Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 132 - ಕನ್ನಡ ಸಮಕಾಲಿಕ ಅನುವಾದ


ಕೀರ್ತನೆ 132
ಯಾತ್ರಾ ಗೀತೆ.

1 ಯೆಹೋವ ದೇವರೇ, ದಾವೀದನನ್ನೂ ಅವನ ಎಲ್ಲಾ ಶ್ರಮೆಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.

2 ದಾವೀದನು ಯೆಹೋವ ದೇವರಿಗೆ ಆಣೆ ಇಟ್ಟು, ಪರಾಕ್ರಮಿಯಾದ ಯಾಕೋಬನ ದೇವರಿಗೆ ಹೀಗೆಂದು ಪ್ರಮಾಣ ಮಾಡಿದನು:

3 “ಯೆಹೋವ ದೇವರಿಗೆ ಒಂದು ಸ್ಥಳವನ್ನೂ, ಯಾಕೋಬನ ದೇವರಿಗೆ ನಿವಾಸವನ್ನೂ ಕಟ್ಟುವವರೆಗೆ ನಿಶ್ಚಯವಾಗಿ,

4 ನಾನು ನನ್ನ ಮನೆ ಸೇರೆನು; ನನ್ನ ಮಂಚವನ್ನು ಏರೆನು.

5 ನನ್ನ ಕಣ್ಣುಗಳಿಗೆ ನಿದ್ದೆಯನ್ನು ಕೊಡೆನು, ನನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡೆನು.”

6 ನಾವು ಎಫ್ರಾತದಲ್ಲಿ ಇದನ್ನು ಕೇಳಿದೆವು; ಯಹಾರ್ ಅಡವಿಯ ಬಯಲುಗಳಲ್ಲಿ ಇದನ್ನು ಕಂಡು ಹೀಗೆಂದು ಕೇಳಿಸಿಕೊಂಡೆವು:

7 “ಬನ್ನಿರಿ ನಾವು ದೇವರ ಮಂದಿರಕ್ಕೆ ಹೋಗಿ, ಅವರ ಪಾದಪೀಠದಲ್ಲಿ ಆರಾಧಿಸೋಣ.

8 ‘ಯೆಹೋವ ದೇವರೇ, ಎದ್ದು ನಿಮ್ಮ ವಿಶ್ರಾಂತಿಯ ಸ್ಥಳಕ್ಕೆ ಬನ್ನಿರಿ; ನೀವೂ, ನಿಮ್ಮ ಶಕ್ತಿಯುತ ಮಂಜೂಷವೂ ಬರಲಿ.

9 ನಿಮ್ಮ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಳ್ಳಲಿ; ನಿಮ್ಮ ಭಕ್ತರು ಉತ್ಸಾಹಧ್ವನಿ ಮಾಡಲಿ.’ ”

10 ನಿಮ್ಮ ಸೇವಕನಾದ ದಾವೀದನ ನಿಮಿತ್ತ, ನಿಮ್ಮ ಅಭಿಷಿಕ್ತನನ್ನು ತಿರಸ್ಕರಿಸಬೇಡಿರಿ.

11 ಯೆಹೋವ ದೇವರು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾರೆ; ತಾವು ಹೀಗೆಂದು ಆಣೆಯಿಟ್ಟುಕೊಟ್ಟ ಮಾತನ್ನು ದೇವರು ಬದಲಿಸುವುದಿಲ್ಲ, “ನಿನ್ನ ಸಂತತಿಯವನನ್ನೇ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು.

12 ನಿಮ್ಮ ಮಕ್ಕಳು ನನ್ನ ಶಾಸನಗಳನ್ನೂ ನನ್ನ ಒಡಂಬಡಿಕೆಯನ್ನು ಸನ್ಮಾನಿಸಿ, ಕೈಗೊಂಡರೆ, ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನದಲ್ಲಿ ಕೂರುವರು.”

13 ಏಕೆಂದರೆ, ಯೆಹೋವ ದೇವರು ಚೀಯೋನನ್ನು ಆಯ್ದುಕೊಂಡು ಅದನ್ನು ತಮ್ಮ ವಾಸಕ್ಕಾಗಿ ಅಪೇಕ್ಷಿಸಿ ಹೀಗೆಂದಿದ್ದಾರೆ:

14 “ಇದೇ ಎಂದೆಂದಿಗೂ ನನ್ನ ವಿಶ್ರಾಂತಿಯ ಸ್ಥಳವಾಗಿರುವುದು; ಇಲ್ಲೇ ವಾಸಿಸುವೆನು; ಇದನ್ನು ನಾನು ಅಪೇಕ್ಷಿಸಿದ್ದೇನೆ; ಇಲ್ಲಿಯೇ ಸಿಂಹಾಸನಾರೂಢನಾಗಿರುವೆನು.

15 ಧಾರಾಳವಾಗಿ ದವಸಧಾನ್ಯಗಳಿರಲೆಂದು ನಾನು ಚೀಯೋನನ್ನು ಆಶೀರ್ವದಿಸುವೆನು; ಇಲ್ಲಿ ವಾಸಿಸುವ ಬಡವರು ಉಂಡು ಸಂತೃಪ್ತಿಯಿಂದಿರುವರು.

16 ಇಲ್ಲಿನ ಯಾಜಕರಿಗೆ ರಕ್ಷಣೆಯನ್ನು ಹೊದಿಸುವೆನು; ಚೀಯೋನಿನ ನಂಬಿಗಸ್ತ ಸೇವಕರು ಉತ್ಸಾಹಧ್ವನಿಯಿಂದ ಹಾಡುವರು.

17 “ಇಲ್ಲಿ ದಾವೀದನಿಗೆ ಬಲದಾಯಕ ಅರಸನನ್ನು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.

18 ಇಲ್ಲಿ ಆತನ ಶತ್ರುಗಳಿಗೆ ನಾಚಿಕೆಯ ವಸ್ತ್ರವನ್ನು ಹೊದಿಸುವೆನು; ಆದರೆ ಆತನ ತೆರೆಯ ಮೇಲೆ ಕಿರೀಟವು ಶೋಭಿಸುವುದು.”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು