ಜ್ಞಾನೋಕ್ತಿಗಳು 25 - ಕನ್ನಡ ಸಮಕಾಲಿಕ ಅನುವಾದಮತ್ತಷ್ಟು ಸೊಲೊಮೋನನ ಜ್ಞಾನೋಕ್ತಿಗಳು 1 ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಬರೆದಿರುವ ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳೇ. 2 ವಿಷಯವನ್ನು ರಹಸ್ಯ ಮಾಡುವುದು ದೇವರ ಮಹಿಮೆ. ಒಂದು ವಿಷಯವನ್ನು ಹುಡುಕುವುದು ರಾಜರ ಮಹಿಮೆ. 3 ಆಕಾಶದ ಎತ್ತರವನ್ನು, ಭೂಮಿಯ ಆಳವನ್ನು ಯಾರೂ ಗ್ರಹಿಸಲು ಸಾಧ್ಯವಿಲ್ಲ. ಹಾಗೆಯೇ ಅರಸರ ಹೃದಯವು ಅಗೋಚರ. 4 ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ, ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯು ರೂಪಗೊಳ್ಳುವುದು. 5 ಅರಸನ ಸನ್ನಿಧಾನದಿಂದ ದುಷ್ಟರನ್ನು ತೆಗೆದುಹಾಕಿದರೆ, ಆಗ ಅವನ ಸಿಂಹಾಸನವು ನೀತಿಯಲ್ಲಿ ಸ್ಥಿರವಾಗುವುದು. 6 ಅರಸನ ಸನ್ನಿಧಿಯಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ದೊಡ್ಡವರಿಗೆ ಏರ್ಪಡಿಸಿದ ಸ್ಥಾನವನ್ನು ಕೇಳಬೇಡ. 7 ಘನವಂತರ ಸನ್ನಿಧಿಯಲ್ಲಿ ನಿನ್ನನ್ನು ತಗ್ಗಿಸಿಕೊಳ್ಳುವುದಕ್ಕಿಂತ, “ಮೇಲಕ್ಕೆ ಬಾ,” ಎಂದು ಅರಸನು ನಿನಗೆ ಹೇಳುವುದು ಲೇಸು. ನೀವು ಏನನ್ನೋ ಕಂಡಿದ್ದರಿಂದ, 8 ದುಡುಕಿ ವ್ಯಾಜ್ಯಮಾಡುವುದಕ್ಕಾಗಿ ಹೋಗಬೇಡ. ಏಕೆಂದರೆ ನಿನ್ನ ನೆರೆಯವನು ನಿನ್ನನ್ನು ಅವಮಾನ ಮಾಡಿದಾಗ, ನೀನು ಕಡೆಯಲ್ಲಿ ಏನು ಮಾಡುವೆ? 9 ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಇನ್ನೊಬ್ಬರ ಗುಟ್ಟನ್ನು ಬಹಿರಂಗಪಡಿಸಬೇಡ, 10 ಅದನ್ನು ಕೇಳುವವನು ನಿನ್ನನ್ನು ಅವಮಾನಕ್ಕೆ ಗುರಿಪಡಿಸಿಯಾನು; ನಿನ್ನ ಅಪಕೀರ್ತಿಯು ಹೋಗದೆ ಇದ್ದೀತು. 11 ಸಮಯೋಚಿತವಾದ ಮಾತು ಬೆಳ್ಳಿಯ ಚಿತ್ರಗಳಲ್ಲಿ ಬಂಗಾರದ ಸೇಬಿನಂತಿದೆ. 12 ಕೇಳುವ ಕಿವಿಗೆ ಜ್ಞಾನಿಯ ತಿದ್ದುವಿಕೆಯು ಬಂಗಾರದ ಮುರು; ಚೊಕ್ಕ ಬಂಗಾರದ ಆಭರಣ. 13 ಸುಗ್ಗಿಯ ಕಾಲದಲ್ಲಿ ಹಿಮದ ಶೀತದ ಹಾಗೆ ತನ್ನನ್ನು ಕಳುಹಿಸುವವರಿಗೆ ನಂಬಿಗಸ್ತನಾದ ಸೇವಕನಿದ್ದಾನೆ; ಏಕೆಂದರೆ ತನ್ನ ಯಜಮಾನರ ಪ್ರಾಣವನ್ನು ಅವನು ನವಚೈತನ್ಯಗೊಳಿಸುತ್ತಾನೆ. 14 ದಾನ ಕೊಡದೆ ಕೊಟ್ಟಿದ್ದೇನೆಂದು ಹೊಗಳಿಕೊಳ್ಳುವವನು, ಮಳೆ ಇಲ್ಲದ ಮೋಡಗಳ ಮತ್ತು ಗಾಳಿಯ ಹಾಗೆ ಇದ್ದಾನೆ. 15 ತಾಳ್ಮೆಯ ಮೂಲಕ ಪ್ರಭುವನ್ನು ಒಲಿಸಿಕೊಳ್ಳಬಹುದು; ಮೃದುವಾದ ಮಾತು ಎಲುಬನ್ನು ಮುರಿಯುತ್ತದೆ. 16 ಜೇನನ್ನು ಕಂಡುಕೊಂಡಿದ್ದೀಯಾ? ಅದನ್ನು ನಿನಗೆ ತೃಪ್ತಿಯಾಗುವಷ್ಟೇ ತಿನ್ನು; ಹೊಟ್ಟೆ ತುಂಬಾ ತಿಂದರೆ ಕಾರಬೇಕಾದೀತು. 17 ನಿನ್ನ ನೆರೆಯವನ ಮನೆಗೆ ಅಪರೂಪಕ್ಕೆ ಹೆಜ್ಜೆ ಇಡು; ಇಲ್ಲವಾದರೆ ನಿನ್ನ ವಿಷಯವಾಗಿ ಅವನು ಬೇಸರಗೊಂಡು ನಿನ್ನನ್ನು ಹಗೆಮಾಡಾನು. 18 ತನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳುವವನು ಚಮಟಿಗೆ, ಖಡ್ಗ, ಹರಿತವಾದ ಬಾಣವಾಗಿದ್ದಾನೆ. 19 ಕಷ್ಟಕಾಲದಲ್ಲಿ ಅಪನಂಬಿಗಸ್ತನಾದ ಮನುಷ್ಯನಲ್ಲಿಯ ಭರವಸೆಯು ಮುರಿದ ಹಲ್ಲು, ಕೀಲು ತಪ್ಪಿದ ಪಾದವು. 20 ಮನಗುಂದಿದವನಿಗೆ ಸಂಗೀತ ಹಾಡುವುದು ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆಯೂ ಹುಳಿ ಉಪ್ಪನ್ನು ಗಾಯಕ್ಕೆ ಹಚ್ಚಿದಂತೆಯೂ. 21 ನಿನ್ನ ಶತ್ರು ಹಸಿದಿದ್ದರೆ ಉಣ್ಣುವುದಕ್ಕೆ ಅವನಿಗೆ ಊಟಕೊಡು; ಅವನು ಬಾಯಾರಿದ್ದರೆ ಕುಡಿಯುವುದಕ್ಕೆ ನೀರು ಕೊಡು. 22 ಏಕೆಂದರೆ ಅದು ಅವನ ತಲೆಯ ಮೇಲೆ ಉರಿಯುವ ಬೆಂಕಿಯ ಕೆಂಡಗಳನ್ನು ಸುರಿಯುವಂತಿರುವುದು; ಯೆಹೋವ ದೇವರು ನಿನಗೆ ಪ್ರತಿಫಲ ಕೊಡುವರು. 23 ಅನಿರೀಕ್ಷಿತ ಮಳೆಯನ್ನು ತರುವ ಉತ್ತರದ ಗಾಳಿಯಂತೆ ಚಾಡಿಯ ನಾಲಿಗೆ ಕೋಪದ ಮುಖ ಮಾಡುತ್ತದೆ. 24 ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವುದಕ್ಕಿಂತ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದು ಲೇಸು. 25 ಬಾಯಾರಿದವನಿಗೆ ತಣ್ಣೀರು ಹೇಗೋ ದೂರದೇಶದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ. 26 ದುಷ್ಟರ ಮುಂದೆ ನೀತಿವಂತನು ಸೋಲುವುದು, ಕೆಸರಿನ ಬುಗ್ಗೆಗೂ ಕೊಳಕು ಒರತೆಗೂ ಸಮಾನ. 27 ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ; ಹಾಗೆಯೇ ಮನುಷ್ಯರು ಸ್ವಂತ ಗೌರವವನ್ನು ಹುಡುಕುವುದು ಗೌರವವಲ್ಲ. 28 ತನ್ನ ಸ್ವಂತ ಆತ್ಮವನ್ನು ಆಳದಿರುವವನು, ಗೋಡೆ ಬಿದ್ದ ಹಾಳೂರಿಗೆ ಸಮಾನ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.