ಕೀರ್ತನೆಗಳು 24 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 24 ದಾವೀದನ ಕೀರ್ತನೆ. 1 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರದ್ದೇ; ಲೋಕವೂ ಅದರ ನಿವಾಸಿಗಳೂ ಅವರಿಗೇ ಸೇರಿದ್ದು. 2 ಏಕೆಂದರೆ ಅವರು ಸಮುದ್ರಗಳ ಮೇಲೆ ಅದನ್ನು ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರಪಡಿಸಿದ್ದಾರೆ. 3 ಯೆಹೋವ ದೇವರ ಪರ್ವತವನ್ನು ಹತ್ತುವವನು ಯಾರು? ಅವರ ಪರಿಶುದ್ಧ ಸ್ಥಳದಲ್ಲಿ ನಿಲ್ಲುವವನು ಯಾರು? 4 ಶುದ್ಧಹಸ್ತಗಳೂ ನಿರ್ಮಲವಾದ ಹೃದಯವೂ ಉಳ್ಳವನಾಗಿದ್ದು; ವಂಚನೆಯಿಂದ ಮುಕ್ತನಾಗಿ, ಮೋಸದಿಂದ ಆಣೆ ಇಡದೆಯೂ ಇರುವವನೇ. 5 ಇಂಥವರೇ ಯೆಹೋವ ದೇವರಿಂದ ಆಶೀರ್ವಾದವನ್ನು ಹೊಂದುವರು. ತಮ್ಮ ರಕ್ಷಕ ಆಗಿರುವ ದೇವರಿಂದಲೇ ನಿರ್ದೋಷಿಯಾಗುವರು. 6 ಇಂಥವರೇ ದೇವರನ್ನು ಹುಡುಕುವ ಸಂತತಿಯು; ಯಾಕೋಬನ ದೇವರೇ, ನಿಮ್ಮನ್ನು ಹುಡುಕುವವರು ಇಂಥವರೇ. 7 ದ್ವಾರಗಳೇ ತಲೆ ಎತ್ತಿ ನೋಡಿರಿ, ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ; ಮಹಿಮೆಯ ಅರಸ ಒಳಗೆ ಬರಲಿದ್ದಾರೆ. 8 ಈ ಮಹಿಮೆಯ ಅರಸ ಯಾರು? ಬಲವೂ ಪರಾಕ್ರಮವೂ ಉಳ್ಳ ಯೆಹೋವ ದೇವರೇ ಆಗಿರುತ್ತಾರೆ. ಯೆಹೋವ ದೇವರು ಯುದ್ಧದಲ್ಲಿ ಪರಾಕ್ರಮವುಳ್ಳವರು ಆಗಿರುತ್ತಾರೆ. 9 ದ್ವಾರಗಳೇ, ತಲೆ ಎತ್ತಿ ನೋಡಿರಿ, ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ; ಮಹಿಮೆಯ ಅರಸ ಒಳಗೆ ಬರಲಿದ್ದಾರೆ. 10 ಮಹಿಮೆಯ ಅರಸ ಯಾರು? ಸೇನಾಧೀಶ್ವರ ಯೆಹೋವ ದೇವರೇ ಆಗಿರುತ್ತಾರೆ. ಇವರೇ ಮಹಿಮೆಯ ಅರಸರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.