Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 60 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 60
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಷೂಷನ್ ಎದೂತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ಪರಾಜಿತರು ದೈವೋತ್ತರವನ್ನು ಆಧಾರಮಾಡಿಕೊಂಡು ಪ್ರಾರ್ಥಿಸುವುದು. ಯೋವಾಬನು ಉಪ್ಪಿನ ತಗ್ಗಿನಲ್ಲಿ ಹನ್ನೆರಡು ಸಾವಿರ ಎದೋಮ್ಯರನ್ನು ಹೊಡೆದಾಗ ದಾವೀದನು ರಚಿಸಿದ ಕೀರ್ತನೆ.

1 ದೇವರೇ, ನನ್ನನ್ನು ಕೈಬಿಟ್ಟಿದ್ದೀರಾ? ನನ್ನನ್ನು ಚದರಿಸಿದ್ದೀರಾ? ನಮ್ಮ ಕಡೆಗೆ ಬೇಸರಗೊಂಡರೂ ನಮ್ಮನ್ನು ಪುನಃ ಸ್ಥಾಪಿಸಿರಿ.

2 ದೇಶವು ಕಂಪನಗೊಂಡು ಒಡೆದುಹೋಗಿದೆ. ಅದರ ಬಿರುಕುಗಳನ್ನು ಸ್ವಸ್ಥಮಾಡಿರಿ, ಅದು ನಡುಗುತ್ತಿದೆ.

3 ನಿಮ್ಮ ಜನರಿಗೆ ಕಠಿಣ ಕಾಲಗಳನ್ನು ನೀವು ತೋರಿಸಿದ್ದೀರಿ. ನಾವು ಭ್ರಮಣಗೊಳಿಸುವ ದ್ರಾಕ್ಷಾರಸವನ್ನು ಕುಡಿದವರಂತೆ ಆದೆವು.

4 ನಿಮ್ಮ ಭಕ್ತರಿಗೆ ಧ್ವಜವನ್ನು ನಿಲ್ಲಿಸಿದ್ದೀರಿ. ಶತ್ರುಗಳ ಬಿಲ್ಲಿನ ವಿರುದ್ಧ ಹಾರಿಸಬಹುದಾದ ಧ್ವಜವನ್ನೇ ನೀಡಿದ್ದೀರಿ.

5 ನೀವು ಪ್ರೀತಿಸುವವರು ಬಿಡುಗಡೆಯಾಗುವಂತೆ ನಿಮ್ಮ ಬಲಗೈಯಿಂದ ರಕ್ಷಿಸಿ ನಮಗೆ ಸಹಾಯಮಾಡಿರಿ.

6 ದೇವರು ತಮ್ಮ ಪರಿಶುದ್ಧ ಸ್ಥಳದಿಂದ ಹೀಗೆ ನುಡಿದಿದ್ದಾರೆ: “ನಾನು ಜಯದಿಂದ ಶೆಕೆಮ್ ಪ್ರದೇಶವನ್ನು ಹಂಚುವೆನು. ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.

7 ಗಿಲ್ಯಾದ್ ನನ್ನದು; ಮನಸ್ಸೆ ನನ್ನದು, ಎಫ್ರಾಯೀಮ್ ನನ್ನ ಶಿರಸ್ತ್ರಾಣ, ಯೆಹೂದವು ನನ್ನ ರಾಜದಂಡ.

8 ಮೋವಾಬ್ ನನ್ನ ಸ್ನಾನ ಪಾತ್ರೆಯು, ಎದೋಮ್ ನನ್ನ ಕೆರಗಳ ಸ್ಥಳ. ಫಿಲಿಷ್ಟಿಯರ ಮೇಲೆ ಜಯೋತ್ಸಾಹ ಮಾಡುವೆನು.”

9 ಕೋಟೆಯ ಪಟ್ಟಣಕ್ಕೆ ನನ್ನನ್ನು ಕರೆತರುವವರು ಯಾರು? ಎದೋಮಿಗೆ ನನ್ನನ್ನು ನಡೆಸುವವರು ಯಾರು?

10 ದೇವರೇ, ಈಗ ನೀವು ನಮ್ಮ ಸೈನ್ಯಗಳ ಸಂಗಡ ಹೊರಡುವುದಿಲ್ಲವೋ ನಮ್ಮನ್ನು ಕೈಬಿಟ್ಟಿದ್ದೀರೋ?

11 ವೈರಿಗಳ ವಿರೋಧ ನಮಗೆ ಸಹಾಯಮಾಡಿರಿ. ಮನುಷ್ಯರ ಸಹಾಯವು ವ್ಯರ್ಥ.

12 ದೇವರಿಂದ ನಾವು ಜಯ ಹೊಂದುವೆವು. ದೇವರೇ ನಮ್ಮ ವೈರಿಗಳನ್ನು ತುಳಿದುಬಿಡುವರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು