ಕೀರ್ತನೆಗಳು 139 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 139 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. 1 ಯೆಹೋವ ದೇವರೇ, ನೀವು ನನ್ನನ್ನು ಪರಿಶೋಧಿಸಿದ್ದೀರಿ; ನನ್ನನ್ನು ತಿಳಿದುಕೊಂಡಿದ್ದೀರಿ. 2 ನಾನು ಕುಳಿತಿರುವುದನ್ನೂ, ಏಳುವುದನ್ನೂ ನೀವು ತಿಳಿದುಕೊಂಡಿದ್ದೀರಿ; ನನ್ನ ಆಲೋಚನೆಗಳನ್ನು ದೂರದಿಂದ ಗ್ರಹಿಸಿಕೊಂಡಿದ್ದೀರಿ. 3 ನಾನು ನಡೆಯುವುದನ್ನೂ, ನಾನು ಮಲಗುವುದನ್ನೂ ನೀವು ವಿವೇಚಿಸಿದ್ದೀರಿ; ನನ್ನ ಮಾರ್ಗಗಳೆಲ್ಲಾ ನಿಮಗೆ ಸುಪರಿಚಿತವಾಗಿವೆ. 4 ನನ್ನ ನಾಲಿಗೆಯಲ್ಲಿ ಒಂದು ಮಾತು ಆರಂಭಿಸುವುದಕ್ಕಿಂತ ಮುಂಚೆಯೇ ಯೆಹೋವ ದೇವರೇ, ಅದು ನಿಮಗೆ ಪೂರ್ಣವಾಗಿ ತಿಳಿದಿರುತ್ತದೆ. 5 ನೀವು ನನ್ನ ಹಿಂದೆಯೂ, ಮುಂದೆಯೂ ಆವರಿಸಿಕೊಂಡು, ನಿಮ್ಮ ಕೈಯನ್ನು ನನ್ನ ಮೇಲೆ ಇಟ್ಟಿದ್ದೀರಿ. 6 ಇಂಥ ಅರಿವು ನನಗೆ ಅತ್ಯಂತ ವಿಸ್ಮಯವಾಗಿದೆ, ಅದು ನನಗೆ ನಿಲುಕಲಾರದಷ್ಟು ಉನ್ನತವಾಗಿದೆ. 7 ನಾನು ನಿಮ್ಮ ಆತ್ಮದಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗಲಿ? ನಿಮ್ಮ ಸನ್ನಿಧಿಯಿಂದ ತಪ್ಪಿಸಿಕೊಂಡು ನಾನು ಎಲ್ಲಿಗೆ ಹೊರಟು ಹೋಗಲಿ? 8 ನಾನು ಆಕಾಶಕ್ಕೆ ಏರಿ ಹೋದರೆ, ನೀವು ಅಲ್ಲಿ ಇದ್ದೀರಿ; ಪಾತಾಳಕ್ಕೆ ಹೋಗಿ ನಿದ್ರಿಸಿದರೂ ನೀವು ಅಲ್ಲಿಯೂ ಇದ್ದೀರಿ. 9 ಉದಯದ ರೆಕ್ಕೆಗಳನ್ನು ತೆಗೆದುಕೊಂಡು, ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಿದರೆ, 10 ಅಲ್ಲಿಯೂ ನಿಮ್ಮ ಕೈ ನನ್ನನ್ನು ನಡೆಸುವುದು, ನಿಮ್ಮ ಬಲಗೈ ನನ್ನನ್ನು ಹಿಡಿದಿರುವುದು. 11 “ಕತ್ತಲೆಯು ನನ್ನನ್ನು ಕವಿದುಕೊಳ್ಳಲಿ ಮತ್ತು ಬೆಳಕು ನನ್ನ ಸುತ್ತಲೂ ಇರುಳಾಗಲಿ,” ಎಂದು ನಾನು ಹೇಳಿದರೂ, 12 ಕತ್ತಲು ನಿಮಗೆ ಕತ್ತಲಾಗಿರುವುದಿಲ್ಲ; ರಾತ್ರಿಯು ಹಗಲಿನ ಹಾಗೆ ಪ್ರಕಾಶಿಸುವುದು, ಏಕೆಂದರೆ ಕತ್ತಲು ನಿಮಗೆ ಬೆಳಕಿನಂತಿರುವುದು. 13 ನನ್ನ ಅಂತರಾತ್ಮವನ್ನು ಉಂಟು ಮಾಡಿದವರು ನೀವೇ; ನನ್ನ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವರು ನೀವೇ. 14 ನೀವು ನನ್ನನ್ನು ವಿಚಿತ್ರವಾಗಿಯೂ ವಿಸ್ಮಯವಾಗಿಯೂ ಸೃಷ್ಟಿಸಿದ್ದರಿಂದ ನಾನು ನಿಮ್ಮನ್ನು ಸ್ತುತಿಸುತ್ತೇನೆ; ನಿಮ್ಮ ಕೃತ್ಯಗಳು ಆಶ್ಚರ್ಯಕರವಾಗಿವೆ ಎಂದು, ನಾನು ಪೂರ್ಣವಾಗಿ ತಿಳಿದಿದ್ದೇನೆ. 15 ನೀವು ನನ್ನನ್ನು ಮರೆಯಲ್ಲಿ ರೂಪಿಸಿದಾಗಲೂ, ಭೂಗರ್ಭದಲ್ಲಿ ನನ್ನನ್ನು ರಚಿಸಿದಾಗಲೂ ನನ್ನ ಅಸ್ಥಿಪಂಜರವು ನಿಮಗೆ ಮರೆಯಾಗಿರಲಿಲ್ಲ. 16 ನಾನು ಇನ್ನೂ ಭ್ರೂಣವಾಗಿರುವಾಗಲೇ ನಿಮ್ಮ ಕಣ್ಣುಗಳು ನನ್ನನ್ನು ನೋಡಿದವು; ನೀವು ನನಗೆ ಅನುಮತಿಸಿರುವ ಪ್ರಥಮ ದಿನದಿಂದ ಕೊನೆಯದಿನದವರೆಗೆ ನನ್ನ ಎಲ್ಲಾ ದಿನಗಳೂ ನಿಮ್ಮ ಪುಸ್ತಕದಲ್ಲಿ ಬರೆಯಲಾಗಿವೆ. 17 ದೇವರೇ, ನಿಮ್ಮ ಆಲೋಚನೆಗಳು ನನಗೆ ಎಷ್ಟೋ ಅಮೂಲ್ಯವಾಗಿವೆ! ಅವುಗಳ ಎಣಿಕೆ ನನಗೆ ಎಷ್ಟೋ ಅಸಂಖ್ಯವಾಗಿವೆ! 18 ನಾನು ಅವುಗಳನ್ನು ಎಣಿಸಿದರೆ, ಅವು ಮರಳಿಗಿಂತಲೂ ಹೆಚ್ಚಾಗಿವೆ! ನಾನು ಎಚ್ಚರವಾಗುವಾಗ, ನಿಶ್ಚಯವಾಗಿಯೂ ನಿಮ್ಮ ಸಂಗಡ ಇರುವೆನು. 19 ದೇವರೇ, ಒಂದು ವೇಳೆ ನೀವು ದುಷ್ಟರೆಲ್ಲರನ್ನು ದಂಡಿಸಿಬಿಟ್ಟರೆ ಎಷ್ಟೋ ಒಳ್ಳೆಯದಾಗಿರುವುದು! ಕೊಲೆಪಾತಕರೇ, ನೀವು ನನ್ನಿಂದ ತೊಲಗಿ ಹೋದರೆ ಎಷ್ಟೋ ಹಿತ! 20 ಅವರು ನಿಮಗೆ ವಿರೋಧವಾಗಿ ಮಾತಾಡುತ್ತಾರೆ; ನಿಮ್ಮ ವೈರಿಗಳು ನಿಮ್ಮ ಹೆಸರನ್ನು ದುರುಪಯೋಗ ಮಾಡುತ್ತಾರೆ. 21 ಯೆಹೋವ ದೇವರೇ, ನಿಮ್ಮನ್ನು ದ್ವೇಷಿಸುವವರನ್ನು ನಾನು ದ್ವೇಷಿಸದಿರುವೆನೋ? ನಿಮಗೆ ವಿರೋಧವಾಗಿ ತಿರುಗಿ ಬಿದ್ದವರನ್ನು ನಾನು ಹೀನೈಸದಿರುವೆನೋ? 22 ನಾನು ಪೂರ್ಣ ದ್ವೇಷದಿಂದ ಅವರನ್ನು ಹಗೆಮಾಡುತ್ತೇನೆ; ನಾನು ಅವರನ್ನು ನನ್ನ ಶತ್ರುಗಳಂತೆ ಪರಿಗಣಿಸುತ್ತೇನೆ. 23 ದೇವರೇ, ನನ್ನನ್ನು ಪರಿಶೋಧಿಸಿ, ನನ್ನ ಹೃದಯವನ್ನು ತಿಳಿದುಕೊಳ್ಳಿರಿ; ನನ್ನನ್ನು ಪರೀಕ್ಷಿಸಿ, ನನ್ನ ಚಿಂತಾಲೋಚನೆಗಳನ್ನು ತಿಳಿದುಕೊಳ್ಳಿರಿ. 24 ನನ್ನಲ್ಲಿ ಕೇಡಿನ ಮಾರ್ಗವಿದೆಯೋ ಎಂದು ನೋಡಿರಿ, ನನ್ನನ್ನು ನಿತ್ಯ ಮಾರ್ಗದಲ್ಲಿ ನಡೆಸಿರಿ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.