Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 65 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 65
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಒಂದು ಗೀತೆ.

1 ದೇವರೇ, ಚೀಯೋನಿನಲ್ಲಿ ನಿಮಗೋಸ್ಕರ ಸ್ತೋತ್ರವು ಕಾದಿದೆ. ನಿಮಗೆ ನಮ್ಮ ಹರಕೆಗಳನ್ನು ಪೂರೈಸುವೆವು.

2 ಪ್ರಾರ್ಥನೆಯನ್ನು ಕೇಳುವವರೇ, ಎಲ್ಲಾ ಜನರು ನಿಮ್ಮ ಬಳಿಗೆ ಬರುವರು.

3 ನಾವು ನಮ್ಮ ಪಾಪಗಳಿಂದ ತುಂಬಿಹೋಗಿರುವಾಗ ನೀವೇ ನಮ್ಮ ದ್ರೋಹಗಳಿಗಾಗಿ ದೋಷಪರಿಹಾರಕರು.

4 ನೀವು ಆಯ್ದುಕೊಂಡು ನಿಮ್ಮ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು. ಏಕೆಂದರೆ ನಿಮ್ಮ ಅಂಗಳಗಳಲ್ಲಿ ಅವನು ವಾಸವಾಗಿರುವನು. ನಿಮ್ಮ ಪರಿಶುದ್ಧ ಮಂದಿರವಾದ ನಿಮ್ಮ ಆಲಯದ ಒಳ್ಳೆಯ ಸಂಗತಿಗಳಿಂದ ನಮಗೆ ತೃಪ್ತಿಯಾಗಲಿ.

5 ಅತಿಶಯ ಹಾಗು ನೀತಿಯ ಕೃತ್ಯಗಳನ್ನು ನಡೆಸಿ, ನೀವು ನಮಗೆ ಉತ್ತರ ಕೊಡುವಿರಿ. ನಮ್ಮ ರಕ್ಷಣೆಯ ದೇವರೇ, ಭೂಮಿಯಲ್ಲಿರುವವರಿಗೂ, ಸಮುದ್ರದ ಆಚೆ ದೂರವಾಗಿರುವವರಿಗೂ ನೀವು ಭರವಸೆಯಾಗಿದ್ದೀರಿ.

6 ಬೆಟ್ಟಗಳನ್ನು ನಿಮ್ಮ ಶಕ್ತಿಯಿಂದ ರೂಪಿಸಿದವರು ನೀವೇ. ಜಲದಿಂದ ನಡು ಕಟ್ಟಿಕೊಂಡಿರುವವರೂ ನೀವೇ.

7 ಸಮುದ್ರಗಳ ಘೋಷವನ್ನೂ, ಅವುಗಳ ತೆರೆಗಳ ಘೋಷವನ್ನೂ, ಪ್ರಜೆಗಳ ಕೋಲಾಹಲವನ್ನೂ ಶಮನಗೊಳಿಸುವವರು ನೀವೇ.

8 ಇಡೀ ಭೂಮಿಯಲ್ಲಿರುವವರು ನಿಮ್ಮ ಅದ್ಭುತಕಾರ್ಯಗಳಿಗೆ ಅತಿಶಯಗೊಂಡಿದ್ದಾರೆ. ಉದಯಾಸ್ತಮಾನಗಳಲ್ಲಿ ಇರುವವರನ್ನು ಉತ್ಸಾಹ ಧ್ವನಿಗೈಯುವಂತೆ ಮಾಡುತ್ತೀರಿ.

9 ಭೂಮಿಯನ್ನು ಸಂಧಿಸಿ, ಅದಕ್ಕೆ ಮಳೆಬರುವಂತೆ, ಅದನ್ನು ಫಲವತ್ತಾಗಿ ಮಾಡುತ್ತೀರಿ. ದೇವರ ನದಿಯು ನೀರಿನಿಂದ ತುಂಬಿದೆ. ಹೀಗೆ ಭೂಮಿಯನ್ನು ಸಿದ್ಧಮಾಡಿ, ಜನರಿಗೆ ನೀವು ಧಾನ್ಯವನ್ನು ಒದಗಿಸುತ್ತೀರಿ.

10 ನೇಗಿಲ ಸಾಲುಗಳನ್ನು ಸಮಮಾಡುತ್ತೀರಿ. ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀರಿ, ಅದರ ಮೊಳಕೆಯನ್ನು ಆಶೀರ್ವದಿಸುತ್ತೀರಿ.

11 ವರ್ಷಕ್ಕೆ ನಿಮ್ಮ ಉದಾರತೆಯ ಕಿರೀಟವನ್ನು ಇಡುತ್ತೀರಿ. ನಿಮ್ಮ ಹಾದಿಗಳು ಸಮೃದ್ಧಿಯಿಂದ ತುಂಬಿ ಪ್ರವಾಹಿಸುತ್ತಿದೆ.

12 ಮರುಭೂಮಿಯ ಹುಲ್ಲುಗಾವಲಲ್ಲಿ ವೃಷ್ಟಿಯಾಗಿದೆ. ಗುಡ್ಡಗಳು ಉಲ್ಲಾಸವನ್ನು ಧರಿಸಿಕೊಂಡಿವೆ.

13 ಹುಲ್ಲುಗಾವಲುಗಳು ಮಂದೆಗಳಿಂದ ಹೊದಿಕೆಯಾಗಿವೆ. ಕಣಿವೆಗಳು ಸಹ ಧಾನ್ಯದಿಂದ ಮುಚ್ಚಿರುತ್ತವೆ. ಅವು ಉತ್ಸಾಹಗೊಂಡು ಹಾಡುತ್ತವೆ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು