ಕೀರ್ತನೆಗಳು 143 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 143 ದಾವೀದನ ಕೀರ್ತನೆ. 1 ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ವಿಜ್ಞಾಪನೆಗಳಿಗೆ ಕಿವಿಗೊಡಿರಿ; ನಿಮ್ಮ ನಂಬಿಗಸ್ತಿಕೆಯಲ್ಲಿಯೂ, ನಿಮ್ಮ ನೀತಿಯಲ್ಲಿಯೂ ನನಗೆ ಉತ್ತರಕೊಡಿರಿ. 2 ನಿಮ್ಮ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡಿರಿ, ಏಕೆಂದರೆ ಜೀವಿಸುವರಲ್ಲಿ ಒಬ್ಬರೂ ನಿಮ್ಮ ಮುಂದೆ ನೀತಿವಂತರಲ್ಲ. 3 ಏಕೆಂದರೆ ಶತ್ರುವು ನನ್ನನ್ನು ಬೆನ್ನಟ್ಟಿ, ನಾನು ನೆಲಕಚ್ಚುವಂತೆ ಮಾಡಿದ್ದಾನೆ. ಬಹುಕಾಲದ ಹಿಂದೆ ಸತ್ತವರ ಹಾಗೆ ನನ್ನನ್ನು ಕತ್ತಲೆಯಲ್ಲಿ ವಾಸಿಸುವಂತೆ ಮಾಡಿದ್ದಾನೆ. 4 ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ. 5 ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿಮ್ಮ ಕೈಕೆಲಸವನ್ನು ಆಲೋಚಿಸುತ್ತೇನೆ. 6 ನನ್ನ ಕೈಗಳನ್ನು ನಿಮ್ಮ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿಮಗಾಗಿ ದಾಹಗೊಂಡಿದೆ. 7 ಯೆಹೋವ ದೇವರೇ, ನನಗೆ ಬೇಗನೆ ಉತ್ತರಕೊಡಿರಿ; ನನ್ನ ಪ್ರಾಣವು ಕುಂದಿಹೋಗಿದೆ; ನಿಮ್ಮ ಮುಖವನ್ನು ನನಗೆ ಮರೆಮಾಡಬೇಡ; ಇಲ್ಲವಾದರೆ ಸಮಾಧಿಯಲ್ಲಿ ಇಳಿಯುವವರಿಗೆ ಸಮಾನನಾಗಿಬಿಡುತ್ತೇನೆ. 8 ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ವಾಕ್ಯವನ್ನು ತರಲಿ; ಏಕೆಂದರೆ ನಿಮ್ಮಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸಿರಿ, ಏಕೆಂದರೆ ನನ್ನ ಪ್ರಾಣವನ್ನು ನಿಮಗೇ ಒಪ್ಪಿಸಿದ್ದೇನೆ. 9 ಯೆಹೋವ ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ; ನಾನು ನಿಮ್ಮಲ್ಲಿ ಅಡಗಿಕೊಳ್ಳುವಂತೆ ನಿಮ್ಮ ಬಳಿಗೆ ಬಂದಿದ್ದೇನೆ. 10 ನಿಮ್ಮ ಚಿತ್ತದಂತೆ ಮಾಡುವುದಕ್ಕೆ ನನಗೆ ಬೋಧಿಸಿರಿ, ಏಕೆಂದರೆ ನೀವು ನನ್ನ ದೇವರು; ನಿಮ್ಮ ಒಳ್ಳೆಯ ಆತ್ಮವು ನನ್ನನ್ನು ಸಮಹಾದಿಯಲ್ಲಿ ನಡೆಸಲಿ. 11 ಯೆಹೋವ ದೇವರೇ, ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ಜೀವಿಸಮಾಡಿರಿ, ನಿಮ್ಮ ನೀತಿಗನುಸಾರ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಬಿಡಿಸಿರಿ. 12 ನಿಮ್ಮ ಒಂಡಬಡಿಕೆಯ ಪ್ರೀತಿಯಿಂದ ನನ್ನ ಶತ್ರುಗಳನ್ನು ಸುಮ್ಮನಿರಿಸುವೆನು, ನನ್ನ ವೈರಿಗಳೆಲ್ಲರೂ ನಾಶವಾಗಲಿ, ನಾನು ನಿಮ್ಮ ಸೇವಕನಾಗಿದ್ದೇನೆ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.