ಕೀರ್ತನೆಗಳು 17 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 17 ದಾವೀದನ ಪ್ರಾರ್ಥನೆ. 1 ಯೆಹೋವ ದೇವರೇ, ನನ್ನ ಬೇಡಿಕೆ ನ್ಯಾಯವಾದದ್ದು, ನನ್ನ ಮೊರೆಗೆ ಕಿವಿಗೊಡಿರಿ. ನನ್ನ ಪ್ರಾರ್ಥನೆಯನ್ನು ಕೇಳಿರಿ, ಅದು ಕಪಟ ತುಟಿಗಳಿಂದ ಬಂದದ್ದಲ್ಲ. 2 ನನ್ನ ನ್ಯಾಯವು ನಿಮ್ಮಿಂದಲೇ ಬರಲಿ, ನಿಮ್ಮ ಕಣ್ಣುಗಳು ಸರಿಯಾದವುಗಳನ್ನೇ ನೋಡುತ್ತವೆ. 3 ನೀವು ನನ್ನ ಹೃದಯವನ್ನು ಶೋಧಿಸಿದರೂ, ನೀವು ರಾತ್ರಿಯಲ್ಲಿ ನನ್ನನ್ನು ಪರೀಕ್ಷಿಸಿ ವಿಚಾರಿಸಿದರೂ, ನಾನು ಕೆಟ್ಟಯೋಜನೆ ಮಾಡಿಕೊಳ್ಳಲಿಲ್ಲವೆಂದು ನೀವು ಕಂಡುಕೊಳ್ಳುವಿರಿ; ನನ್ನ ಬಾಯಿಯೂ ಅತಿಕ್ರಮಿಸುವುದಿಲ್ಲವೆಂದು ನಾನು ತೀರ್ಮಾನಿಸಿಕೊಂಡಿದ್ದೇನೆ. 4 ಮನುಷ್ಯರು ನನಗೆ ಲಂಚ ನೀಡಲು ಪ್ರಯತ್ನಿಸಿದರೂ, ನಿಮ್ಮ ತುಟಿಗಳ ಆಜ್ಞಾನುಸಾರ ನಾನು ಹಿಂಸಕರ ಮಾರ್ಗಗಳಿಂದ ನನ್ನನ್ನು ದೂರವಾಗಿಟ್ಟುಕೊಂಡಿದ್ದೇನೆ. 5 ನನ್ನ ಹೆಜ್ಜೆಗಳು ಜಾರದ ಹಾಗೆ ನನ್ನ ನಡೆಗಳನ್ನು ನಿಮ್ಮ ದಾರಿಯಲ್ಲಿ ಸ್ಥಿರಪಡಿಸಿಕೊಂಡಿದ್ದೇನೆ. 6 ನನ್ನ ದೇವರೇ, ನೀವು ನನಗೆ ಉತ್ತರ ಕೊಡುವುದರಿಂದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನೀವು ನಿಮ್ಮ ಕಿವಿಯನ್ನು ನನ್ನ ಕಡೆ ತಿರುಗಿಸಿ, ನನ್ನ ಪ್ರಾರ್ಥನೆಯನ್ನು ಆಲಿಸಿರಿ. 7 ನಿಮ್ಮ ಒಡಂಬಡಿಕೆಯ ಪ್ರೀತಿಯ ಅದ್ಭುತವನ್ನು ನನಗೆ ತೋರಿಸಿರಿ. ತಮ್ಮ ವೈರಿಗಳಿಂದ ಓಡಿಬಂದು ನಿಮ್ಮಲ್ಲಿ ಆಶ್ರಯ ಪಡೆಯುವವರಿಗೆ ಭುಜಬಲದಿಂದ ರಕ್ಷಿಸುವವರು ನೀವೇ. 8 ನಿಮ್ಮ ಕಣ್ಣುಗುಡ್ಡೆಯ ಹಾಗೆ ನನ್ನನ್ನು ಕಾಪಾಡಿರಿ, ನಿಮ್ಮ ರೆಕ್ಕೆಗಳ ನೆರಳಿನಲ್ಲಿ ನನ್ನನ್ನು ಮರೆಮಾಡಿರಿ. 9 ನನ್ನನ್ನು ಬಾಧಿಸುವ ದುಷ್ಟರಿಂದಲೂ, ನನ್ನನ್ನು ಸುತ್ತಿಕೊಳ್ಳುವ ನನ್ನ ಪ್ರಾಣಾಂತಕ ಶತ್ರುಗಳಿಂದಲೂ ತಪ್ಪಿಸಿ. 10 ಅವರು ತಮ್ಮ ಸೊಕ್ಕಿನ ಹೃದಯಗಳನ್ನು ಮುಚ್ಚಿಕೊಂಡಿದ್ದಾರೆ, ತಮ್ಮ ಬಾಯಿಂದ ಅವರು ಗರ್ವವನ್ನು ಮಾತನಾಡುತ್ತಾರೆ. 11 ನನ್ನನ್ನು ಬೀಳಿಸುವಂತೆ, ಅವರು ಈಗ ನನ್ನನ್ನು ಸುತ್ತಿಕೊಂಡಿದ್ದಾರೆ, ನನ್ನನ್ನು ನೆಲಕ್ಕೆ ಹಾಕಬೇಕೆಂದು ಅವರ ಕಣ್ಣುಗಳು ಕಾದಿವೆ. 12 ಅವರು ತಮ್ಮ ಬೇಟೆಯ ಹಸಿವೆಯಿಂದಿರುವ ಸಿಂಹದ ಹಾಗೆಯೂ, ಗುಪ್ತಸ್ಥಳಗಳಲ್ಲಿ ಹೊಂಚಿ ಕುಳಿತಿರುವ ಭೀಕರ ಸಿಂಹದ ಹಾಗೆಯೂ ಇದ್ದಾರೆ. 13 ಯೆಹೋವ ದೇವರೇ, ಎದ್ದು ಅವರನ್ನು ಎದುರಿಸಿ ಕೆಳಗೆ ಕೆಡವಿಬಿಡಿರಿ; ನಿಮ್ಮ ಖಡ್ಗದ ಮೂಲಕ ನನ್ನನ್ನು ದುಷ್ಟರಿಂದ ಕಾಪಾಡಿರಿ. 14 ಯೆಹೋವ ದೇವರೇ, ಈ ಲೋಕಜೀವನದಲ್ಲಿಯಷ್ಟೇ ಪ್ರತಿಫಲವೆಂದು ತಿಳಿಯುವ ಜನರಿಂದ, ನನ್ನನ್ನು ನಿಮ್ಮ ಹಸ್ತದ ಮೂಲಕ ರಕ್ಷಿಸಿ ಕಾಪಾಡಿರಿ. ಅಂಥ ಜನರಿಗಾಗಿ ನೀವು ಸಂಗ್ರಹಿಸಿ ಇಟ್ಟಿರುವುದು ಅವರ ಹೊಟ್ಟೆ ತುಂಬಲಿ; ಅವರ ಮಕ್ಕಳು ಅದರಿಂದ ಸಮೃದ್ಧಿ ಹೊಂದಲಿ, ಅವರ ಚಿಕ್ಕಮಕ್ಕಳಿಗೂ ಉಳಿದದ್ದು ಸಿಕ್ಕಲಿ. 15 ನಾನಾದರೋ ನೀತಿಯಲ್ಲಿ ನಿಮ್ಮ ಮುಖವನ್ನು ನೋಡುವೆನು. ನಾನು ಎಚ್ಚೆತ್ತಾಗ ನಿಮ್ಮ ಹೋಲಿಕೆಯನ್ನೇ ಕಂಡು ತೃಪ್ತನಾಗುವೆನು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.