ಕೀರ್ತನೆಗಳು 45 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 45 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಲಿಲಿಹೂಗಳು” ರಾಗವನ್ನು ಆಧರಿಸಿದೆ. ಕೋರಹೀಯನ ಪುತ್ರರ ಸಂಯೋಜನೆ. ಒಂದು ಮಸ್ಕಿಲ್. ಒಂದು ಮದುವೆಯ ಹಾಡು. 1 ನನ್ನ ಹೃದಯವು ಸೊಗಸಾದ ವಿಷಯದಿಂದ ಮಿಡಿಯುತ್ತಿದೆ. ಮಹಾರಾಜನನ್ನು ಕುರಿತು ನಾನು ರಚಿಸುವೆನು ಗೀತಾಂಜಲಿ. ನನ್ನ ನಾಲಿಗೆಯು ನಿಪುಣ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ. 2 ನೀವು ಎಲ್ಲಾ ಮನುಷ್ಯರಿಗಿಂತ ಅತಿ ಸುಂದರರಾಗಿದ್ದೀರಿ. ನಿಮ್ಮ ತುಟಿಗಳಲ್ಲಿ ಕೃಪೆಯ ಅಭಿಷೇಕವಿದೆ; ಆದ್ದರಿಂದ ದೇವರು ಎಂದೆಂದಿಗೂ ನಿಮ್ಮನ್ನು ಆಶೀರ್ವದಿಸಿದ್ದಾರೆ. 3 ಪರಾಕ್ರಮಶಾಲಿಯೇ, ನಿಮ್ಮ ಖಡ್ಗವನ್ನು ಸೊಂಟಕ್ಕೆ ಬಿಗಿದುಕೊಳ್ಳಿರಿ. ನಿಮ್ಮ ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಳ್ಳಿರಿ. 4 ನೀವು ಸತ್ಯತೆ ದೀನತ್ವ ಹಾಗು ನೀತಿಗೋಸ್ಕರ ನಿಮ್ಮ ಘನತೆಯಿಂದ ಜಯದ ಸವಾರಿ ಮಾಡಿರಿ. ನಿಮ್ಮ ಬಲಗೈ ಮಹಾಕೃತ್ಯಗಳನ್ನು ಪ್ರಕಾಶಪಡಿಸಲಿ. 5 ನಿಮ್ಮ ಹದವಾದ ಬಾಣಗಳು ರಾಜದ್ರೋಹಿಗಳನ್ನು ಇರಿಯಲಿ. ಜನಾಂಗಗಳು ನಿಮ್ಮ ಪಾದಕ್ಕೆ ಬೀಳಲಿ. 6 ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು; ನ್ಯಾಯದಂಡವೇ ನಿಮ್ಮ ರಾಜದಂಡವಾಗಿದೆ. 7 ನೀವು ನೀತಿಯನ್ನು ಪ್ರೀತಿಸುತ್ತೀರಿ, ಅನೀತಿಯನ್ನು ದ್ವೇಷಿಸುತ್ತೀರಿ. ಆದ್ದರಿಂದ ದೇವರೇ, ನಿಮ್ಮ ದೇವರು, ನಿಮ್ಮ ಸಂಗಡಿಗರಿಗಿಂತ ನಿಮ್ಮನ್ನು ಉನ್ನತಗೊಳಿಸಿ ಆನಂದ ತೈಲದಿಂದ ಅಭಿಷೇಕಿಸಿದ್ದಾರೆ. 8 ನಿಮ್ಮ ವಸ್ತ್ರಗಳೆಲ್ಲಾ ರಸಗಂಧವೂ ಅಗರೂ ಚಂದನ ಇವುಗಳ ಸುವಾಸನೆ ಬೀರುತ್ತದೆ. ದಂತದ ಅರಮನೆಯೊಳಗಿಂದ ಉನ್ನತ ವಾದ್ಯಗಳು ನಿಮ್ಮನ್ನು ಆನಂದಗೊಳಿಸುವುದು. 9 ರಾಜ ಪುತ್ರಿಯರು ನಿಮ್ಮ ಗೌರವ ಸ್ತ್ರೀಯರಲ್ಲಿ ಇದ್ದಾರೆ. ನಿಮ್ಮ ಬಲಗಡೆ ರಾಣಿಯು ಓಫೀರ್ ಬಂಗಾರವನ್ನು ಧರಿಸಿದ್ದಾಳೆ. 10 ಕೇಳು ಮಗಳೇ, ಇದನ್ನು ಆಲೋಚಿಸಿ, ಕಿವಿಗೊಡು. ನಿಮ್ಮ ಜನರನ್ನೂ, ನಿಮ್ಮ ತಂದೆಯ ಮನೆಯನ್ನೂ ಮರೆತುಬಿಡು. 11 ನಿನ್ನ ಸೌಂದರ್ಯವನ್ನು ಮಹಾರಾಜರು ಮೆಚ್ಚಲಿ, ಅವರೇ ನಿನ್ನ ಒಡೆಯ ಅವರನ್ನು ಗೌರವಿಸು. 12 ಟೈರಿನ ಮಗಳು ಕಾಣಿಕೆಯೊಂದಿಗೆ ಬರುವಳು; ಐಶ್ವರ್ಯವಂತರು ನಿನ್ನನ್ನು ವರಿಸಲು ಹುಡುಕಿ ಬರುವರು. 13 ಅರಸನ ಮಗಳು ತನ್ನ ಅಂತಃಪುರದಲ್ಲಿ ಪೂರ್ಣ ವೈಭವದಿಂದ ಇದ್ದಾಳೆ. ಅವಳ ವಸ್ತ್ರವು ಚಿನ್ನದಿಂದ ನೇಯ್ದಿದೆ. 14 ಕಸೂತಿ ಉಡುಪುಗಳಲ್ಲಿ ಮಹಾರಾಜರ ಬಳಿಗೆ ಆಕೆಯು ಹೊರಡುತ್ತಾಳೆ, ಅವಳ ಸಂಗಡ ಸಖಿಯರಾದ ಕನ್ಯೆಯರು ಸಹ ಹೊರಡುವರು. 15 ಸಂತೋಷದಿಂದಲೂ ಉಲ್ಲಾಸದಿಂದಲೂ ಅವರು ಆಕೆಯನ್ನು ತರುತ್ತಿದ್ದಾರೆ. ಹೀಗೆ ಅವರು ರಾಜಭವನದೊಳಗೆ ಪ್ರವೇಶಿಸುವರು. 16 ನಿಮ್ಮ ಪಿತೃಗಳ ಸ್ಥಳಗಳನ್ನು ನಿಮ್ಮ ಮಕ್ಕಳು ತೆಗೆದುಕೊಳ್ಳುವರು. ಮಹಾರಾಜರು ಅವರನ್ನು ಭೂಮಿಯ ದೇಶದಲ್ಲೆಲ್ಲಾ ರಾಜಪುತ್ರರಾಗಿ ಇರಿಸುವರು. 17 ತಲತಲಾಂತರವೂ ನಿಮ್ಮ ಹೆಸರನ್ನು ನಾನು ಸ್ಮರಿಸುವಂತೆ ಮಾಡುವೆನು. ಆದ್ದರಿಂದ ಜನರು ಯುಗಯುಗಾಂತರವೂ ನಿಮ್ಮನ್ನು ಹೊಗಳುವರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.