Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 6 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 6
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಶೆಮಿನಿಥ್ ಸ್ವರದೊಂದಿಗೆ ಹಾಡತಕ್ಕದ್ದು. ದಾವೀದನ ಕೀರ್ತನೆ.

1 ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ, ರೋಷದಿಂದಲೂ ನನ್ನನ್ನು ದಂಡಿಸಬೇಡಿರಿ.

2 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಬಲಹೀನನಾಗಿದ್ದೇನೆ; ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿರಿ, ನನ್ನ ಎಲುಬುಗಳು ಬಹು ವ್ಯಥೆಗೊಳಗಾಗಿವೆ.

3 ನನ್ನ ಪ್ರಾಣವು ಬಹು ಸಂಕಟದಲ್ಲಿದೆ. ಎಲ್ಲಿಯತನಕ, ಯೆಹೋವ ದೇವರೇ, ಇನ್ನೂ ಎಲ್ಲಿಯತನಕ?

4 ಯೆಹೋವ ದೇವರೇ, ನನ್ನ ಕಡೆಗೆ ಹಿಂದಿರುಗಿರಿ, ನನ್ನನ್ನು ಬಿಡುಗಡೆ ಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ನಿಮಿತ್ತ ನನ್ನನ್ನು ರಕ್ಷಿಸಿರಿ.

5 ಸತ್ತವರಲ್ಲಿ ನಿಮ್ಮನ್ನು ಸ್ಮರಿಸುವವರಿಲ್ಲ. ಪಾತಾಳದಲ್ಲಿ ನಿಮ್ಮನ್ನು ಸ್ತುತಿಸುವವರು ಯಾರು?

6 ನನ್ನ ನರಳಾಟದಿಂದ ದಣಿದು ಹೋಗಿದ್ದೇನೆ. ರಾತ್ರಿಯೆಲ್ಲಾ ನಾನು ಅಳುವುದರಿಂದ ನನ್ನ ಹಾಸಿಗೆಯು ಕಣ್ಣೀರಿನ ಪ್ರವಾಹದಿಂದ ತೇಲಾಡುತ್ತದೆ, ಕಣ್ಣೀರಿನಿಂದ ನನ್ನ ಮಂಚವನ್ನು ತೊಯಿಸಿದ್ದೇನೆ.

7 ದುಃಖದಿಂದ ನನ್ನ ಕಣ್ಣುಗಳು ಬಲಹೀನವಾಗಿವೆ, ನನ್ನ ಸಕಲ ವೈರಿಗಳಿಂದ ಅವು ಮೊಬ್ಬಾಗಿವೆ.

8 ಕೆಟ್ಟದ್ದನ್ನು ಮಾಡುವವರೇ, ನೀವೆಲ್ಲರು ನನ್ನಿಂದ ತೊಲಗಿಹೋಗಿರಿ, ಏಕೆಂದರೆ ಯೆಹೋವ ದೇವರು ನನ್ನ ಗೋಳಾಟವನ್ನು ಕೇಳಿದ್ದಾರೆ.

9 ಯೆಹೋವ ದೇವರು ನಾನು ಕರುಣೆಗಾಗಿ ಕೇಳಿದ ನನ್ನ ಮೊರೆಯನ್ನು ಆಲಿಸಿದ್ದಾರೆ; ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಸ್ವೀಕರಿಸುವರು.

10 ನನ್ನ ಶತ್ರುಗಳೆಲ್ಲರೂ ನಾಚಿಕೆಪಟ್ಟು ತತ್ತರಿಸುವರು; ಕ್ಷಣಮಾತ್ರದಲ್ಲಿ ಅವರು ಅವಮಾನಗೊಂಡು ಹಿಂದಿರುಗಿ ಹೋಗುವರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು