Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 135 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 135

1 ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಹೆಸರನ್ನು ಸ್ತುತಿಸಿರಿ; ಯೆಹೋವ ದೇವರ ಆಲಯದಲ್ಲಿಯೂ,

2 ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವ ಯೆಹೋವ ದೇವರ ಸೇವಕರೇ, ಸ್ತುತಿಸಿರಿ.

3 ಯೆಹೋವ ದೇವರನ್ನು ಸ್ತುತಿಸಿರಿ, ಯೆಹೋವ ದೇವರು ಒಳ್ಳೆಯವರು; ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ, ಏಕೆಂದರೆ ಅದು ರಮ್ಯವಾದದ್ದು.

4 ಯೆಹೋವ ದೇವರು ಯಾಕೋಬನನ್ನು ತಮಗೋಸ್ಕರ ಆಯ್ದುಕೊಂಡರು, ಇಸ್ರಾಯೇಲನ್ನು ತಮ್ಮ ಶ್ರೇಷ್ಠ ಸಂಪತ್ತಾಗಿಯೂ ಆಯ್ದುಕೊಂಡಿದ್ದಾರೆ.

5 ಯೆಹೋವ ದೇವರು ದೊಡ್ಡವರು; ನಮ್ಮ ಯೆಹೋವ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವರೆಂದು ನಾನು ತಿಳಿದಿದ್ದೇನೆ.

6 ಯೆಹೋವ ದೇವರು ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಸಮುದ್ರದಲ್ಲಿಯೂ, ಎಲ್ಲಾ ಅಗಾಧಗಳಲ್ಲಿಯೂ ತಾವು ಅಪೇಕ್ಷಿಸುವುದನ್ನೆಲ್ಲಾ ಮಾಡುತ್ತಾರೆ.

7 ಭೂಮಿಯ ಎಲ್ಲಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಯನ್ನೂ ಮಿಂಚನ್ನೂ ಕಳುಹಿಸುತ್ತಾರೆ. ಗಾಳಿಯನ್ನು ತಮ್ಮ ಉಗ್ರಾಣಗಳಿಂದ ಬೀಸುವಂತೆ ಮಾಡುತ್ತಾರೆ.

8 ದೇವರು ಈಜಿಪ್ಟ್ ಜನರನ್ನು ಮೊದಲುಗೊಂಡು ಪಶುಗಳವರೆಗೂ ಚೊಚ್ಚಲುಗಳನ್ನೆಲ್ಲಾ ದಂಡಿಸಿದರು.

9 ಈಜಿಪ್ಟೇ, ನಿಮ್ಮ ಮಧ್ಯದಲ್ಲಿ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ದೇವರು ಫರೋಹನಿಗೂ, ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.

10 ದೇವರು ದೊಡ್ಡ ಜನಾಂಗಗಳನ್ನೂ, ಬಲವಾದ ಅರಸರನ್ನೂ ದಂಡಿಸಿದರು.

11 ಅಮೋರಿಯರ ಅರಸನಾದ ಸೀಹೋನನನ್ನು, ಬಾಷಾನಿನ ಅರಸನಾದ ಓಗನನ್ನೂ, ಕಾನಾನಿನ ಎಲ್ಲಾ ಅರಸರನ್ನೂ ದಂಡಿಸಿದರು.

12 ದೇವರು ದೇಶವನ್ನು ಸೊತ್ತಾಗಿ ತಮ್ಮ ಪ್ರಜೆಯಾದ ಇಸ್ರಾಯೇಲಿಗೆ ಕೊಟ್ಟರು.

13 ಯೆಹೋವ ದೇವರೇ, ನಿಮ್ಮ ನಾಮವೂ, ನಿಮ್ಮ ಪ್ರಭಾವವೂ ತಲತಲಾಂತರಕ್ಕೂ ಸ್ಮರಣೆಯಾಗಿರುವುದು.

14 ಯೆಹೋವ ದೇವರು ತಮ್ಮ ಜನರಿಗೆ ನ್ಯಾಯವನ್ನು ಸ್ಥಾಪಿಸುವರು, ತಮ್ಮ ಸೇವಕರ ಮೇಲೆ ಅನುಕಂಪವನ್ನೂ ತೋರಿಸುವರು.

15 ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.

16 ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.

17 ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಅವುಗಳ ಬಾಯಲ್ಲಿ ಶ್ವಾಸ ಇಲ್ಲ.

18 ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.

19 ಇಸ್ರಾಯೇಲ್ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ಆರೋನನ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.

20 ಲೇವಿಯ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ದೇವರಲ್ಲಿ ಭಯಭಕ್ತಿಯುಳ್ಳವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.

21 ಯೆರೂಸಲೇಮಿನಲ್ಲಿ ವಾಸಿಸುವವ ಯೆಹೋವ ದೇವರನ್ನು ಕೊಂಡಾಡಿ ಸ್ತುತಿಸಿರಿ; ಅವರ ಕೀರ್ತಿಯು ಚೀಯೋನಿನಿಂದ ಹೊರಗೂ ಹಬ್ಬಲಿ. ಯೆಹೋವ ದೇವರಿಗೆ ಸ್ತೋತ್ರ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು