Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 25 - ಕನ್ನಡ ಸಮಕಾಲಿಕ ಅನುವಾದ

1 ಜನರಲ್ಲಿ ಏನಾದರೂ ವ್ಯಾಜ್ಯವಿದ್ದರೆ, ಅವರು ಅದನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬೇಕು. ನ್ಯಾಯಾಧೀಶರು ನೀತಿವಂತನನ್ನು ನೀತಿವಂತನೆಂದೂ ತಪ್ಪುಳ್ಳವನನ್ನು ಅಪರಾಧಿಯೆಂದೂ ನ್ಯಾಯತೀರಿಸುವರು.

2 ಅಪರಾಧಿಗೆ ಪೆಟ್ಟಿನ ಶಿಕ್ಷೆ ತಿರ್ಮಾನವಾದರೆ, ನ್ಯಾಯಾಧಿಪತಿ ಅವನನ್ನು ಮಲಗಿಸಿ, ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು ತನ್ನ ಮುಂದೆಯೇ ಹೊಡಿಸಿ ಲೆಕ್ಕಿಸಬೇಕು.

3 ಪೆಟ್ಟಿನ ಶಿಕ್ಷೆ ನಲವತ್ತಕ್ಕಿಂತ ಹೆಚ್ಚಿರಬಾರದು. ಅಷ್ಟಕ್ಕಿಂತ ಮೀರಿ ನೀವು ಹೆಚ್ಚುಪೆಟ್ಟುಗಳನ್ನು ಹೊಡಿಸಿದರೆ, ನಿಮ್ಮ ಸ್ವದೇಶದವನನ್ನು ಕೇವಲ ನೀಚನನ್ನಾಗಿ ನೀವು ಕಂಡಂತಾಗುವುದು.

4 ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು.

5 ಸಹೋದರರು ಕೂಡಿ ವಾಸಮಾಡುವಾಗ, ಅವರಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಆ ಸತ್ತವನ ಹೆಂಡತಿ ಮನೆಬಿಟ್ಟು ಅನ್ಯನನ್ನು ಮದುವೆಯಾಗಬಾರದು. ಗಂಡನ ಸಹೋದರನು ಅವಳನ್ನು ಹೆಂಡತಿಯಾಗಿ ತೆಗೆದುಕೊಂಡು ಮೈದುನನ ಕರ್ತವ್ಯವನ್ನು ಪೂರೈಸಬೇಕು.

6 ಅವಳು ಹೆರುವ ಚೊಚ್ಚಲ ಮಗನನ್ನು ಸತ್ತವನ ಮಗನೆಂದೇ ಎಣಿಸಬೇಕು, ಹೀಗೆ ಮಾಡುವುದರಿಂದ ಸತ್ತವನ ಹೆಸರು ಇಸ್ರಾಯೇಲರಲ್ಲಿ ಅಳಿದುಹೋಗುವುದಿಲ್ಲ.

7 ಆದರೆ ಆ ಮನುಷ್ಯನು ತನ್ನ ಅತ್ತಿಗೆಯನ್ನು ತೆಗೆದುಕೊಳ್ಳವ ಮನಸ್ಸಿಲ್ಲದಿದ್ದರೆ, ಅತ್ತಿಗೆಯು ಚಾವಡಿಗೆ ಹೋಗಿ ಹಿರಿಯರ ಹತ್ತಿರ ಬಂದು, “ನನ್ನ ಗಂಡನ ಸಹೋದರನು ತನ್ನ ಸಹೋದರನ ಹೆಸರನ್ನು ಇಸ್ರಾಯೇಲಿನಲ್ಲಿ ಮುಂದುವರಿಸಲು ಸಿದ್ಧನಿಲ್ಲ. ಅವನು ತನ್ನ ಮೈದುನನ ಕರ್ತವ್ಯವನ್ನು ನಡೆಸಲು ಮನಸ್ಸಿಲ್ಲದವನಾಗಿದ್ದಾನೆ,” ಎಂದು ಹೇಳಬೇಕು.

8 ಆಗ ಅವನ ಪಟ್ಟಣದ ಹಿರಿಯರು ಅವನನ್ನು ಕರೆದು, ಅವನ ಸಂಗಡ ಮಾತನಾಡಬೇಕು. ಅವನು ನಿಂತುಕೊಂಡು, “ಅವಳನ್ನು ಮದುವೆಯಾಗುವುದಕ್ಕೆ ನನಗೆ ಮನಸ್ಸಿಲ್ಲ,” ಎಂದು ಹೇಳಿದರೆ,

9 ಅವನ ಅತ್ತಿಗೆ ಹಿರಿಯರ ಮುಂದೆ ಅವನ ಬಳಿಗೆ ಬಂದು, ಕೆರವನ್ನು ಅವನ ಪಾದದಿಂದ ಬಿಡಿಸಿ, ಅವನ ಮುಖದಲ್ಲಿ ಉಗುಳಿ ಉತ್ತರಕೊಟ್ಟು, “ತನ್ನ ಸಹೋದರನ ಮನೆಯನ್ನು ಕಟ್ಟದವನಿಗೆ ಹೀಗೆಯೇ ಮಾಡಬೇಕು,” ಎಂದು ಹೇಳಲಿ.

10 ಆಮೇಲೆ ಆ ಮನುಷ್ಯನ ಮನೆಯವರಿಗೆ ಇಸ್ರಾಯೇಲಿನಲ್ಲಿ ಕೆರಬಿಚ್ಚಿಸಿಕೊಂಡವನ ಮನೆಯವರು ಎಂದು ಹೆಸರಾಗುವುದು.

11 ಇಬ್ಬರು ಮನುಷ್ಯರು, ಒಬ್ಬನ ಸಂಗಡ ಒಬ್ಬನು ಜಗಳವಾಡುತ್ತಿರುವಾಗ, ಒಬ್ಬನ ಹೆಂಡತಿ ತನ್ನ ಗಂಡನನ್ನು ಹೊಡೆಯುವವನ ಕೈಯಿಂದ ಬಿಡಿಸುವುದಕ್ಕೆ ಸಮೀಪ ಬಂದು ಕೈಚಾಚಿ, ಅವನ ಜನನೇಂದ್ರಿಯವನ್ನು ಹಿಡಿದರೆ,

12 ಅವಳ ಕೈಯನ್ನು ಕಡಿದುಹಾಕಬೇಕು. ಅವಳಿಗೆ ಕರುಣೆ ತೋರಿಸಬಾರದು.

13 ಹೆಚ್ಚು ಕಡಿಮೆಯಾಗಿರುವ ಎರಡು ವಿಧವಾದ ಕಳ್ಳ ತೂಕದ ಕಲ್ಲುಗಳನ್ನು ನಿಮ್ಮ ಚೀಲದಲ್ಲಿಟ್ಟುಕೊಳ್ಳಬಾರದು.

14 ಹೆಚ್ಚು ಕಡಿಮೆಯಾದ ಎರಡು ವಿಧವಾದ ಕಳ್ಳ ಸೇರುಗಳು ನಿಮ್ಮ ಮನೆಯಲ್ಲಿರಬಾರದು.

15 ತೂಕದ ಕಲ್ಲೂ, ಅಳತೆಯ ಸೇರೂ, ಸರಿಯಾಗಿಯೂ ನ್ಯಾಯವಾಗಿಯೂ ಇರಬೇಕು. ಆಗ ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ಭೂಮಿಯ ಮೇಲೆ ನಿನ್ನ ದಿನಗಳು ಹೆಚ್ಚಾಗುತ್ತವೆ.

16 ಅಂಥ ಅನ್ಯಾಯ ಮಾಡುವವರೆಲ್ಲರೂ ನಿನ್ನ ದೇವರಾದ ಯೆಹೋವ ದೇವರಿಗೆ ಅಸಹ್ಯ.

17 ನೀವು ಈಜಿಪ್ಟನ್ನು ಬಿಟ್ಟು ಬರುವ ಮಾರ್ಗದಲ್ಲಿ ಅಮಾಲೇಕ್ಯರು ನಿನಗೆ ಮಾಡಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ.

18 ಅವರು ಮಾರ್ಗದಲ್ಲಿ ನಿಮಗೆ ಎದುರುಗೊಂಡು, ನೀವು ಆಯಾಸವುಳ್ಳವರಾಗಿಯೂ, ದಣಿದವರಾಗಿಯೂ ಇದ್ದ ಸಮಯದಲ್ಲಿ ನಿಮ್ಮ ಹಿಂದೆ ಇದ್ದ ಬಲಹೀನರೆಲ್ಲರನ್ನು ಹಿಂಭಾಗದಲ್ಲಿ ಸಂಹಾರ ಮಾಡಿದರು. ಅವರಿಗೆ ದೇವರ ಬಗ್ಗೆ ಯಾವ ಭಯವೂ ಇರಲಿಲ್ಲ.

19 ಆದ್ದರಿಂದ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಶಮಾಡಿಕೊಳ್ಳುವುದಕ್ಕೆ ಸೊತ್ತಾಗಿ ಕೊಡುವ ದೇಶದ ಸುತ್ತಲು ಇರುವ ಶತ್ರುಗಳಿಂದ ನಿಮ್ಮನ್ನು ಬಿಡಿಸಿ, ವಿಶ್ರಾಂತಿ ಕೊಡುವರು. ಆಗ ನೀವು ಅಮಾಲೇಕ್ಯರ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು, ಇದನ್ನು ಮರೆಯಬಾರದು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು