Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 85 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 85
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ; ಕೋರಹೀಯರ ಕೀರ್ತನೆ.

1 ಯೆಹೋವ ದೇವರೇ, ನಿಮ್ಮ ದೇಶವನ್ನು ನೀವು ದಯೆ ತೋರಿಸಿದ್ದೀರಿ. ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರಮಾಡಿದ್ದೀರಿ.

2 ನಿಮ್ಮ ಜನರ ಅಕ್ರಮವನ್ನು ಪರಿಹರಿಸಿದ್ದೀರಿ. ಅವರ ಪಾಪವನ್ನೆಲ್ಲಾ ಮುಚ್ಚಿದ್ದೀರಿ.

3 ನಿಮ್ಮ ಕೋಪವನ್ನೆಲ್ಲಾ ತೆಗೆದುಬಿಟ್ಟಿದ್ದೀರಿ. ನಿಮ್ಮ ಬೇಸರದಿಂದ ತಿರುಗಿಕೊಂಡಿದ್ದೀರಿ.

4 ನಮ್ಮ ರಕ್ಷಕ ಆಗಿರುವ ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ, ನಮ್ಮ ಮೇಲಿರುವ ನಿಮ್ಮ ಅಸಂತೋಷವನ್ನು ತೊಲಗಿಸಿರಿ.

5 ಎಂದೆಂದಿಗೂ ನಮ್ಮ ಮೇಲೆ ಖಂಡಿಸುವಿರೋ? ತಲತಲಾಂತರಕ್ಕೂ ನಿಮ್ಮ ಬೇಸರ ಬೆಳೆಸುವಿರೋ?

6 ನಿಮ್ಮ ಜನರು ನಿಮ್ಮಲ್ಲಿ ಸಂತೋಷಪಡುವಂತೆ ನೀವು ತಿರುಗಿ ನಮ್ಮನ್ನು ಉಜ್ಜೀವಿಸುವುದಿಲ್ಲವೋ?

7 ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು ನಮಗೆ ತೋರಿಸಿರಿ. ನಿಮ್ಮ ರಕ್ಷಣೆಯನ್ನು ನಮಗೆ ಕೊಡಿರಿ.

8 ಯೆಹೋವ ದೇವರು ಏನು ಹೇಳುತ್ತಾರೋ ಅದನ್ನು ನಾನು ಕೇಳುವೆನು. ದೇವರು ತಮ್ಮ ಜನರಿಗೂ ತಮ್ಮ ಭಕ್ತರಿಗೂ ಸಮಾಧಾನವನ್ನು ವಾಗ್ದಾನಮಾಡುವರು. ಆದರೆ ಅವರ ಜನರು ಇನ್ನು ಬುದ್ಧಿಹೀನತೆಗೆ ತಿರುಗಿಕೊಳ್ಳದೆ ಇರಲಿ.

9 ನಿಶ್ಚಯವಾಗಿ ಮಹಿಮೆಯು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ದೇವರಿಗೆ ಭಯಪಡುವವರಿಗೆ ದೇವರ ರಕ್ಷಣೆಯು ಸಮೀಪವಾಗಿದೆ.

10 ಪ್ರೀತಿಯೂ ಸತ್ಯತೆಯೂ ಸಂಧಿಸಿಕೊಳ್ಳುತ್ತವೆ. ನೀತಿಯೂ ಸಮಾಧಾನವೂ ಮುದ್ದಿಟ್ಟುಕೊಳ್ಳುತ್ತವೆ.

11 ಸತ್ಯವು ಭೂಮಿಯಿಂದ ಮೊಳೆಯುವುದು. ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.

12 ಯೆಹೋವ ದೇವರು ಒಳ್ಳೆಯದನ್ನು ಕೊಡುವರು. ನಮ್ಮ ಭೂಮಿಯು ತನ್ನ ಸುಗ್ಗಿಯನ್ನು ಕೊಡುವುದು.

13 ನೀತಿಯು ದೇವರ ಮುಂದೆ ನಡೆದುಕೊಂಡು ಹೋಗಿ, ದೇವರಿಗೆ ಮಾರ್ಗ ಸಿದ್ಧಪಡಿಸುವುದು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು