Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 26 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 26
ದಾವೀದನ ಕೀರ್ತನೆ.

1 ಯೆಹೋವ ದೇವರೇ, ನನ್ನನ್ನು ನಿರ್ದೋಷನನ್ನಾಗಿ ನಿರ್ಣಯಿಸಿರಿ, ನಾನು ದೋಷವಿಲ್ಲದ ಜೀವನ ನಡೆಸಿದ್ದೇನೆ; ನಾನು ಯೆಹೋವ ದೇವರಲ್ಲಿ ಕದಲದೆ ಭರವಸೆ ಇಟ್ಟಿದ್ದೇನೆ.

2 ಯೆಹೋವ ದೇವರೇ, ನನ್ನನ್ನು ಶೋಧಿಸಿ, ಪರೀಕ್ಷಿಸಿರಿ; ನನ್ನ ಅಂತರಿಂದ್ರಿಯಗಳನ್ನೂ ನನ್ನ ಹೃದಯವನ್ನೂ ಶೋಧಿಸಿರಿ.

3 ನಿಮ್ಮ ಒಡಂಬಡಿಕೆಯ ಪ್ರೀತಿಯು ಯಾವಾಗಲೂ ನನ್ನ ಮನಸ್ಸು ತುಂಬ ಇದೆ; ನಿಮ್ಮ ನಂಬಿಗಸ್ತಿಕೆಯಲ್ಲಿ ನಾನು ಬಾಳುತ್ತಿದ್ದೇನೆ.

4 ಮೋಸಗಾರರ ಸಂಗಡ ನಾನು ಕುಳಿತುಕೊಳ್ಳಲಿಲ್ಲ; ವಂಚಕರ ಸಂಗಡ ನಾನು ಹೋಗುವುದಿಲ್ಲ.

5 ದುರ್ಮಾರ್ಗಿಗಳ ಸಭೆಯನ್ನು ದ್ವೇಷಿಸಿದ್ದೇನೆ; ದುಷ್ಟರ ಸಂಗಡ ಕುಳಿತುಕೊಳ್ಳುವುದಿಲ್ಲ.

6 ನನ್ನ ಕೈಗಳನ್ನು ನಿರ್ಮಲವಾಗಿ ತೊಳೆದುಕೊಂಡು, ಯೆಹೋವ ದೇವರೇ, ನಿಮ್ಮ ಬಲಿಪೀಠವನ್ನು ಸುತ್ತುತ್ತಾ,

7 ಸ್ತೋತ್ರ ಧ್ವನಿಯೆತ್ತಿ ಸಾರುತ್ತಾ ನಿಮ್ಮ ಅದ್ಭುತಗಳನ್ನೆಲ್ಲಾ ತಿಳಿಸುವೆನು.

8 ಯೆಹೋವ ದೇವರೇ, ನೀವು ವಾಸಿಸುವ ಆಲಯವನ್ನೂ, ನಿಮ್ಮ ಮಹಿಮೆಯ ನಿವಾಸವನ್ನೂ ಪ್ರೀತಿಸುತ್ತೇನೆ.

9 ಪಾಪಿಗಳ ಸಂಗಡ ನನ್ನ ಪ್ರಾಣವನ್ನೂ, ರಕ್ತಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡಿರಿ.

10 ಅವರ ಕೈಗಳಲ್ಲಿ ಕೇಡು ಇದೆ; ಅವರ ಬಲಗೈ ಲಂಚಗಳಿಂದ ತುಂಬಿದೆ.

11 ನಾನಾದರೋ ನನ್ನ ಯಥಾರ್ಥತೆಯಲ್ಲಿ ನಡೆಯುತ್ತೇನೆ; ನನ್ನನ್ನು ವಿಮೋಚಿಸಿರಿ; ನನಗೆ ಕರುಣೆಯುಳ್ಳವರಾಗಿರಿ.

12 ನನ್ನ ಪಾದವು ಸಮ ನೆಲದಲ್ಲಿ ನಿಂತಿದೆ; ನಾನು ಮಹಾಸಭೆಯಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು