Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 58 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 58
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಖೇತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನ ಕೀರ್ತನೆ.

1 ಜನನಾಯಕರೇ, ನೀವು ನ್ಯಾಯವಾಗಿ ತೀರ್ಪನ್ನು ನುಡಿಯುತ್ತೀರೋ? ಜನರಲ್ಲಿ ನೀವು ಯಥಾರ್ಥವಾಗಿ ನ್ಯಾಯತೀರಿಸುವಿರೋ?

2 ಇಲ್ಲಾ, ನಿಮ್ಮ ಹೃದಯದಲ್ಲಿ ದುಷ್ಟತನವನ್ನು ಕಲ್ಪಿಸುತ್ತೀರಲ್ಲಾ, ದೇಶದಲ್ಲಿ ನಿಮ್ಮ ಕೈಗಳಿಂದ ಹಿಂಸಾಚಾರವನ್ನು ತೂಗುತ್ತೀರಲ್ಲಾ.

3 ದುಷ್ಟರು ಗರ್ಭದಿಂದಲೇ ದಾರಿತಪ್ಪುತ್ತಾರೆ. ಹುಟ್ಟಿದಂದಿನಿಂದಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.

4 ಹಾವಿನ ವಿಷದ ಹಾಗೆ ಅವರಲ್ಲಿ ವಿಷ ಇದೆ. ಘಟಸರ್ಪದ ಹಾಗೆ ಮಂದವಾಗಿದ್ದಾರೆ.

5 ಚಮತ್ಕಾರದಿಂದ ಆಕರ್ಷಿಸಿ, ಕೌಶಲ್ಯದಿಂದ ನುಡಿಸುವ ಹಾವಾಡಿಗನ ನಾದವನ್ನು ಕೇಳದ ಹಾವಿನಂತೆ ಇದ್ದಾರೆ.

6 ಓ, ದೇವರೇ, ಅವರ ಹಲ್ಲುಗಳು ಮುರಿದು ಬೀಳಲಿ. ಯೆಹೋವ ದೇವರೇ, ಪ್ರಾಯದ ಸಿಂಹಗಳಂತಿರುವ ಅವರ ಕೋರೆಹಲ್ಲುಗಳು ನಾಶವಾಗಲಿ.

7 ಅವರು ನೀರಿನಂತೆ ಕರಗಿಹೋಗಲಿ. ಅವರು ತಮ್ಮ ಬಾಣಗಳನ್ನು ಗುರಿಯಿಡುವಾಗ ಡೊಂಕಾಗಿ ಹೋಗಲಿ.

8 ಕರಗುವ ಗೊಂಡೆ ಹುಳದಂತೆ ಅವರು ನಾಶವಾಗಲಿ. ದಿನತುಂಬದೆ ಹುಟ್ಟಿದ ಶಿಶುವಿನಂತೆ ಅವರು ಸೂರ್ಯನನ್ನು ಕಾಣದಿರಲಿ.

9 ಗಡಿಗೆಗಳು ಮುಳ್ಳಿನ ಬೆಂಕಿಯ ಶಾಖವನ್ನು ಇನ್ನೂ ಹಸಿಯಾಗಿ ಇಲ್ಲವೆ ಒಣಗಿರುವಾಗಲೇ, ಬಿರುಗಾಳಿ ಹಾರಿಸಿಬಿಡುವಂತೆ ಅವರಿಗೆ ಆಗಲಿ.

10 ನೀತಿವಂತರು ದುಷ್ಟರಿಗಾಗುವ ಪ್ರತಿದಂಡನೆಯನ್ನು ಕಂಡು ಹಿಗ್ಗಿ ತಮ್ಮ ಪಾದಗಳನ್ನು ದುಷ್ಟನ ರಕ್ತದ ಮೇಲಿಡಲಿ.

11 ಆಗ ಜನರು ಹೀಗೆ ಹೇಳಿಕೊಳ್ಳುವರು, “ನಿಶ್ಚಯವಾಗಿ ನೀತಿವಂತನಿಗೆ ಫಲವಿದೆ. ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯತೀರಿಸುವ ದೇವರು ಇದ್ದಾರೆ.”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು