Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 86 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 86
ದಾವೀದನ ಪ್ರಾರ್ಥನೆ.

1 ಯೆಹೋವ ದೇವರೇ, ನನಗೆ ಉತ್ತರಕೊಡಿರಿ. ನಾನು ದೀನನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ.

2 ನನ್ನ ಪ್ರಾಣವನ್ನು ಕಾಪಾಡಿರಿ, ನಾನು ನಿಮ್ಮ ಭಕ್ತ, ನೀವು ನನ್ನ ದೇವರು. ನಿಮ್ಮಲ್ಲಿ ಭರವಸವಿಟ್ಟಿರುವ ನಿಮ್ಮ ಸೇವಕನನ್ನು ರಕ್ಷಿಸಿರಿ.

3 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ. ನಿಮಗೆ ದಿನವೆಲ್ಲಾ ಮೊರೆಯಿಡುತ್ತೇನೆ.

4 ನಿಮ್ಮ ಸೇವಕನ ಪ್ರಾಣವನ್ನು ಸಂತೋಷಪಡಿಸಿರಿ. ಯೆಹೋವ ದೇವರೇ, ನಿಮ್ಮಲ್ಲೇ ನನ್ನ ಪ್ರಾಣವನ್ನು ಇಟ್ಟಿದ್ದೇನೆ.

5 ಯೆಹೋವ ದೇವರೇ, ನೀವು ಒಳ್ಳೆಯವರೂ ಕ್ಷಮಿಸುವುದಕ್ಕೆ ಸಿದ್ಧರೂ ಆಗಿದ್ದೀರಿ. ನಿಮ್ಮನ್ನು ಬೇಡುವವರೆಲ್ಲರಿಗೆ ಪ್ರೀತಿಯಲ್ಲಿ ಸಮೃದ್ಧಿವಂತರೂ ಆಗಿರುವಿರಿ.

6 ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ. ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸಿರಿ.

7 ನನ್ನ ಇಕ್ಕಟ್ಟಿನ ದಿವಸದಲ್ಲಿ ನಿಮ್ಮನ್ನು ಕರೆಯುವೆನು. ನೀವು ನನಗೆ ಉತ್ತರ ಕೊಡುವಿರಿ.

8 ಯೆಹೋವ ದೇವರೇ, ದೇವರುಗಳಲ್ಲಿ ನಿಮ್ಮ ಹಾಗೆ ಯಾರೂ ಇಲ್ಲ. ನಿಮ್ಮ ಕೆಲಸಗಳ ಹಾಗೆ ಒಂದೂ ಇಲ್ಲ.

9 ಯೆಹೋವ ದೇವರೇ, ನೀವು ಉಂಟುಮಾಡಿದ ಜನಾಂಗದವರೆಲ್ಲರೂ ಬಂದು ನಿಮ್ಮ ಮುಂದೆ ಅಡ್ಡಬಿದ್ದು, ನಿಮ್ಮ ಹೆಸರಿಗೆ ಮಹಿಮೆ ಸಲ್ಲಿಸುವರು.

10 ನೀವು ದೊಡ್ಡವರೂ ಅದ್ಭುತಗಳನ್ನು ಮಾಡುವವರೂ ಆಗಿದ್ದೀರಿ. ನೀವೊಬ್ಬರೇ ದೇವರು.

11 ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ. ಆಗ, ನಿಮ್ಮ ಸತ್ಯದಲ್ಲಿ ನಡೆದುಕೊಳ್ಳುವೆನು; ನಿಮ್ಮ ಹೆಸರಿಗೆ ಭಯಪಡುವಂತೆ ನನಗೆ ವಿಭಾಗವಿಲ್ಲದೆ ಹೃದಯವನ್ನು ದಯಪಾಲಿಸಿರಿ.

12 ನನ್ನ ದೇವರಾದ ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಕೊಂಡಾಡುವೆನು. ನಿಮ್ಮ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.

13 ನಿಮ್ಮ ಪ್ರೀತಿಯು ನನ್ನ ಮೇಲೆ ಅಗಾಧವಾಗಿದೆ. ಕೆಳಗಿನ ಪಾತಾಳದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀರಿ.

14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ. ಬಲಾತ್ಕಾರಿಗಳ ಗುಂಪು ನನ್ನ ಪ್ರಾಣವನ್ನು ಹುಡುಕುತ್ತದೆ. ಅವರು ನಿಮ್ಮನ್ನು ಗೌರವಿಸುವವರಲ್ಲ.

15 ಆದರೆ ನೀವು ಯೆಹೋವ ದೇವರೇ, ಅನುಕಂಪವೂ ದಯೆಯೂ ಉಳ್ಳ ದೇವರು ಮತ್ತು ದೀರ್ಘಶಾಂತರೂ ಪ್ರೀತಿಯಲ್ಲಿ ಸಮೃದ್ಧಿವಂತನೂ ಸತ್ಯತೆಯುಳ್ಳವರೂ ಆಗಿದ್ದೀರಿ.

16 ನನ್ನ ಕಡೆಗೆ ತಿರುಗಿಕೊಂಡು ನನ್ನನ್ನು ಕರುಣಿಸಿರಿ. ನಿಮ್ಮ ಸೇವಕನಿಗೆ ನಿಮ್ಮ ಬಲವನ್ನು ತೋರಿಸಿರಿ. ನನ್ನ ತಾಯಿ ನಿನ್ನ ಸೇವೆಮಾಡಿದಂತೆ ನಾನು ಸಹ ಸೇವೆಮಾಡುವುದರಿಂದ ನನ್ನನ್ನು ರಕ್ಷಿಸಿರಿ.

17 ನನಗಾಗಿ ನಿಮ್ಮ ಉಪಕಾರದ ಗುರುತೊಂದನ್ನು ತೋರಿಸಿರಿ. ಆಗ ನನ್ನ ವೈರಿಗಳು ಅದನ್ನು ಕಂಡು ನಾಚಿಕೆಪಡುವರು. ಏಕೆಂದರೆ ಯೆಹೋವ ದೇವರೇ, ನೀವು ನನಗೆ ಸಹಾಯಮಾಡಿ ನನ್ನನ್ನು ಆದರಿಸಿದ್ದೀರಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು