಿಸಿದರು. 14 ಆ ಕಾಲದಲ್ಲಿ ಬೆನ್ಯಾಮೀನ್ಯರು ತಿರುಗಿ ಅವರ ಬಳಿಗೆ ಬಂದರು. ಅವರು ಯಾಬೇಷ್ ಗಿಲ್ಯಾದಿನ ಸ್ತ್ರೀಯರಲ್ಲಿ ಜೀವದಿಂದ ಉಳಿಸಿದ ಕನ್ನಿಕೆಯರನ್ನು ಅವರಿಗೆ ಹೆಂಡತಿಯರಾಗಿ ಕೊಟ್ಟರು. ಆದರೂ ಅವರಿಗೆ ತಕ್ಕಷ್ಟು ಹೆಂಡತಿಯರು ಸಿಕ್ಕಲಿಲ್ಲ. 15 ಯೆಹೋವ ದೇವರು ಇಸ್ರಾಯೇಲ್ ಗೋತ್ರಗಳಲ್ಲಿ ಬೆನ್ಯಾಮೀನರನ್ನು ಬೇರ್ಪಡಿಸಿದ್ದರಿಂದ ಜನರು ಬೆನ್ಯಾಮೀನರಿಗಾಗಿ ಪಶ್ಚಾತ್ತಾಪ ಪಟ್ಟರು. 16 ಸಮೂಹದ ಹಿರಿಯರು, “ಬೆನ್ಯಾಮೀನನ ಗೋತ್ರದ ಸ್ತ್ರೀಯರು ನಾಶವಾದದ್ದರಿಂದ ಉಳಿದ ಜನರಿಗೆ ಹೆಂಡತಿಯರು ದೊರಕುವುದಕ್ಕಾಗಿ ಏನು ಮಾಡೋಣ? 17 ಇಸ್ರಾಯೇಲಿನಲ್ಲಿ ಒಂದು ಗೋತ್ರವು ಅಳಿದು ಹೋಗದ ಹಾಗೆ ತಪ್ಪಿಸಿಕೊಂಡ ಬೆನ್ಯಾಮೀನ್ಯರಿಗೆ ಬಾಧ್ಯತೆ ಇರಬೇಕು. 18 ‘ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣು ಕೊಡುವ ಇಸ್ರಾಯೇಲ್ಯರು ಶಾಪಗ್ರಸ್ತರಾಗಲಿ,’ ಎಂದು ಆಣೆ ಇಟ್ಟುಕೊಂಡಿದ್ದರಿಂದ, ನಾವಾದರೋ ನಮ್ಮ ಪುತ್ರಿಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು,” ಎಂದರು. 19 ಅವರು ಬೇತೇಲಿಗೆ ಉತ್ತರದಲ್ಲಿಯೂ, ಬೇತೇಲಿನಿಂದ ಶೆಕೆಮಿಗೆ ಹೋಗುವ ಹೆದ್ದಾರಿಯ ಮೂಡಲಲ್ಲಿಯೂ ಲೆಬೋನಕ್ಕೆ ದಕ್ಷಿಣದಲ್ಲಿರುವ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವ ದೇವರ ಹಬ್ಬವುಂಟೆಂದು ಹೇಳಿದರು. 20 ಅವರು ಬೆನ್ಯಾಮೀನ್ಯರಿಗೆ, “ನೀವು ಹೋಗಿ ದ್ರಾಕ್ಷಿತೋಟಗಳಲ್ಲಿ ಅಡಗಿಕೊಳ್ಳಿರಿ. 21 ಶೀಲೋವಿನ ಪುತ್ರಿಯರು ನಾಟ್ಯವಾಡುತ್ತಾ ಹೊರಟು ಬರುವರು. ನೀವು ಅವರನ್ನು ಕಂಡಾಗ, ದ್ರಾಕ್ಷಿ ತೋಟಗಳಿಂದ ಹೊರಟು, ಶೀಲೋವಿನ ಪುತ್ರಿಯರಲ್ಲಿ ನಿಮ್ಮಲ್ಲಿ ಅವನವನು ತನಗೆ ಹೆಂಡತಿಯಾಗಿ ಒಬ್ಬೊಬ್ಬಳನ್ನು ಹಿಡಿದುಕೊಂಡು, ಬೆನ್ಯಾಮೀನನ ದೇಶಕ್ಕೆ ಹೋಗಿರಿ,” ಎಂದು ಆಜ್ಞಾಪಿಸಿದರು. 22 ಅವರ ತಂದೆಗಳಾದರೂ, ಅವರ ಸಹೋದರರಾದರೂ ನಮ್ಮ ಸಂಗಡ ವ್ಯಾಜ್ಯವಾಡುವುದಕ್ಕೆ ಬಂದರೆ, ನಾವು ಅವರಿಗೆ, “ಯುದ್ಧದಲ್ಲಿ ನಾವು ಅವನವನಿಗೆ ಹೆಂಡತಿಯನ್ನು ದೊರಕಿಸಿದ ಕಾರಣ, ನಮಗೋಸ್ಕರ ಅವರ ಮೇಲೆ ದಯೆ ತೋರಿಸಿರಿ. ಏಕೆಂದರೆ ನೀವು ಈ ಸಮಯದಲ್ಲಿ ಅವರಿಗೆ ಕೊಟ್ಟು ಅಪರಾಧಸ್ಥರಾಗಲಿಲ್ಲ ಎಂಬದಾಗಿ ಹೇಳುತ್ತೇವೆ,” ಎಂದರು. 23 ಆಗ ಬೆನ್ಯಾಮೀನ್ಯರು ಅದೇ ಪ್ರಕಾರಮಾಡಿ, ನಾಟ್ಯವಾಡುವ ಹೆಣ್ಣುಗಳಲ್ಲಿ ತಮ್ಮ ಲೆಕ್ಕಕ್ಕೆ ಸರಿಯಾಗಿ ಹಿಡಿದುಕೊಂಡವರನ್ನು ಅವನವನು ತನಗೆ ಹೆಂಡತಿಯಾಗಿ ತೆಗೆದುಕೊಂಡು, ತಮ್ಮ ಬಾಧ್ಯತೆಗೆ ತಿರುಗಿಕೊಂಡು ಹೋಗಿ, ಪಟ್ಟಣಗಳನ್ನು ಕಟ್ಟಿ, ಅವುಗಳಲ್ಲಿ ವಾಸಿಸಿದರು. 24 ಇಸ್ರಾಯೇಲರು ಆ ಕಾಲದಲ್ಲಿ ಆ ಸ್ಥಳವನ್ನು ಬಿಟ್ಟು, ತಮ್ಮ ತಮ್ಮ ಗೋತ್ರಕ್ಕೂ, ತಮ್ಮ ತಮ್ಮ ಕುಟುಂಬಕ್ಕೂ ಹೋದರು. ಅಲ್ಲಿಂದ ಒಬ್ಬೊಬ್ಬನು ತನ್ನ ಬಾಧ್ಯತೆಗೆ ಹೊರಟುಹೋದನು. 25 ಆ ದಿವಸಗಳಲ್ಲಿ ಇಸ್ರಾಯೇಲಿನಲ್ಲಿ ಅರಸನು ಇರಲಿಲ್ಲ. ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡುತ್ತಿದ್ದನು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.