Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 83 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 83
ಒಂದು ಗೀತೆ. ಆಸಾಫನ ಕೀರ್ತನೆ.

1 ದೇವರೇ, ಮೌನವಾಗಿರಬೇಡಿರಿ. ನಮ್ಮ ಕೂಗಿಗೆ ನಿಮ್ಮ ಪ್ರತಿಕ್ರಿಯೆ ನೀಡಿರಿ. ದೇವರೇ, ಸುಮ್ಮನಿರಬೇಡಿರಿ.

2 ಏಕೆಂದರೆ ಇಗೋ, ನಿಮ್ಮ ಶತ್ರುಗಳು ಘೋಷಿಸುತ್ತಾರೆ. ನಿಮ್ಮ ವೈರಿಗಳು ತಲೆ ಎತ್ತುತ್ತಾರೆ.

3 ನಿಮ್ಮ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿ ಕಲ್ಪಿಸುತ್ತಾರೆ. ನೀವು ಅಡಗಿಸಿಟ್ಟವರಿಗೆ ವಿರೋಧವಾಗಿ ಆಲೋಚಿಸಿಕೊಳ್ಳುತ್ತಾರೆ.

4 ಅವರು, “ಬನ್ನಿರಿ, ರಾಷ್ಟ್ರವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲರ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ,” ಎನ್ನುತ್ತಾರೆ.

5 ಅವರು ಏಕ ಮನಸ್ಕರಾಗಿ ಆಲೋಚನೆ ಮಾಡಿಕೊಂಡಿದ್ದಾರೆ. ನಿಮಗೆ ವಿರೋಧವಾಗಿ ಒಡಂಬಟ್ಟಿದ್ದಾರೆ.

6 ಎದೋಮ್ಯರ ಮತ್ತು ಇಷ್ಮಾಯೇಲ್ಯರ ಪಾಳೆಯದವರು ಮೋವಾಬ್ಯರು, ಹಗ್ರೀಯರು,

7 ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಟೈರಿನವರು, ಫಿಲಿಷ್ಟಿಯರು,

8 ಅಸ್ಸೀರಿಯರು ಎಲ್ಲರೂ ಅವರಲ್ಲಿ ಕೂಡಿಕೊಂಡಿರುವರು; ಅವರು ಲೋಟನ ಸಂತತಿಯವರಿಗೆ ಸಹಾಯಮಾಡಲು ಸಿದ್ಧರಾಗಿದ್ದಾರೆ.

9 ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡಿರಿ.

10 ಅವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.

11 ಅವರನ್ನೂ, ಅವರ ಅಧಿಪತಿಗಳನ್ನೂ, ಓರೇಬ್ ಮತ್ತು ಜೇಬನ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೆಬಹ ಮತ್ತು ಚಲ್ಮುನ್ನರ ಹಾಗೆಯೂ ಮಾಡಿರಿ.

12 ಅವರು, “ನಾವು ದೇವರ ಹುಲ್ಲುಗಾವಲು ಪ್ರದೇಶಗಳನ್ನು ಸ್ವಾಧೀನ ಮಾಡಿಕೊಳ್ಳೋಣ,” ಅನ್ನುತ್ತಾರೆ.

13 ನನ್ನ ದೇವರೇ, ಅವರನ್ನು ಚಕ್ರದ ಹಾಗೆಯೂ, ಗಾಳಿಯ ಮುಂದಿರುವ ಕಸದ ಹಾಗೆಯೂ ಮಾಡು.

14 ಅಡವಿ ಸುಡುವ ಬೆಂಕಿಯ ಹಾಗೆಯೂ, ಬೆಟ್ಟಗಳನ್ನು ದಹಿಸುವ ಜ್ವಾಲೆಯ ಹಾಗೆಯೂ

15 ನಿಮ್ಮ ಬಿರುಗಾಳಿಯಿಂದ ಅವರನ್ನು ಹಿಂಸಿಸಿ, ನಿಮ್ಮ ಸುಳಿಗಾಳಿಯಿಂದ ಅವರನ್ನು ತಲ್ಲಣ ಪಡಿಸಿರಿ.

16 ಯೆಹೋವ ದೇವರೇ, ನಿಮ್ಮ ನಾಮವನ್ನು ಅವರು ಹುಡುಕುವಂತೆ ಅವರ ಮುಖಗಳನ್ನು ನಾಚಿಕೆಯಿಂದ ತುಂಬಿಸಿರಿ.

17 ಅವರು ನಾಚಿಕೆಪಟ್ಟು ಕಳವಳಗೊಳ್ಳಲಿ. ಹೌದು, ಅವರು ಲಜ್ಜೆಪಟ್ಟು ನಾಶವಾಗಲಿ.

18 ಯೆಹೋವ ದೇವರು ಎಂಬ ಹೆಸರುಳ್ಳ ನೀವು ಮಾತ್ರವೇ ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ ಎಂದು ಅವರು ತಿಳಿದುಕೊಳ್ಳಲಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು