Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 19 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 19
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.

1 ಆಕಾಶವು ದೇವರ ಮಹಿಮೆಯನ್ನು ಸಾರುತ್ತದೆ; ಅಂತರಿಕ್ಷವು ಅವರ ಕೈಕೆಲಸವನ್ನು ಘೋಷಿಸುತ್ತದೆ.

2 ಹಗಲೆಲ್ಲಾ ಅವು ಮಾತನಾಡುತ್ತವೆ; ರಾತ್ರಿಯೆಲ್ಲಾ ಅವು ಅರಿವನ್ನು ಪ್ರಕಟಿಸುತ್ತವೆ.

3 ಅವುಗಳಿಗೆ ಮಾತೂ ಇಲ್ಲ, ಪದವೂ ಇಲ್ಲ, ಅವುಗಳ ಸ್ವರವು ಕೇಳುವುದೂ ಇಲ್ಲ.

4 ಅವುಗಳ ಧ್ವನಿ ಭೂಲೋಕವೆಲ್ಲಾ ಹರಡಿವೆ; ಅವುಗಳ ಮಾತುಗಳೋ ಲೋಕದ ಕಟ್ಟಕಡೆಯವರೆಗೂ ಹೋಗುತ್ತವೆ; ಆಕಾಶದಲ್ಲಿ ದೇವರು ಸೂರ್ಯನಿಗೆ ಗುಡಾರ ಹಾಕಿದ್ದಾರೆ.

5 ಸೂರ್ಯನು ಮದುಮಗನಂತೆ ತನ್ನ ಕೊಠಡಿಯಿಂದ ಹೊರಟುಬಂದು, ಪಂದ್ಯಕ್ಕೆ ಹರ್ಷದಿಂದ ಓಡುವ ಪರಾಕ್ರಮಶಾಲಿಯಂತೆ ಇದ್ದಾನೆ.

6 ಆಕಾಶದ ಒಂದು ಕಡೆಯಿಂದ ಉದಯಿಸಿ ಮತ್ತೊಂದು ಕಡೆಯವರೆಗೆ ಹೊರಟು ಪ್ರಯಾಣಿಸುತ್ತಾನೆ; ಅದರ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.

7 ಯೆಹೋವ ದೇವರ ನಿಯಮವು ಸಂಪೂರ್ಣವಾಗಿದ್ದು, ಪ್ರಾಣಕ್ಕೆ ಜೀವಕರವಾಗಿದೆ; ಯೆಹೋವ ದೇವರ ಶಾಸನಗಳು ವಿಶ್ವಾಸಪಾತ್ರವಾಗಿದ್ದು, ಮುಗ್ಧನನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ.

8 ಯೆಹೋವ ದೇವರ ಸೂತ್ರಗಳು ನೀತಿಯುಳ್ಳವುಗಳಾಗಿದ್ದು ಅವು ಹೃದಯಕ್ಕೆ ಆನಂದಕರವಾಗಿವೆ; ಯೆಹೋವ ದೇವರ ಆಜ್ಞೆಗಳು ಸ್ಪಷ್ಟವಾಗಿದ್ದು, ಕಣ್ಣುಗಳಿಗೆ ಪ್ರಕಾಶಕರವಾಗಿವೆ.

9 ಯೆಹೋವ ದೇವರ ಭಯವು ಶುದ್ಧವಾಗಿದ್ದು, ಎಂದೆಂದಿಗೂ ಶಾಶ್ವತವಾಗಿದೆ. ಯೆಹೋವ ದೇವರ ತೀರ್ಪುಗಳು ಸತ್ಯವಾಗಿದ್ದು, ಅವೆಲ್ಲವೂ ನೀತಿಯುಳ್ಳದ್ದಾಗಿವೆ.

10 ಅವು ಬಂಗಾರಕ್ಕಿಂತಲೂ, ಅಪರಂಜಿಗಿಂತಲೂ ಅಮೂಲ್ಯವಾಗಿವೆ; ಅವು ಜೇನಿಗಿಂತಲೂ, ಅಪ್ಪಟ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.

11 ನಿಮ್ಮ ಸೇವಕನು ಅವುಗಳಿಂದ ಎಚ್ಚರಿಕೆ ಪಡೆಯುತ್ತಾನೆ; ಅವುಗಳನ್ನು ಕೈಗೊಳ್ಳುವುದರಲ್ಲಿ ದೊಡ್ಡ ಪ್ರತಿಫಲವುಂಟು.

12 ತಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಯಾರಿಗೆ ಸಾಧ್ಯ? ನನ್ನ ಗುಪ್ತ ಪಾಪಗಳನ್ನು ಕ್ಷಮಿಸು.

13 ಬೇಕುಬೇಕೆಂದು ಪಾಪಮಾಡದಂತೆ ನಿಮ್ಮ ಸೇವಕನನ್ನು ಕಾಪಾಡು; ಅಂಥ ಪಾಪಗಳು ನನ್ನ ಮೇಲೆ ಆಳಿಕೆ ಮಾಡದಿರಲಿ. ಆಗ ನಾನು ತಪ್ಪಿಲ್ಲದವನಾಗಿ, ಮಹಾಪರಾಧದಿಂದ ಬಿಡುಗಡೆಯಾಗಿರುವೆನು.

14 ಯೆಹೋವ ದೇವರೇ, ನನ್ನ ಬಂಡೆಯೇ, ನನ್ನ ವಿಮೋಚಕರೇ, ನನ್ನ ಬಾಯಿಯ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿಮ್ಮ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿರಲಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು