Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 21 - ಕನ್ನಡ ಸಮಕಾಲಿಕ ಅನುವಾದ

1 ಅರಸನ ಹೃದಯವು ಯೆಹೋವ ದೇವರ ಕೈಯಲ್ಲಿ ನೀರಿನ ಕಾಲುವೆಗಳಂತೆ; ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ.

2 ಮನುಷ್ಯನ ಪ್ರತಿಯೊಂದು ಮಾರ್ಗವು ಅವನ ದೃಷ್ಟಿಯಲ್ಲಿ ಸರಿಯಾಗಿದೆ; ಆದರೆ ಯೆಹೋವ ದೇವರು ಹೃದಯಗಳನ್ನು ಪರೀಕ್ಷಿಸುತ್ತಾರೆ.

3 ಯಜ್ಞಕ್ಕಿಂತ ನೀತಿ ನ್ಯಾಯಗಳನ್ನು ನಡೆಸುವುದು ಯೆಹೋವ ದೇವರಿಗೆ ಎಷ್ಟೋ ಮೆಚ್ಚಿಗೆಯಾಗಿದೆ.

4 ಹೆಮ್ಮೆಯ ದೃಷ್ಟಿ, ಗರ್ವದ ಹೃದಯ, ದುಷ್ಟರ ಉಳುವಿಕೆ ಇವೆಲ್ಲಾ ಪಾಪವೇ.

5 ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ; ಆತುರತೆಯು ಬಡತನಕ್ಕೆ ನಡೆಸುತ್ತದೆ.

6 ಸುಳ್ಳಿನ ನಾಲಿಗೆಯಿಂದ ಸಂಪಾದಿಸಿದ ಸಂಪತ್ತು ಕ್ಷಣಿಕ ಆವಿಯಂತೆಯೂ ಮೃತ್ಯುಪಾಶದಂತೆಯೂ ಆಗಿದೆ.

7 ದುಷ್ಟರ ಹಿಂಸೆಯು ಅವರನ್ನು ನಾಶಪಡಿಸುವುದು; ಏಕೆಂದರೆ ನ್ಯಾಯವಾದದ್ದನ್ನು ಮಾಡುವುದನ್ನು ಅವರು ನಿರಾಕರಿಸುತ್ತಾರೆ.

8 ದೋಷಿಯ ಮಾರ್ಗವು ಡೊಂಕು, ಮುಗ್ಧನ ನಡತೆ ಯಥಾರ್ಥ.

9 ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವುದಕ್ಕಿಂತ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದು ಲೇಸು.

10 ದುಷ್ಟರು ಕೇಡನ್ನು ಅಪೇಕ್ಷಿಸುತ್ತಾರೆ; ಅವನು ತನ್ನ ನೆರೆಯವನಿಗೂ ಯಾವ ದಯೆಯನ್ನೂ ತೋರಿಸನು.

11 ಪರಿಹಾಸ್ಯಕಾರರನ್ನು ಶಿಕ್ಷಿಸಿದರೆ, ಮುಗ್ಧರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ, ಅವನು ಪರಿಜ್ಞಾನವನ್ನು ಹೊಂದುತ್ತಾನೆ.

12 ನೀತಿವಂತನು ದುಷ್ಟರ ಮನೆಯನ್ನು ಗಮನಿಸುತ್ತಾನೆ; ದುಷ್ಟರನ್ನು ಕೇಡಿಗೆ ತಳ್ಳುವನು.

13 ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನೇ ಕೂಗಿದಾಗ ಯಾರೂ ಅವನಿಗೆ ಉತ್ತರ ಕೊಡುವುದಿಲ್ಲ.

14 ಗುಟ್ಟಾಗಿ ಕೊಡುವ ಬಹುಮಾನವು ಕೋಪವನ್ನು ಅಡಗಿಸುವುದು; ಮಡಿಲಲ್ಲಿ ಇಟ್ಟ ಲಂಚವು ಮಹಾ ಕೋಪವನ್ನು ಆರಿಸುವುದು.

15 ನ್ಯಾಯತೀರಿಸುವುದು ನೀತಿವಂತರಿಗೆ ಸಂತೋಷ; ಆದರೆ ಕೆಟ್ಟದ್ದನ್ನು ಮಾಡುವವರಿಗೆ ಭೀತಿ.

16 ವಿವೇಕದ ಹಾದಿಯಿಂದ ತಪ್ಪಿಸಿಕೊಳ್ಳುವವನು ಸತ್ತವರ ಸಹವಾಸದಲ್ಲಿ ವಿಶ್ರಾಂತಿ ಪಡೆಯುವನು.

17 ಭೋಗಾಸಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ, ತೈಲವನ್ನೂ ಅಪೇಕ್ಷಿಸುವವನು ಎಂದಿಗೂ ಧನವಂತನಾಗನು.

18 ದುಷ್ಟರು ನೀತಿವಂತರಿಗೂ, ದ್ರೋಹಿಗಳು ಸನ್ಮಾರ್ಗಿಗಳಿಗೂ ಈಡಾಗಿದ್ದಾರೆ.

19 ಕಾಡುವ ಜಗಳಗಂಟಿ ಹೆಂಡತಿಯೊಂದಿಗೆ ವಾಸಮಾಡುವುದಕ್ಕಿಂತ, ಮರಭೂಮಿಯಲ್ಲಿ ವಾಸಿಸುವುದು ಲೇಸು.

20 ಜ್ಞಾನವಂತರ ನಿವಾಸದಲ್ಲಿ ಆಯ್ದ ಐಶ್ವರ್ಯವೂ, ಎಣ್ಣೆಯೂ ಇರುತ್ತವೆ; ಆದರೆ ಬುದ್ಧಿಹೀನನು ಇದ್ದದ್ದೆಲ್ಲವನ್ನು ನುಂಗಿಬಿಡುತ್ತಾನೆ.

21 ನೀತಿಯನ್ನೂ, ಕರುಣೆಯನ್ನೂ ಹಿಂಬಾಲಿಸುವವನು ಜೀವವನ್ನೂ, ನೀತಿಯನ್ನೂ, ಕೀರ್ತಿಯನ್ನೂ ಕಂಡುಕೊಳ್ಳುತ್ತಾನೆ.

22 ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ, ಅವರು ಭರವಸವಿಟ್ಟ ಬಲವಾದ ಕೋಟೆಯನ್ನು ಕೆಡವಿ ಹಾಕುತ್ತಾನೆ.

23 ತನ್ನ ಬಾಯಿಯನ್ನೂ, ನಾಲಿಗೆಯನ್ನೂ ಕಾಯುವವನು, ಇಕ್ಕಟ್ಟುಗಳಿಂದ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತಾನೆ.

24 ಸೊಕ್ಕೇರಿ ಗರ್ವದಲ್ಲಿ ವರ್ತಿಸುವವನ ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕ.

25 ಸೋಮಾರಿಯ ಆಸೆಯು ಅವನನ್ನು ಕೊಲ್ಲುತ್ತದೆ; ಅವನ ಕೈಗಳು ದುಡಿಯುವುದಕ್ಕೆ ನಿರಾಕರಿಸುತ್ತವೆ.

26 ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ; ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ.

27 ದುಷ್ಟರ ಯಜ್ಞವು ಅಸಹ್ಯ; ಅದನ್ನು ದುರ್ಬುದ್ಧಿಯಿಂದ ಅರ್ಪಿಸಿದರೆ, ಇನ್ನೂ ಎಷ್ಟೋ ಅಸಹ್ಯಕರ.

28 ಸುಳ್ಳುಸಾಕ್ಷಿಯವನು ನಾಶವಾಗುವನು; ಆದರೆ ಕೇಳಿದ್ದನ್ನೇ ನುಡಿಯುವವನ ಸಾಕ್ಷಿ ಸದಾ ನಿಲ್ಲುವುದು.

29 ದುಷ್ಟನು ತನ್ನ ಮುಖವನ್ನು ಕಠಿಣ ಮಾಡಿಕೊಳ್ಳುತ್ತಾನೆ; ಯಥಾರ್ಥವಂತನಾದರೋ ತನ್ನ ಮಾರ್ಗಗಳನ್ನು ಯೋಚಿಸುತ್ತಾರೆ.

30 ಯೆಹೋವ ದೇವರಿಗೆ ವಿರೋಧವಾಗಿ ಯಾವ ಜ್ಞಾನವೂ, ವಿವೇಕವೂ, ಯೋಜನೆಯೂ ಇಲ್ಲ.

31 ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಆದರೆ ಜಯ ದೊರೆಯುವುದು ಯೆಹೋವ ದೇವರಿಂದಲೇ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು