Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಗಲಾತ್ಯದವರಿಗೆ 6 - ಕನ್ನಡ ಸಮಕಾಲಿಕ ಅನುವಾದ


ಸರ್ವರಿಗೂ ಒಳಿತನ್ನು ಮಾಡೋಣ

1 ಪ್ರಿಯರೇ, ಒಬ್ಬ ಮನುಷ್ಯನು ಯಾವುದಾದರೊಂದು ಪಾಪದಲ್ಲಿ ಸಿಕ್ಕಿಬಿದ್ದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕ ಆತ್ಮದಿಂದ ಪುನಃ ಸ್ಥಾಪಿಸಿರಿ. ಆದರೆ ನೀನು ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.

2 ಒಬ್ಬನು ಮತ್ತೊಬ್ಬನ ಭಾರವನ್ನು ಹೊತ್ತುಕೊಳ್ಳಲಿ. ಹೀಗೆ ಕ್ರಿಸ್ತ ಯೇಸುವಿನ ನಿಯಮವನ್ನು ನೆರವೇರಿಸಿರಿ.

3 ಏನೂ ಅಲ್ಲದವನೊಬ್ಬನು ತಾನು ಏನೋ ಆಗಿದ್ದೇನೆಂದು ಭಾವಿಸಿಕೊಂಡರೆ, ತನ್ನನ್ನು ತಾನೇ ವಂಚಿಸಿಕೊಳ್ಳುತ್ತಾನೆ.

4 ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನು ತನ್ನಲ್ಲಿ ಮಾತ್ರ ಸಂತೋಷಪಡುವುದಕ್ಕೆ ಆಸ್ಪದವಾಗುವುದೇ ಹೊರತು ಮತ್ತೊಬ್ಬನಲ್ಲಿ ಅಲ್ಲ.

5 ಏಕೆಂದರೆ ಪ್ರತಿಯೊಬ್ಬನೂ ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.

6 ವಾಕ್ಯದಲ್ಲಿ ಉಪದೇಶ ಹೊಂದುವವನು, ಉಪದೇಶ ಮಾಡುವವನೊಂದಿಗೆ ಒಳ್ಳೆಯದನ್ನೆಲ್ಲಾ ಹಂಚಿಕೊಳ್ಳಲಿ.

7 ಮೋಸಹೋಗಬೇಡಿರಿ, ದೇವರು ಪರಿಹಾಸ್ಯಕ್ಕೆ ಒಳಗಾಗುವವರಲ್ಲ. ಏಕೆಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.

8 ಮಾಂಸಭಾವಕ್ಕೆ ಬಿತ್ತುವವನು, ಮಾಂಸಭಾವದಿಂದ ನಾಶವನ್ನು ಕೊಯ್ಯುವನು. ಆದರೆ ದೇವರ ಆತ್ಮರನ್ನು ಮೆಚ್ಚಿಸಲು ಬಿತ್ತುವವನು, ಆತ್ಮದಿಂದ ನಿತ್ಯಜೀವವನ್ನು ಕೊಯ್ಯುವನು.

9 ಒಳ್ಳೆಯದನ್ನು ಮಾಡುವುದರಲ್ಲಿ ಎದೆಗುಂದದಿರೋಣ. ಏಕೆಂದರೆ ನಾವು ಬೇಸರಗೊಳ್ಳದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.

10 ಆದ್ದರಿಂದ ನಮಗೆ ಸಮಯವಿರಲಾಗಿ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ. ಮುಖ್ಯವಾಗಿ ವಿಶ್ವಾಸಿಗಳ ಕುಟುಂಬದವರಿಗೆ ಮಾಡೋಣ.


ಕಡೆಯ ಮಾತುಗಳು

11 ನನ್ನ ಕೈಯಿಂದ ಎಷ್ಟು ದೊಡ್ಡ ಅಕ್ಷರಗಳಲ್ಲಿ ನಾನು ನಿಮಗೆ ಬರೆದಿದ್ದೇನೆ ನೋಡಿರಿ.

12 ಶರೀರದಲ್ಲಿ ಅಂದವಾಗಿ ಕಾಣಬೇಕೆಂದು ಇಷ್ಟಪಡುವವರೂ ತಮಗೆ ಕ್ರಿಸ್ತ ಯೇಸುವಿನ ಶಿಲುಬೆಯ ನಿಮಿತ್ತ ಹಿಂಸೆಯಾಗಬಾರದೆಂಬುದಕ್ಕಾಗಿಯೇ ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಿಮ್ಮನ್ನು ಒತ್ತಾಯ ಮಾಡುತ್ತಾರೆ.

13 ಸುನ್ನತಿ ಮಾಡಿಸಿಕೊಳ್ಳುವ ತಾವಾದರೋ ನಿಯಮವನ್ನು ಕೈಗೊಂಡು ನಡೆಯುವುದಿಲ್ಲ. ಆದರೆ ಅವರು ನಿಮ್ಮ ಶರೀರದ ಸುನ್ನತಿಯಿಂದ ಹೆಚ್ಚಳಪಡುವಂತೆ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.

14 ನನಗಾದರೋ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಶಿಲುಬೆಯನ್ನು ಬಿಟ್ಟು ಹೆಚ್ಚಳ ಪಡುವುದು ಬೇಡವೇ ಬೇಡ. ಅವರ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡಿತು. ನಾನು ಲೋಕದ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ.

15 ಸುನ್ನತಿಯಾಗುವುದರಿಂದ ಇಲ್ಲವೆ, ಸುನ್ನತಿಯಾಗದೆ ಇರುವುದರಿಂದ ಏನೂ ಪ್ರಯೋಜನವಿಲ್ಲ. ಆದರೆ ಹೊಸ ಸೃಷ್ಟಿಯೇ ಬೇಕು.

16 ಈ ಸೂತ್ರಕ್ಕೆ ಸರಿಯಾಗಿ ನಡೆಯುವವರೆಲ್ಲರ ಮೇಲೆಯೂ ದೇವರ ಇಸ್ರಾಯೇಲಿನ ಸಮಾಧಾನ ಹಾಗೂ ಕರುಣೆ ಇರಲಿ.

17 ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡಬಾರದು. ನಾನು ನನ್ನ ದೇಹದಲ್ಲಿ ಕರ್ತ ಆಗಿರುವ ಯೇಸುವಿನ ಗುರುತುಗಳನ್ನು ಪಡೆದಿದ್ದೇನೆ.

18 ಪ್ರಿಯರೇ, ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ. ಆಮೆನ್.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು