ಕೀರ್ತನೆಗಳು 2 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 2 1 ರಾಷ್ಟ್ರಗಳು ಒಳಸಂಚು ಮಾಡುವುದೂ ಜನಾಂಗಗಳು ವ್ಯರ್ಥವಾಗಿ ಕುತಂತ್ರ ಮಾಡುವುದೂ ಏಕೆ? 2 ಯೆಹೋವ ದೇವರಿಗೂ ಅವರ ಅಭಿಷಿಕ್ತನಿಗೂ ವಿರೋಧವಾಗಿ, ಭೂಲೋಕದ ಅರಸರು ನಿಂತುಕೊಳ್ಳುತ್ತಾರೆ. ಅಧಿಪತಿಗಳೂ ಒಂದಾಗಿ ಕೂಡಿಕೊಳ್ಳುತ್ತಿರುವರು. 3 “ಅವರು ಹಾಕಿದ ಬೇಡಿಗಳನ್ನು ಮುರಿದು ಬಂಧಗಳನ್ನು ಹರಿದು ಬೀಸಾಡೋಣ,” ಎನ್ನುತ್ತಾರೆ. 4 ಪರಲೋಕದಲ್ಲಿ ಕೂತಿರುವ ದೇವರು ಅದಕ್ಕೆ ನಗುವರು, ಕರ್ತದೇವರು ಅವರನ್ನು ಕಂಡು ಅಪಹಾಸ್ಯ ಮಾಡುವರು. 5 ಕರ್ತದೇವರು ತಮ್ಮ ಕೋಪದಿಂದ ಅವರನ್ನು ಗದರಿಸುತ್ತಾ, ತಮ್ಮ ಬೇಸರದಿಂದ ಅವರನ್ನು ಕಳವಳಪಡಿಸಿ ಹೀಗೆ ಹೇಳುವರು, 6 “ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.” 7 ನಾನು ಯೆಹೋವ ದೇವರ ತೀರ್ಪನ್ನು ಹೀಗೆ ಪ್ರಕಟಿಸುವೆನು: ಅವರು ನನಗೆ ಹೇಳಿದ್ದು, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ. 8 ನನ್ನನ್ನು ಕೇಳು, ಆಗ ನಾನು ರಾಷ್ಟ್ರಗಳನ್ನು ನಿನ್ನ ವಾರಸಾಗಿಯೂ, ಭೂಮಿಯ ಕಟ್ಟಕಡೆಯವರೆಗೂ ಇರುವ ದೇಶಗಳನ್ನೂ ನಿಮ್ಮ ಸೊತ್ತಾಗಿಯೂ ಕೊಡುವೆನು. 9 ಕಬ್ಬಿಣದ ಗದೆಯಿಂದ ನೀನು ಅವರನ್ನು ದಂಡಿಸಿ, ಮಣ್ಣಿನ ಮಡಕೆಯಂತೆ ಚೂರುಚೂರಾಗಿ ಅವರನ್ನು ಒಡೆದುಹಾಕುವೆ.” 10 ಆದ್ದರಿಂದ, ರಾಜರುಗಳೇ, ಈಗ ಜ್ಞಾನವಂತರಾಗಿರಿ. ಭೂಲೋಕದ ಅಧಿಕಾರಿಗಳೇ, ಎಚ್ಚರಿಕೆಯಿಂದಿರಿ. 11 ಭಯಭಕ್ತಿಯಿಂದ ಯೆಹೋವ ದೇವರ ಸೇವೆಮಾಡಿರಿ, ನಡುಗುತ್ತಾ ಅವರ ಆಳ್ವಿಕೆಯಲ್ಲಿ ಉಲ್ಲಾಸಪಡಿರಿ. 12 ಯೆಹೋವ ದೇವರು ಬೇಸರಗೊಂಡು, ನೀವು ನಿಮ್ಮ ಮಾರ್ಗದಲ್ಲಿ ನಾಶವಾಗದಂತೆ ಅವರ ಮಗನನ್ನು ಮುದ್ದಿಸಿರಿ. ಏಕೆಂದರೆ ದೇವರ ರೋಷವು ಕ್ಷಣಮಾತ್ರದಲ್ಲಿ ಜ್ವಾಲಿಸುವುದು. ದೇವರ ಆಶ್ರಯ ಪಡೆಯುವವರೆಲ್ಲಾ ಧನ್ಯರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.