ಕೀರ್ತನೆಗಳು 91 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 91 1 ಮಹೋನ್ನತ ದೇವರ ಆಶ್ರಯದಲ್ಲಿ ವಾಸಿಸುವವರು ಸರ್ವಶಕ್ತರ ನೆರಳಿನಲ್ಲಿ ವಿಶ್ರಮಿಸುವರು. 2 “ನನ್ನ ಆಶ್ರಯವೂ, ನನ್ನ ಕೋಟೆಯೂ, ನಾನು ಭರವಸೆ ಇಡುವ ನನ್ನ ದೇವರೂ ಎಂದು ನಾನು ಯೆಹೋವ ದೇವರಿಗೆ ಹೇಳುವೆನು.” 3 ನಿಶ್ಚಯವಾಗಿ ದೇವರು ನಿಮ್ಮನ್ನು ಬೇಡನ ಉರುಲಿನಿಂದ ರಕ್ಷಿಸುವರು. ಮರಣಾಂತಿಕವಾದ ಸಾಂಕ್ರಾಮಿಕ ರೋಗದಿಂದಲೂ ಬಿಡಿಸುವರು. 4 ತಮ್ಮ ರೆಕ್ಕೆಗಳಿಂದ ನಿಮ್ಮನ್ನು ಹೊದಿಸುವರು. ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿರಿ. ದೇವರ ಸತ್ಯತೆಯು ನಿಮ್ಮ ಖೇಡ್ಯವೂ ಕೋಟೆಯೂ ಆಗಿರುವುದು. 5 ರಾತ್ರಿಯ ಭಯಂಕರತೆಗೆ ನೀನು ಅಂಜಬೇಕಾಗಿಲ್ಲ, ಹಗಲಿನಲ್ಲಿ ಹಾರುವ ಬಾಣಕ್ಕೂ ಹೆದರಬೇಕಾಗಿರುವುದಿಲ್ಲ. 6 ಅಂಧಕಾರದಲ್ಲಿ ಬೆನ್ನಟ್ಟಿ ಬರುವ ವಿಪತ್ತಿಗೆ ಕಳವಳಪಡದಿರುವೆ. ಮಧ್ಯಾಹ್ನದಲ್ಲಿ ಹಾಳುಮಾಡುವ ವ್ಯಾಧಿಗೂ ನೀನು ಭಯಪಡದಿರುವೆ. 7 ನಿಮ್ಮ ಪಕ್ಕದಲ್ಲಿ ಸಾವಿರ ಜನರು ಬಿದ್ದರೂ ನಿಮ್ಮ ಬಲಗಡೆಯಲ್ಲಿ ಹತ್ತು ಸಾವಿರ ಜನರು ಬಿದ್ದಾಗ್ಯೂ, ನಿಮ್ಮ ಸಮೀಪಕ್ಕೆ ಅದು ಬರುವುದಿಲ್ಲ. 8 ನಿನ್ನ ಕಣ್ಣುಗಳಿಂದ ಮಾತ್ರ ನೀನು ಗಮನಿಸುವೆ. ದುಷ್ಟರಿಗೆ ಪ್ರತಿದಂಡನೆ ಆಗುವುದನ್ನು ಸಹ ನೀನು ಕಾಣುವೆ. 9 “ಮಹೋನ್ನತ ದೇವರು ನಮ್ಮ ಆಶ್ರಯ,” ಎಂದು ಹೇಳುವದಾದರೆ, ಯೆಹೋವ ದೇವರು ನಿಮ್ಮ ನಿವಾಸವಾಗಿ ಮಾಡಿಕೊಂಡರೆ, 10 ಯಾವ ಕೇಡೂ ನಿಮ್ಮನ್ನು ಮುಟ್ಟದು, ಯಾವ ವಿಪತ್ತು ನಿಮ್ಮನ್ನು ಸಮೀಪಿಸುವುದಿಲ್ಲ. 11 ಏಕೆಂದರೆ ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವುದಕ್ಕೆ ದೇವರು ತಮ್ಮ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವರು. 12 ನಿಮ್ಮ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು. 13 ಸಿಂಹದ ಮೇಲೆಯೂ ಸರ್ಪದ ಮೇಲೆಯೂ ನಡೆಯುವೆ. ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದುಬಿಡುವೆ. 14 “ಆತನು ನನ್ನನ್ನು ಪ್ರೀತಿಸುವುದರಿಂದ ಆತನನ್ನು ಸಂರಕ್ಷಿಸುವೆನು. ಆತನು ನನ್ನ ನಾಮವನ್ನು ಸ್ವೀಕರಿಸಿದ್ದರಿಂದ ಆತನನ್ನು ಕಾಪಾಡುವೆನು. 15 ಆತನು ನನ್ನನ್ನು ಕರೆಯುವನು ನಾನು ಆತನಿಗೆ ಉತ್ತರಕೊಡುವೆನು. ಇಕ್ಕಟ್ಟಿನಲ್ಲಿ ನಾನು ಆತನ ಸಂಗಡ ಇದ್ದು, ಆತನನ್ನು ಘನಪಡಿಸುವೆನು. 16 ದೀರ್ಘಾಯುಷ್ಯದಿಂದ ಆತನನ್ನು ತೃಪ್ತಿಪಡಿಸಿ, ನನ್ನ ರಕ್ಷಣೆಯನ್ನು ಆತನಿಗೆ ತೋರಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.