Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 25 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 25
ದಾವೀದನ ಕೀರ್ತನೆ.

1 ಯೆಹೋವ ದೇವರೇ, ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

2 ನನ್ನ ದೇವರೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ; ನಾನು ನಾಚಿಕೆಪಡದಂತೆ ಮಾಡಿರಿ; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.

3 ನಿಮ್ಮನ್ನು ನಿರೀಕ್ಷಿಸುವವರಲ್ಲಿ ಯಾರೂ ನಾಚಿಕೆಪಡದಿರಲಿ; ನಿಷ್ಕಾರಣವಾಗಿ ವಂಚನೆ ಮಾಡುವವರು ನಾಚಿಕೆಪಡಲಿ.

4 ಯೆಹೋವ ದೇವರೇ, ನಿಮ್ಮ ಮಾರ್ಗಗಳನ್ನು ನನಗೆ ತೋರಿಸಿರಿ; ನಿಮ್ಮ ದಾರಿಗಳನ್ನು ನನಗೆ ಕಲಿಸಿರಿ.

5 ನಿಮ್ಮ ಸತ್ಯದಲ್ಲಿ ಮಾರ್ಗದರ್ಶನ ನೀಡಿ ನನಗೆ ಬೋಧಿಸಿರಿ; ಏಕೆಂದರೆ ನೀವು ನನ್ನ ರಕ್ಷಕ ಆಗಿರುವ ದೇವರಾಗಿದ್ದೀರಿ; ನಿಮ್ಮನ್ನು ನಾನು ದಿನವೆಲ್ಲಾ ನಿರೀಕ್ಷಿಸುತ್ತಿದ್ದೇನೆ.

6 ಯೆಹೋವ ದೇವರೇ, ಆದಿಯಿಂದಿರುವ ನಿಮ್ಮ ಅನುಕಂಪವನ್ನೂ ನಿಮ್ಮ ಪ್ರೀತಿಯನ್ನೂ, ಕರುಣೆಯನ್ನೂ ಜ್ಞಾಪಕಮಾಡಿಕೊಳ್ಳಿರಿ.

7 ಯೆಹೋವ ದೇವರೇ, ನನ್ನ ಯೌವನದ ಪಾಪಗಳನ್ನೂ, ನನ್ನ ತಿರುಗಿ ಬೀಳುವಿಕೆಗಳನ್ನೂ ಜ್ಞಾಪಕ ಮಾಡಿಕೊಳ್ಳಬೇಡಿರಿ. ನೀವು ಒಳ್ಳೆಯವರಾಗಿರುವುದರಿಂದ ನಿಮ್ಮ ಪ್ರೀತಿಯ ಪ್ರಕಾರ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ.

8 ಯೆಹೋವ ದೇವರು ಒಳ್ಳೆಯವರೂ ನ್ಯಾಯವುಳ್ಳವರೂ ಆಗಿದ್ದಾರೆ; ಆದ್ದರಿಂದ ಅವರು ಪಾಪಿಗಳಿಗೆ ತಮ್ಮ ಮಾರ್ಗಗಳನ್ನು ಬೋಧಿಸುತ್ತಾರೆ.

9 ದೀನರನ್ನು ನ್ಯಾಯ ಮಾರ್ಗದಲ್ಲಿ ನಡೆಸಿ, ದೀನರಿಗೆ ತಮ್ಮ ಮಾರ್ಗವನ್ನು ಬೋಧಿಸುತ್ತಾರೆ.

10 ಯೆಹೋವ ದೇವರ ಒಡಂಬಡಿಕೆಯನ್ನು ಕೈಗೊಳ್ಳುವವರಿಗೆ ಅವರ ದಾರಿಯೆಲ್ಲವು ಪ್ರೀತಿ, ಸತ್ಯದಿಂದ ತುಂಬಿರುತ್ತವೆ.

11 ನನ್ನ ಅನ್ಯಾಯವು ಬಹು ಘೋರವಾಗಿದ್ದರೂ ನಿಮ್ಮ ಹೆಸರಿನ ನಿಮಿತ್ತ ಯೆಹೋವ ದೇವರೇ ನನ್ನನ್ನು ಮನ್ನಿಸಿರಿ.

12 ಯಾವನು ಯೆಹೋವ ದೇವರಿಗೆ ಭಯಪಡುವನೋ, ಅಂಥವನಿಗೆ ಅವರು ಆಯ್ದುಕೊಳ್ಳತಕ್ಕ ಮಾರ್ಗವನ್ನು ಬೋಧಿಸುವರು.

13 ಅಂಥವರು ಜೀವಮಾನವೆಲ್ಲಾ ಸಫಲರಾಗಿರುವರು. ಅಂಥವರ ಸಂತಾನವು ದೇಶವನ್ನು ಸ್ವಾಧೀನ ಮಾಡಿಕೊಳ್ಳುವುದು.

14 ಯೆಹೋವ ದೇವರ ರಹಸ್ಯವು ಅವರಿಗೆ ಭಯಪಡುವವರೊಂದಿಗೆ ಇರುವುದು; ತಮ್ಮ ಒಡಂಬಡಿಕೆಯನ್ನು ಅವರು ಅಂಥವರಿಗೇ ತಿಳಿಸುವರು.

15 ನನ್ನ ಕಣ್ಣುಗಳು ಯಾವಾಗಲೂ ಯೆಹೋವ ದೇವರ ಕಡೆಗೆ ಇರುತ್ತವೆ; ಏಕೆಂದರೆ ಅವರೇ ನನ್ನ ಪಾದಗಳನ್ನು ಬಲೆಯಿಂದ ಬಿಡಿಸುವವರು.

16 ನೀವು ನನ್ನ ಕಡೆಗೆ ತಿರುಗಿ ನನ್ನನ್ನು ಕರುಣಿಸಿರಿ; ನಾನು ಒಬ್ಬಂಟಿಗನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.

17 ನನ್ನ ಹೃದಯದ ಕಷ್ಟಗಳನ್ನು ಪರಿಹರಿಸಿರಿ; ನೀವು ನನ್ನ ಸಂಕಟಗಳಿಂದ ನನ್ನನ್ನು ಬಿಡಿಸಿರಿ.

18 ನನ್ನ ಬಾಧೆಯನ್ನೂ ವ್ಯಥೆಯನ್ನೂ ನೋಡಿರಿ; ನನ್ನ ಪಾಪಗಳನ್ನೆಲ್ಲಾ ತೆಗೆದುಹಾಕಿರಿ.

19 ನನ್ನ ಶತ್ರುಗಳನ್ನು ನೋಡಿರಿ, ಅವರು ಹೆಚ್ಚಾಗಿದ್ದಾರೆ; ತೀವ್ರ ಹಗೆಯಿಂದ ಅವರು ನನ್ನನ್ನು ದ್ವೇಷಿಸುತ್ತಾರೆ.

20 ನನ್ನ ಪ್ರಾಣವನ್ನು ಕಾಪಾಡಿ, ನನ್ನನ್ನು ಬಿಡಿಸಿರಿ; ನಾನು ನಾಚಿಕೆಪಡದಂತೆ ಮಾಡಿರಿ, ಏಕೆಂದರೆ ನಾನು ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ.

21 ಯಥಾರ್ಥತೆಯೂ ನಿಷ್ಕಪಟವೂ ನನ್ನನ್ನು ಕಾಯಲಿ, ಏಕೆಂದರೆ ನನ್ನ ನಿರೀಕ್ಷೆಯು ನಿಮ್ಮ ಮೇಲೆ ಇದೆ.

22 ದೇವರೇ, ಇಸ್ರಾಯೇಲರನ್ನು ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ವಿಮೋಚಿಸಿರಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು