ಕೀರ್ತನೆಗಳು 51 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 51 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ದಾವೀದನು ಬತ್ಷೆಬೆಳ ಸಂಗಡ ಪಾಪಮಾಡಿದ ಮೇಲೆ, ಪ್ರವಾದಿಯಾದ ನಾತಾನನು ಅವನ ಹತ್ತಿರ ಬಂದಾಗ ರಚಿಸಿದ ಕೀರ್ತನೆ. 1 ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನನ್ನು ಕರುಣಿಸಿರಿ. ನಿಮ್ಮ ಮಹಾ ಅನುಕಂಪಕ್ಕೆ ಅನುಸಾರವಾಗಿ ನನ್ನ ಅತಿಕ್ರಮಗಳನ್ನು ಅಳಿಸಿಬಿಡಿರಿ. 2 ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ತೊಳೆದುಬಿಡಿರಿ; ನನ್ನ ಪಾಪದಿಂದ ನನ್ನನ್ನು ಶುದ್ಧಮಾಡಿರಿ. 3 ನನ್ನ ಅತಿಕ್ರಮಗಳನ್ನು ನಾನೇ ತಿಳಿದಿದ್ದೇನೆ, ನನ್ನ ಪಾಪವು ಯಾವಾಗಲೂ ನನ್ನ ಕಣ್ಮುಂದೆಯೇ ಇದೆ. 4 ನಿಮಗೇ ನಿಮಗೊಬ್ಬರಿಗೆ ಮಾತ್ರ ವಿರೋಧವಾಗಿ ನಾನು ಪಾಪಮಾಡಿ, ನಿಮ್ಮ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದ್ದನ್ನೇ ಮಾಡಿದ್ದೇನೆ. ಹೀಗೆ ನೀವು ನ್ಯಾಯತೀರಿಸುವಾಗ ನೀತಿವಂತರಾಗಿಯೂ ನೀವು ತೀರ್ಪು ನಿರ್ಣಯಿಸುವಾಗ ನ್ಯಾಯವಂತರಾಗಿಯೂ ಇರುವಿರಿ. 5 ಹುಟ್ಟಿದಂದಿನಿಂದಲೇ ನಾನು ಪಾಪಿ. ನನ್ನ ತಾಯಿ ನನ್ನನ್ನು ಗರ್ಭಧರಿಸಿದಾಗಲೇ ನಾನು ಪಾಪಿಯೇ. 6 ಆದರೂ ಅಂತರಂಗದಲ್ಲಿ ನೀವು ಯಥಾರ್ಥವನ್ನು ಬಯಸುತ್ತೀರಿ. ನೀವು ಹೃದಯದ ಆಂತರ್ಯದಲ್ಲಿ ನನಗೆ ಜ್ಞಾನವನ್ನು ಬೋಧಿಸಿದ್ದೀರಿ. 7 ಹಿಸ್ಸೋಪಿನಿಂದ ನನ್ನನ್ನು ಶುಚಿಮಾಡಿರಿ, ಆಗ ನಾನು ಶುದ್ಧನಾಗುವೆನು. ನನ್ನನ್ನು ತೊಳೆಯಿರಿ, ಆಗ ಹಿಮಕ್ಕಿಂತ ಬೆಳ್ಳಗಾಗುವೆನು. 8 ನಾನು ಆನಂದವನ್ನೂ ಹರ್ಷವನ್ನೂ ಕೇಳುವಂತೆ ಮಾಡಿರಿ; ನೀವು ಜಜ್ಜಿದ ಎಲುಬುಗಳು ಆನಂದಪಡಲಿ. 9 ನನ್ನ ಪಾಪಗಳಿಗೆ ನಿಮ್ಮ ಮುಖವನ್ನು ಮರೆಮಾಡಿಕೊಳ್ಳಿರಿ; ನನ್ನ ಅಧರ್ಮಗಳನ್ನೆಲ್ಲಾ ಅಳಿಸಿಬಿಡಿರಿ. 10 ಓ ದೇವರೇ, ಶುದ್ಧ ಹೃದಯವನ್ನು ನನ್ನಲ್ಲಿ ಸೃಷ್ಟಿಮಾಡಿರಿ, ಸ್ಥಿರವಾದ ಆತ್ಮವನ್ನು ನನ್ನಲ್ಲಿ ನವೀಕರಿಸಿರಿ. 11 ನಿಮ್ಮ ಸನ್ನಿಧಿಯಿಂದ ನನ್ನನ್ನು ಹೊರ ದೂಡಬೇಡಿರಿ; ನಿಮ್ಮ ಪರಿಶುದ್ಧಾತ್ಮರನ್ನು ನನ್ನಿಂದ ತೆಗೆಯಬೇಡಿರಿ. 12 ನಿಮ್ಮ ರಕ್ಷಣೆಯ ಆನಂದವನ್ನು ನನಗೆ ಪುನಃ ಸ್ಥಾಪಿಸಿರಿ; ನನಗೆ ಸಿದ್ಧ ಆತ್ಮವನ್ನು ನೀಡಿ, ನನ್ನನ್ನು ಬೆಂಬಲಿಸಿರಿ. 13 ಆಗ ನಾನು ಅತಿಕ್ರಮಿಸಿದವರಿಗೆ ನಿಮ್ಮ ಮಾರ್ಗಗಳನ್ನು ಬೋಧಿಸುವೆನು; ಮತ್ತು ಪಾಪಿಗಳು ನಿಮ್ಮ ಕಡೆಗೆ ತಿರುಗಿಕೊಳ್ಳುವರು. 14 ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧದಿಂದ ನನ್ನನ್ನು ಬಿಡಿಸಿರಿ, ನನ್ನ ನಾಲಿಗೆಯು ನಿಮ್ಮ ನೀತಿಯನ್ನು ಹಾಡುವುದು. 15 ಕರ್ತಾ, ನನ್ನ ತುಟಿಗಳನ್ನು ತೆರೆಯಿರಿ. ಆಗ ನನ್ನ ಬಾಯಿ ನಿಮ್ಮ ಸ್ತೋತ್ರವನ್ನು ಪ್ರಸಿದ್ಧಿ ಮಾಡುವುದು. 16 ಯಜ್ಞವನ್ನು ನೀವು ಇಷ್ಟಪಡುವುದಿಲ್ಲ, ಇಲ್ಲವಾದರೆ ನಾನು ಅದನ್ನು ತರುತ್ತಿದ್ದೆನು. ದಹನಬಲಿಗಳಲ್ಲಿ ನೀವು ಸಂತೋಷಪಡುವುದಿಲ್ಲ. 17 ಓ ದೇವರೇ, ನಿಮಗೆ ಇಷ್ಟವಾದ ಯಜ್ಞಗಳು ಮುರಿದ ಆತ್ಮವೇ. ಮುರಿದಂಥ, ಜಜ್ಜಿದಂಥ ಹೃದಯವನ್ನು ದೇವರು ತಿರಸ್ಕರಿಸುವುದಿಲ್ಲ. 18 ನಿಮ್ಮ ಮೆಚ್ಚುಗೆಯಿಂದ ಚೀಯೋನಿಗೆ ಸಮೃದ್ಧಿಯನ್ನು ನೀಡಿರಿ, ಯೆರೂಸಲೇಮಿನ ಗೋಡೆಗಳನ್ನು ಕಟ್ಟಿರಿ. 19 ಆಗ ನೀತಿಯ ಯಜ್ಞಗಳಲ್ಲಿಯೂ ಸಂಪೂರ್ಣ ದಹನಬಲಿಗಳಲ್ಲಿಯೂ, ನೀವು ಸಂತೋಷಪಡುವಿರಿ; ಆಗ ನಿಮ್ಮ ಬಲಿಪೀಠದ ಮೇಲೆ ಹೋರಿಗಳನ್ನು ಅರ್ಪಿಸಲಾಗುವುದು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.