ಕೀರ್ತನೆಗಳು 142 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 142 ದಾವೀದನ ಮಾಸ್ಕಿಲ ರಾಗದ ಪದ್ಯ. ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ. 1 ನನ್ನ ಸ್ವರವೆತ್ತಿ ಯೆಹೋವ ದೇವರಿಗೆ ಮೊರೆಯಿಟ್ಟಿದ್ದೇನೆ; ಸ್ವರವೆತ್ತಿ ನನ್ನ ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದೇನೆ. 2 ದೇವರ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ; ನನ್ನ ಇಕ್ಕಟ್ಟನ್ನು ದೇವರ ಮುಂದೆ ತಿಳಿಸಿದ್ದೇನೆ. 3 ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ, ದೇವರೇ ನೀವು ನನ್ನ ದಾರಿಯನ್ನು ಕಾಯುತ್ತೀರಿ; ನಾನು ನಡೆಯುವ ದಾರಿಯಲ್ಲಿ ವೈರಿಗಳು ಗುಪ್ತವಾಗಿ ನನಗೆ ಉರುಲನ್ನು ಒಡ್ಡಿದ್ದಾರೆ. 4 ನೋಡಿರಿ ನನ್ನ ಬಲಗಡೆಯಲ್ಲಿ, ನನ್ನ ಪರವಾಗಿ ಯಾರೂ ಇಲ್ಲ; ಆಶ್ರಯವು ನನಗೆ ಇಲ್ಲ; ನನಗಾಗಿ ಚಿಂತಿಸುವವರು ಯಾರೂ ಇಲ್ಲ. 5 ಯೆಹೋವ ದೇವರೇ, ನಿಮಗೆ ಹೀಗೆಂದು ಮೊರೆಯಿಡುತ್ತೇನೆ: “ನೀವು ನನ್ನ ಆಶ್ರಯವೂ, ಜೀವಿತರ ದೇಶದಲ್ಲಿ ನನ್ನ ಪಾಲೂ ಆಗಿದ್ದೀರಿ.” 6 ನನ್ನ ಕೂಗನ್ನು ಆಲೈಸಿರಿ, ಏಕೆಂದರೆ ನಾನು ಬಹಳ ಕುಂದಿಹೋಗಿದ್ದೇನೆ; ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸಿರಿ, ಏಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ. 7 ನಿಮ್ಮ ಹೆಸರನ್ನು ಕೊಂಡಾಡುವ ಹಾಗೆ ನನ್ನ ಸೆರೆಯಿಂದ ನನ್ನನ್ನು ಬಿಡಿಸಿರಿ; ಆಗ ನೀವು ನನಗೆ ಮಾಡಿದ ಉಪಕಾರವನ್ನು ಕಂಡು ನೀತಿವಂತರು ನನ್ನ ಹತ್ತಿರ ಸೇರಿಬರುವರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.