Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 147 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 147

1 ಯೆಹೋವ ದೇವರನ್ನು ಸ್ತುತಿಸಿರಿ. ಏಕೆಂದರೆ ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದು; ದೇವರನ್ನು ಸ್ತುತಿಸುವುದು ರಮ್ಯವೂ, ಯೋಗ್ಯವೂ ಆಗಿದೆ.

2 ಯೆಹೋವ ದೇವರು ಯೆರೂಸಲೇಮನ್ನು ಕಟ್ಟುತ್ತಾರೆ, ಚದರಿಹೋದ ಇಸ್ರಾಯೇಲನ್ನು ಕೂಡಿಸುತ್ತಾರೆ.

3 ದೇವರು ಮುರಿದ ಹೃದಯದವರನ್ನು ಸ್ವಸ್ಥಮಾಡಿ, ಅವರ ಗಾಯಗಳನ್ನು ಕಟ್ಟುತ್ತಾರೆ.

4 ದೇವರು ನಕ್ಷತ್ರಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ; ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆಯುತ್ತಾರೆ.

5 ನಮ್ಮ ಯೆಹೋವ ದೇವರು ದೊಡ್ಡವರು, ಬಹು ಶಕ್ತರು; ಅವರ ವಿವೇಕಕ್ಕೆ ಎಣೆಯಿಲ್ಲ.

6 ಯೆಹೋವ ದೇವರು ಸಾತ್ವಿಕರನ್ನು ಉದ್ಧರಿಸುತ್ತಾರೆ; ದುಷ್ಟರನ್ನು ದಂಡಿಸುತ್ತಾರೆ.

7 ಯೆಹೋವ ದೇವರಿಗೆ ಸ್ತೋತ್ರಗೀತೆ ಹಾಡಿರಿ, ನಮ್ಮ ದೇವರನ್ನು ಕಿನ್ನರಿಯಿಂದ ಸ್ತುತಿಸಿರಿ.

8 ದೇವರು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾರೆ; ಭೂಮಿಗೆ ಮಳೆಯನ್ನು ಸುರಿಸುತ್ತಾರೆ; ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾರೆ.

9 ದೇವರು ಪಶುಗಳಿಗೂ, ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾರೆ.

10 ಕುದುರೆಯ ಶಕ್ತಿಯಲ್ಲಿ ಅವರಿಗೆ ಇಷ್ಟವಿಲ್ಲ; ಶೂರನ ಕಾಲ್ಬಲವನ್ನು ಮೆಚ್ಚುವುದಿಲ್ಲ.

11 ಯೆಹೋವ ದೇವರು ತಮಗೆ ಭಯಪಡುವವರಲ್ಲಿ ಆನಂದಿಸುತ್ತಾರೆ, ತಮ್ಮ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರಲ್ಲಿ ಹರ್ಷಿಸುತ್ತಾರೆ.

12 ಯೆರೂಸಲೇಮೇ, ಯೆಹೋವ ದೇವರನ್ನು ಸ್ತುತಿಸು; ಚೀಯೋನೇ, ನಿಮ್ಮ ದೇವರನ್ನು ಸ್ತುತಿಸು.

13 ನಿಮ್ಮ ಬಾಗಿಲುಗಳ ಅಗುಳಿಗಳನ್ನು ಬಲಗೊಳಿಸಿ, ದೇವರು ನಿಮ್ಮ ಜನರನ್ನು ಆಶೀರ್ವದಿಸುತ್ತಾರೆ.

14 ದೇವರು ನಿಮ್ಮ ಮೇರೆಗಳನ್ನು ಸಮಾಧಾನಪಡಿಸುತ್ತಾರೆ; ಉತ್ತಮವಾದ ಗೋಧಿಯಿಂದ ನಿಮ್ಮನ್ನು ತೃಪ್ತಿಪಡಿಸುತ್ತಾರೆ.

15 ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾರೆ; ದೇವರ ವಾಕ್ಯವು ಬಹು ತೀವ್ರವಾಗಿ ಓಡುತ್ತದೆ.

16 ದೇವರು ಹಿಮವನ್ನು ಉಣ್ಣೆಯ ಹಾಗೆ ಹರಡುತ್ತಾರೆ; ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.

17 ದೇವರು ನೀರುಗಡ್ಡೆಯನ್ನು ಕಲ್ಲು ಹರಳುಗಳಂತೆ ಸುರಿದು ಹಾಕುತ್ತಾರೆ; ಅವರು ಕಳುಹಿಸುವ ಚಳಿಯ ಮುಂದೆ ಯಾರು ನಿಲ್ಲುವರು?

18 ದೇವರು ತಮ್ಮ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾರೆ; ದೇವರು ಗಾಳಿಯನ್ನು ಬೀಸುವಂತೆ ಮಾಡುತ್ತಾರೆ; ನೀರು ಹರಿಯುತ್ತದೆ.

19 ದೇವರು ಯಾಕೋಬ್ಯರಿಗೆ ತಮ್ಮ ವಾಕ್ಯವನ್ನು ಪ್ರಕಟಿಸುತ್ತಾರೆ, ಇಸ್ರಾಯೇಲರಿಗೆ ತಮ್ಮ ತೀರ್ಪುಗಳನ್ನೂ, ತನ್ನ ನ್ಯಾಯವಿಧಿಗಳನ್ನೂ ಪ್ರಕಟಿಸುತ್ತಾರೆ.

20 ಬೇರೆ ಯಾವ ಜನಾಂಗಕ್ಕಾದರೂ ದೇವರು ಹೀಗೆ ಮಾಡಲಿಲ್ಲ; ದೇವರ ನ್ಯಾಯವಿಧಿಗಳನ್ನು ಜನರು ತಿಳಿದುಕೊಳ್ಳುವುದಿಲ್ಲ. ಯೆಹೋವ ದೇವರನ್ನು ಸ್ತುತಿಸಿರಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು