Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 66 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 66
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಒಂದು ಗೀತೆ. ಒಂದು ಕೀರ್ತನೆ.

1 ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹಧ್ವನಿ ಮಾಡಿರಿ.

2 ದೇವರ ಹೆಸರಿನ ಮಹಿಮೆಯನ್ನು ಕೊಂಡಾಡಿರಿ. ದೇವರ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.

3 ನೀವು ದೇವರಿಗೆ, “ನಿಮ್ಮ ಕೃತ್ಯಗಳು ಅತಿಶಯವಾದವುಗಳಾಗಿವೆ. ನಿಮ್ಮ ಶತ್ರುಗಳು ನಿಮ್ಮೆದುರಿನಲ್ಲಿ ಮುದುರಿ ಬೀಳುವಷ್ಟು ನಿಮ್ಮ ಶಕ್ತಿ ದೊಡ್ಡದಾಗಿದೆ.

4 ಭೂಮಿಯೆಲ್ಲಾ ನಿಮ್ಮನ್ನು ಆರಾಧಿಸುವುದು. ನಿಮ್ಮನ್ನು ಕೀರ್ತಿಸುತ್ತಾ ಲೋಕವು ನಿಮ್ಮ ನಾಮವನ್ನು ಕೀರ್ತಿಸುತ್ತಿರುವುದು,” ಎಂದು ಹೇಳಿರಿ.

5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ. ಮಾನವರ ಪರವಾಗಿ ಮಾಡಿರುವ ದೇವರ ಕಾರ್ಯಗಳು ಅತಿಶಯವಾಗಿವೆ.

6 ದೇವರು ಸಮುದ್ರವನ್ನು ಒಣ ಭೂಮಿಯನ್ನಾಗಿ ಮಾಡಿದರು. ಜನರು ಕಾಲಿನಿಂದ ನದಿಯನ್ನು ದಾಟಿದರು. ಬನ್ನಿರಿ, ದೇವರಲ್ಲಿ ಆನಂದಿಸೋಣ.

7 ದೇವರು ತಮ್ಮ ಶಕ್ತಿಯಿಂದ ಎಂದೆಂದಿಗೂ ಆಳುವವರಾಗಿದ್ದಾರೆ. ದೇವರ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ದೇವರಿಗೆ ವಿರೋಧವಾಗಿ ದಂಗೆಕೋರರು ಏಳದಿರಲಿ.

8 ಸಮಸ್ತ ಜನರೇ, ನೀವು ನಮ್ಮ ದೇವರನ್ನು ಸ್ತುತಿಸಿರಿ. ದೇವರನ್ನು ಸ್ತುತಿಸುವ ಶಬ್ದವು ಕೇಳಿಸಲಿ.

9 ದೇವರು ನಮ್ಮ ಜೀವನವನ್ನು ಕಾಪಾಡಿ, ನಮ್ಮ ಕಾಲು ಎಡವದಂತೆ ಮಾಡಿದ್ದಾರೆ.

10 ದೇವರೇ, ನೀವು ನಮ್ಮನ್ನು ಪರಿಶೋಧಿಸಿದ್ದೀರಿ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶುದ್ಧೀಕರಿಸಿದ್ದೀರಿ.

11 ನೀವು ಬಲೆಯೊಳಗೆ ನಮ್ಮನ್ನು ಸಿಕ್ಕಿಸಿದ್ದೀರಿ. ನಮ್ಮ ಬೆನ್ನಿನ ಮೇಲೆ ಭಾರವನ್ನು ಹೊರಿಸಿದ್ದೀರಿ.

12 ಮನುಷ್ಯರು ನಮ್ಮ ತಲೆ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀರಿ. ನಾವು ಬೆಂಕಿಯನ್ನೂ ನೀರನ್ನೂ ದಾಟುವಂತೆ ಮಾಡಿದ್ದೀರಿ. ಆದರೆ ನೀವು ನಮ್ಮನ್ನು ಸಮೃದ್ಧಿಯ ಸ್ಥಳದೊಳಗೆ ಬರಮಾಡಿದ್ದೀರಿ.

13 ನಾನು ದಹನಬಲಿಯೊಂದಿಗೆ ನಿಮ್ಮ ಆಲಯಕ್ಕೆ ಬರುವೆನು.

14 ನನ್ನ ಇಕ್ಕಟ್ಟಿನಲ್ಲಿ ತುಟಿ ಬಿಚ್ಚಿ ನನ್ನ ಬಾಯಿಂದ ನುಡಿದ ನನ್ನ ಹರಕೆಗಳನ್ನು ನಾನು ನಿಮಗೆ ಸಲ್ಲಿಸುವೆನು.

15 ಕೊಬ್ಬಿದ ದಹನಬಲಿಗಳನ್ನು ಕಾಣಿಕೆಯಾಗಿ ಟಗರುಗಳನ್ನು; ಹೋತ ಹೋರಿಗಳ ಯಜ್ಞವನ್ನು ಅರ್ಪಿಸುವೆನು.

16 ಸಮಸ್ತ ದೇವಭಕ್ತರೇ, ಬಂದು ಕೇಳಿರಿ. ದೇವರು ನನಗೆ ಮಾಡಿದ್ದನ್ನು ನಾನು ನಿಮಗೆ ತಿಳಿಸುವೆನು.

17 ನನ್ನ ದೇವರಿಗೆ ಮೊರೆಯಿಟ್ಟೆನು, ನನ್ನ ನಾಲಿಗೆಯಲ್ಲಿ ದೇವರ ಸ್ತೋತ್ರವಿತ್ತು.

18 ಪಾಪವನ್ನು ನಾನು ನನ್ನ ಹೃದಯದಲ್ಲಿ ಬೆಳೆಸಿಕೊಂಡಿದ್ದರೆ, ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಕೇಳುತ್ತಿರಲಿಲ್ಲ.

19 ಆದರೆ ಈಗ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾರೆ.

20 ನನ್ನ ಪ್ರಾರ್ಥನೆಯನ್ನು ತಿರಸ್ಕರಿಸದ ದೇವರಿಗೆ ಸ್ತೋತ್ರವಾಗಲಿ. ತಮ್ಮ ಪ್ರೀತಿಯನ್ನು ನನ್ನಿಂದ ತೊಲಗಿಸದೆ ಇರುವೆ. ದೇವರಿಗೆ ಸ್ತೋತ್ರವಾಗಲಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು