ಧರ್ಮೋಪದೇಶಕಾಂಡ 27 - ಕನ್ನಡ ಸಮಕಾಲಿಕ ಅನುವಾದಏಬಾಲ್ ಬೆಟ್ಟದ ಮೇಲೆ ಬಲಿಪೀಠ 1 ಮೋಶೆ ಮತ್ತು ಇಸ್ರಾಯೇಲಿನ ಹಿರಿಯರು ಜನರಿಗೆ, “ನಾವು ಈ ಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು. 2 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಯೊರ್ದನನ್ನು ದಾಟಿ ಪ್ರವೇಶಿಸುವಾಗ, ದೊಡ್ಡ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಿ, 3 ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಪ್ರಕಾರ ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಹಾಲೂ ಜೇನೂ ಹರಿಯುವಂಥ ದೇಶವನ್ನು ನೀವು ಪ್ರವೇಶಿಸುವಂತೆ ಯೊರ್ದನ್ ನದಿಯನ್ನು ದಾಟುವಾಗ, ಅವುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಆ ಕಲ್ಲಿನ ಮೇಲೆ ಬರೆಯಬೇಕು. 4 ನೀವು ಯೊರ್ದನನ್ನು ದಾಟಿದ ಮೇಲೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್ ಬೆಟ್ಟದಲ್ಲಿ ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಬೇಕು. 5 ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಬೇಕು. ಕಬ್ಬಿಣದ ಉಪಕರಣವನ್ನು ನೀವು ಕಲ್ಲುಗಳ ಮೇಲೆ ಉಪಯೋಗಿಸಬಾರದು. 6 ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠವನ್ನು ಹುಟ್ಟುಕಲ್ಲುಗಳಿಂದಲೇ ಕಟ್ಟಬೇಕು. ನೀವು ಅದರ ಮೇಲೆ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಬೇಕು. 7 ಅಲ್ಲಿ ದಹನಬಲಿಗಳನ್ನೂ ಸಮಾಧಾನ ಬಲಿಗಳನ್ನೂ ಸಮರ್ಪಿಸಿ, ಸಹಭೋಜನ ಮಾಡಿ, ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು. 8 ನೀವು ಆ ಕಲ್ಲುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಬಹುಸ್ಪಷ್ಟವಾಗಿ ಬರೆಸಬೇಕು,” ಎಂದು ಆಜ್ಞಾಪಿಸಿದರು. ಏಬಾಲ್ ಬೆಟ್ಟದಿಂದ ಬಂದ ಶಾಪಗಳು 9 ಆಗ ಮೋಶೆಯೂ ಯಾಜಕರಾದ ಲೇವಿಯರೂ ಸಮಸ್ತ ಇಸ್ರಾಯೇಲಿನ ಸಂಗಡ ಮಾತನಾಡಿ, “ಇಸ್ರಾಯೇಲರೇ, ಶಾಂತರಾಗಿದ್ದು ಕೇಳಿರಿ. ನೀವು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಜನಾಂಗವಾಗಿದ್ದೀರಿ. 10 ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಆಜ್ಞೆಗಳನ್ನೂ ತೀರ್ಪುಗಳನ್ನೂ ಅನುಸರಿಸಬೇಕು,” ಎಂದು ಹೇಳಿದನು. 11 ಇದಲ್ಲದೆ ಮೋಶೆ ಅದೇ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ: 12 “ನೀವು ಯೊರ್ದನನ್ನು ದಾಟಿದ ಮೇಲೆ ಜನರನ್ನು ಆಶೀರ್ವದಿಸುವುದಕ್ಕೆ ಗೆರಿಜೀಮ್ ಬೆಟ್ಟದಲ್ಲಿ ನಿಲ್ಲತಕ್ಕವರು ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ, ಬೆನ್ಯಾಮೀನ್ ಮುಂತಾದವರು; 13 ಶಪಿಸುವುದಕ್ಕೆ ಏಬಾಲ್ ಬೆಟ್ಟದಲ್ಲಿ ನಿಲ್ಲತಕ್ಕವರು ಯಾರೆಂದರೆ ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ,” ಎಂದು ಆಜ್ಞಾಪಿಸಿ ಹೇಳಿದನು. 14 ಲೇವಿಯರು ಇಸ್ರಾಯೇಲ್ ಜನರೆಲ್ಲರಿಗೆ ಗಟ್ಟಿಯಾದ ಧ್ವನಿಯಿಂದ, 15 “ಯೆಹೋವ ದೇವರಿಗೆ ಅಸಹ್ಯವಾಗಿರುವ ವಿಗ್ರಹವನ್ನಾಗಲಿ, ಎರಕ ಹೊಯ್ದದ್ದನ್ನಾಗಲಿ ಮಾಡಿಕೊಂಡು, ಶಿಲ್ಪಿಯ ಕೈಯಿಂದ ಮಾಡಿಸಿ, ಗುಪ್ತವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 16 ಅವರು, “ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 17 ಅವರು, “ತನ್ನ ನೆರೆಯವನ ಗಡಿ ಮೇರೆಯನ್ನು ಸರಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 18 ಅವರು, “ಕಣ್ಣು ಕಾಣದವನನ್ನು ದಾರಿತಪ್ಪಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 19 ಅವರು, “ಪರವಾಸಿಗೂ, ದಿಕ್ಕಿಲ್ಲದವನಿಗೂ, ವಿಧವೆಗೂ ನ್ಯಾಯಬಿಟ್ಟು ತೀರ್ಪು ಹೇಳಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 20 ಅವರು, “ಮಲತಾಯಿಯ ಸಂಗಡ ಅನೈತಿಕವಾಗಿ ನಡೆದು ತನ್ನ ತಂದೆಯ ಹಾಸಿಗೆಯನ್ನು ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 21 ಅವರು, “ಪಶುಸಂಗಮ ಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 22 ಅವರು, “ತನ್ನ ತಂದೆಯ ಮಗಳ ಸಂಗಡವಾಗಲಿ, ತಾಯಿಯ ಮಗಳ ಸಂಗಡವಾಗಲಿ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 23 ಅವರು, “ತನ್ನ ಅತ್ತೆಯ ಸಂಗಡ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 24 ಅವರು, “ತನ್ನ ನೆರೆಯವನನ್ನು ರಹಸ್ಯವಾಗಿ ಕೊಲೆಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 25 ಅವರು, “ನಿರಪರಾಧಿಯನ್ನು ಕೊಲ್ಲಲು ಲಂಚ ತೆಗೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. 26 ಅವರು, “ದೇವರ ನಿಯಮದ ಈ ಮಾತುಗಳನ್ನು ಸನ್ಮಾನಿಸಿ ಕೈಗೊಳ್ಳದೆ ಇರುವವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.