Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 5 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 5
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೊಳಲು ವಾದ್ಯದೊಡನೆ ಹಾಡತಕ್ಕದ್ದು, ದಾವೀದನ ಕೀರ್ತನೆ.

1 ಯೆಹೋವ ದೇವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ, ನನ್ನ ಪ್ರಲಾಪವನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.

2 ನನ್ನ ಅರಸರೇ, ನನ್ನ ದೇವರೇ, ಸಹಾಯಕ್ಕಾಗಿರುವ ನನ್ನ ಮೊರೆಯನ್ನು ಕೇಳಿರಿ, ನಿಮಗೇ ನಾನು ಪ್ರಾರ್ಥಿಸುತ್ತೇನೆ.

3 ಯೆಹೋವ ದೇವರೇ, ಉದಯಕಾಲದಲ್ಲಿ ನನ್ನ ಸ್ವರವನ್ನು ಕೇಳಿರಿ; ಮುಂಜಾನೆಯಲ್ಲಿ ನಾನು ನನ್ನ ಬೇಡಿಕೆಗಳನ್ನು ನಿಮ್ಮ ಮುಂದೆ ಸಮರ್ಪಿಸಿ, ಎದುರುನೋಡುತ್ತಾ ಕಾದುಕೊಂಡಿರುವೆನು.

4 ನೀವು ದುಷ್ಟತನವನ್ನು ಮೆಚ್ಚುವ ದೇವರಲ್ಲ; ಕೆಡುಕರು ನಿಮ್ಮ ಬಳಿಯಲ್ಲಿ ವಾಸಿಸುವುದಿಲ್ಲ.

5 ನಿಮ್ಮ ಸನ್ನಿಧಿಯಲ್ಲಿ ಗರ್ವಿಗಳು ನಿಂತುಕೊಳ್ಳಲಾರರು. ಅಧರ್ಮ ಮಾಡುವವರೆಲ್ಲರನ್ನು ನೀವು ದ್ವೇಷಿಸುತ್ತೀರಿ.

6 ಸುಳ್ಳಾಡುವವರನ್ನು ನೀವು ದಂಡಿಸುತ್ತೀರಿ. ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವ ದೇವರು ಅಸಹ್ಯಪಡುತ್ತಾರೆ.

7 ನಾನಾದರೋ, ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನಿಮ್ಮ ಮನೆಗೆ ಬರುವೆನು; ಭಕ್ತಿಭಾವದಿಂದ ನಿಮ್ಮ ಪರಿಶುದ್ಧ ಆಲಯದ ಕಡೆಗೆ ತಲೆಬಾಗುವೆನು.

8 ಯೆಹೋವ ದೇವರೇ, ನನ್ನ ವಿರೋಧಿಗಳ ನಿಮಿತ್ತ ನಿಮ್ಮ ನೀತಿಯಲ್ಲಿ ನನ್ನನ್ನು ನಡೆಸಿರಿ; ನಿಮ್ಮ ಮಾರ್ಗವನ್ನು ನನ್ನ ಮುಂದೆ ನೇರವಾಗಿ ಮಾಡಿರಿ.

9 ಅವರ ಬಾಯಿಯಲ್ಲಿ ಯಥಾರ್ಥ ಮಾತು ಒಂದೂ ಇಲ್ಲ; ಅವರ ಹೃದಯವು ನಾಶನದಿಂದ ತುಂಬಿದೆ. ಅವರ ಗಂಟಲು ತೆರೆದ ಸಮಾಧಿಯೇ; ತಮ್ಮ ನಾಲಿಗೆಯಿಂದ ಮುಖಸ್ತುತಿ ಮಾಡುತ್ತಾರೆ.

10 ಓ ದೇವರೇ! ಅವರನ್ನು ಅಪರಾಧಿಗಳೆಂದು ನಿರ್ಣಯಿಸಿರಿ, ಅವರು ತಮ್ಮ ಸ್ವಂತ ಕುತಂತ್ರಗಳಿಂದ ಬಿದ್ದುಹೋಗಲಿ. ಅವರ ಬಹು ಪಾಪಗಳ ನಿಮಿತ್ತ ಅವರನ್ನು ಬಹಿಷ್ಕರಿಸಿರಿ, ಏಕೆಂದರೆ ಅವರು ನಿಮಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.

11 ಆದರೆ ನಿಮ್ಮನ್ನು ಆಶ್ರಯಿಸುವವರೆಲ್ಲರು ಆನಂದಿಸಲಿ; ಅವರು ಸದಾ ನಿಮ್ಮ ಆನಂದ ಗಾನವನ್ನು ಹಾಡಲಿ. ನಿಮ್ಮ ಹೆಸರನ್ನು ಪ್ರೀತಿಸುವವರು ನಿಮ್ಮಲ್ಲಿ ಆನಂದಿಸುವಂತೆ ಅವರನ್ನು ನಿಮ್ಮ ಸಂರಕ್ಷಣೆಯಿಂದ ಆವರಿಸಿಕೊಳ್ಳಿರಿ.

12 ಯೆಹೋವ ದೇವರೇ, ನೀವು ನೀತಿವಂತರನ್ನು ನಿಶ್ಚಯವಾಗಿ ಆಶೀರ್ವದಿಸಿದ್ದೀರಿ; ನೀವು ಅವರನ್ನು ನಿಮ್ಮ ಮೆಚ್ಚುಗೆಯಿಂದ ಗುರಾಣಿಯಂತೆಯೇ ಆವರಿಸಿಕೊಳ್ಳಿರಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು