Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 28 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 28
ದಾವೀದನ ಕೀರ್ತನೆ.

1 ಯೆಹೋವ ದೇವರೇ, ನೀವು ನನಗೆ ಸಂರಕ್ಷಿಸುವ ಬಂಡೆಯಾಗಿದ್ದೀರಿ. ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ಮೌನವಾಗಿರಬೇಡಿರಿ; ನೀವು ಸುಮ್ಮನಿದ್ದರೆ ನಾನು ಸಮಾಧಿಯಲ್ಲಿದ್ದವನಿಗೆ ಸಮಾನನಾಗುವೆನು.

2 ನಾನು ನಿಮಗೆ ಮೊರೆಯಿಡುವಾಗ, ನನ್ನ ಕೈಗಳನ್ನು ನಿಮ್ಮ ಮಹಾಪರಿಶುದ್ಧ ಸ್ಥಳದ ಕಡೆಗೆ ಎತ್ತುವಾಗ ನನ್ನ ವಿಜ್ಞಾಪನೆಯನ್ನು ಲಾಲಿಸಿರಿ.

3 ದುಷ್ಟರ ಸಂಗಡವೂ ಅಪರಾಧ ಮಾಡುವವರ ಸಂಗಡವೂ ನನ್ನನ್ನು ಎಳೆಯಬೇಡಿರಿ; ಅವರು ತಮ್ಮ ನೆರೆಯವರೊಂದಿಗೆ ಸಮಾಧಾನವಾಗಿ ಮಾತನಾಡುತ್ತಾರೆ; ಆದರೆ ಕೇಡು ಅವರ ಹೃದಯದಲ್ಲಿ ಇದೆ.

4 ಅವರ ಕೃತ್ಯಗಳ ಪ್ರಕಾರವಾಗಿಯೂ, ಅವರ ಕೆಟ್ಟತನಗಳ ಪ್ರಕಾರವಾಗಿಯೂ ಅವರಿಗೆ ಪ್ರತಿಫಲಕೊಡಿರಿ; ಅವರ ಕೈಕೃತ್ಯಗಳ ಪ್ರಕಾರವಾಗಿ ಅವರಿಗೆ ಕೊಡಿರಿ, ಅರ್ಹತೆಗೆ ತಕ್ಕಂತೆಯೇ ಅವರಿಗೆ ಬರಮಾಡಿರಿ.

5 ಅವರು ಯೆಹೋವ ದೇವರ ಕೃತ್ಯಗಳನ್ನೂ, ಅವರ ಕೈಗಳ ಕೆಲಸವನ್ನೂ ಲಕ್ಷಿಸುವುದಿಲ್ಲ; ಆದ್ದರಿಂದ ದೇವರು ಅವರನ್ನು ವೃದ್ಧಿಗೊಳಿಸದೆ ದಂಡಿಸುವರು.

6 ಯೆಹೋವ ದೇವರಿಗೆ ಸ್ತುತಿಯುಂಟಾಗಲಿ; ಕರುಣೆಗಾಗಿ ನನ್ನ ಮೊರೆಯನ್ನು ಅವರು ಕೇಳಿದ್ದಾರೆ.

7 ಯೆಹೋವ ದೇವರು ನನ್ನ ಬಲವೂ, ನನ್ನ ಗುರಾಣಿಯೂ ಆಗಿದ್ದಾರೆ; ನನ್ನ ಹೃದಯವು ಅವರಲ್ಲಿ ಭರವಸೆ ಇಟ್ಟದ್ದರಿಂದ ನಾನು ಸಹಾಯ ಹೊಂದಿದೆನು; ನನ್ನ ಹೃದಯವು ಬಹಳವಾಗಿ ಉತ್ಸಾಹಪಡುವುದು; ನನ್ನ ಕೀರ್ತನೆಯಿಂದ ಅವರನ್ನು ಕೊಂಡಾಡುವೆನು.

8 ಯೆಹೋವ ದೇವರು ತಮ್ಮ ಜನರಿಗೆ ಬಲವಾಗಿದ್ದಾರೆ; ತಮ್ಮ ಅಭಿಷಿಕ್ತನಿಗೆ ರಕ್ಷಣೆಯ ಕೋಟೆ ಆಗಿದ್ದಾರೆ.

9 ನಿಮ್ಮ ಜನರನ್ನು ರಕ್ಷಿಸಿರಿ; ನಿಮ್ಮ ವಾರಸುದಾರರನ್ನು ಆಶೀರ್ವದಿಸಿರಿ; ನೀವು ಅವರ ಕುರುಬ ಆಗಿದ್ದು; ಅವರನ್ನು ಯಾವಾಗಲೂ ಮುನ್ನಡೆಸಿರಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು