ಕೀರ್ತನೆಗಳು 76 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 76 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಆಸಾಫನ ಕೀರ್ತನೆ. ಒಂದು ಗೀತೆ. 1 ಯೆಹೂದ ಪ್ರದೇಶದಲ್ಲಿ ದೇವರು ಸುಪ್ರಸಿದ್ಧರಾಗಿದ್ದಾರೆ. ಇಸ್ರಾಯೇಲಿನಲ್ಲಿ ದೇವರ ಹೆಸರು ಪ್ರಖ್ಯಾತವಾಗಿದೆ. 2 ಸಾಲೇಮಿನಲ್ಲಿ ದೇವರ ಗುಡಾರವೂ ಚೀಯೋನಿನಲ್ಲಿ ಅವರ ವಾಸಸ್ಥಾನವೂ ಉಂಟು. 3 ದೇವರು ಅಲ್ಲಿಯೇ ಬಿಲ್ಲಿನ ಉರಿಬಾಣಗಳನ್ನೂ ಗುರಾಣಿಯನ್ನೂ ಖಡ್ಗವನ್ನೂ ಯುದ್ಧಾಯುಧಗಳನ್ನು ಮುರಿದುಬಿಟ್ಟರು. 4 ನೀವು ಪ್ರಕಾಶಮಾನ ಬೆಳಕಿಗಿಂತ ಪ್ರಕಾಶಮಾನವಾಗಿರುತ್ತೀರಿ, ನೈಸರ್ಗಿಕ ಸಂಪತ್ತು ತುಂಬಿದ ಪರ್ವತಗಳಿಗಿಂತ ಹೆಚ್ಚು ಶ್ರೇಷ್ಠ ಆಗಿದ್ದೀರಿ. 5 ಧೀರಹೃದಯದವರು ಸುಲಿಗೆಯಾಗಿ, ಅಂತಿಮ ನಿದ್ರೆ ಹೊಂದಿದ್ದಾರೆ. ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗಳನ್ನೆತ್ತಲು ಶಕ್ತನಲ್ಲ. 6 ಯಾಕೋಬನ ದೇವರೇ, ನಿಮ್ಮ ಗದರಿಕೆಯಿಂದ ರಥವೂ ಕುದುರೆಯೂ ಚಲನೆಯಿಲ್ಲದೆ ಬಿದ್ದಿವೆ. 7 ನೀವು ಭಯಭಕ್ತಿಗೆ ಪಾತ್ರರು, ನೀವು ಒಂದು ಸಾರಿ ಬೇಸರಗೊಂಡರೆ, ನಿಮ್ಮ ಮುಂದೆ ನಿಲ್ಲುವವನ್ಯಾರು? 8 ಪರಲೋಕದಿಂದ ನ್ಯಾಯ ನಿರ್ಣಯವನ್ನು ಮಾಡಿದ್ದೀರಿ. ದೇವರೇ, ನ್ಯಾಯತೀರಿಸುವುದಕ್ಕೂ 9 ಭೂಮಿಯ ದೀನರೆಲ್ಲರನ್ನು ರಕ್ಷಿಸುವುದಕ್ಕೂ ನೀವು ಪ್ರಾರಂಭಿಸುವಾಗ ಭೂಮಿಯು ಭಯಗೊಂಡು ಮೌನವಾಯಿತು. 10 ಮನುಷ್ಯರ ವಿರುದ್ಧ ನಿಮ್ಮ ಕೋಪವು ನಿಮಗೆ ಘನವನ್ನು ತರುವುದು. ಉಳಿದಿರುವವರು ಕೋಪಕ್ಕೆ ತುತ್ತಾಗುವುದಿಲ್ಲ. 11 ನಿಮ್ಮ ದೇವರಾದ ಯೆಹೋವ ದೇವರಿಗೆ ಹರಕೆಮಾಡಿ ಸಲ್ಲಿಸಿರಿ. ದೇವರ ಸುತ್ತಲಿರುವವರೆಲ್ಲರು ಭಯಭಕ್ತಿಗೆ ಪಾತ್ರರಾದವರಿಗೆ ಕಾಣಿಕೆಗಳನ್ನು ತರಲಿ. 12 ದೇವರು ಅಧಿಕಾರಿಗಳ ಗರ್ವವನ್ನು ಮುರಿಯುತ್ತಾರೆ. ಭೂಲೋಕದ ಅರಸರು ದೇವರಿಗೆ ಭಯಪಡುತ್ತಾರೆ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.