ಕೀರ್ತನೆಗಳು 116 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 116 1 ನಾನು ಯೆಹೋವ ದೇವರನ್ನು ಪ್ರೀತಿಸುತ್ತೇನೆ; ಏಕೆಂದರೆ ಅವರು ನನ್ನನ್ನು ಕರುಣಿಸಬೇಕೆಂಬ ನನ್ನ ವಿನಂತಿಯನ್ನೂ ಕೇಳಿದ್ದಾರೆ. 2 ಅವರು ನನ್ನ ಸ್ವರಕ್ಕೆ ಕಿವಿಗೊಟ್ಟಿದ್ದರಿಂದ ನನ್ನ ಜೀವಮಾನಕಾಲವೆಲ್ಲಾ ಅವರನ್ನು ಬೇಡುವೆನು. 3 ಮರಣದ ಪಾಶಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆಗಳು ನನ್ನ ಮೇಲೆ ಬಂದವು; ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು. 4 ಆಗ ನಾನು, “ಓ ಯೆಹೋವ ದೇವರೇ, ನನ್ನನ್ನು ರಕ್ಷಿಸಿರಿ,” ಎಂದು ಯೆಹೋವ ದೇವರ ಹೆಸರಿನಲ್ಲಿ ಬೇಡಿದೆನು. 5 ಯೆಹೋವ ದೇವರು ಕೃಪೆಯೂ ನೀತಿಯೂ ಉಳ್ಳವರು ನಮ್ಮ ದೇವರು ಅನುಕಂಪ ಭರಿತರು. 6 ಯೆಹೋವ ದೇವರು ಸರಳ ಹೃದಯದವರನ್ನು ಕಾಪಾಡುತ್ತಾರೆ; ನಾನು ಕೊರತೆಯಲ್ಲಿದ್ದಾಗ, ಅವರು ನನ್ನನ್ನು ರಕ್ಷಿಸಿದರು. 7 ನನ್ನ ಮನವೇ, ನೀನು ವಿಶ್ರಾಂತಿಯಿಂದಿರು; ಏಕೆಂದರೆ ಯೆಹೋವ ದೇವರು ನಿನಗೆ ಉಪಕಾರಿಯಾಗಿದ್ದಾರೆ. 8 ಏಕೆಂದರೆ ಯೆಹೋವ ದೇವರೇ, ನೀವು ನನ್ನನ್ನು ಮರಣಕ್ಕೂ, ನನ್ನ ಕಣ್ಣುಗಳನ್ನು ಕಣ್ಣೀರಿಗೂ, ನನ್ನ ಪಾದಗಳನ್ನು ಬೀಳದಂತೆಯೂ ತಪ್ಪಿಸಿದ್ದೀರಿ. 9 ಆದ್ದರಿಂದ ಜೀವಿತರ ಲೋಕದಲ್ಲಿ ಯೆಹೋವ ದೇವರ ಮುಂದೆ ನಡೆದುಕೊಳ್ಳುವೆನು. 10 “ನಾನು ಬಹಳ ಕುಗ್ಗಿ ಹೋಗಿದ್ದೇನೆ,” ಎಂದು ನಾನು ದೇವರಲ್ಲಿ ಭರವಸೆ ಇಟ್ಟಾಗ ಹೇಳಿದೆ. 11 “ಮನುಷ್ಯರೆಲ್ಲರು ಸುಳ್ಳುಗಾರರು,” ಎಂದು ನಾನು ನಿರಾಶೆಯಿಂದ ಹೇಳಿದ್ದೆನು. 12 ದೇವರು ನನಗೆ ಮಾಡಿದ ಎಲ್ಲಾ ಉಪಕಾರಗಳಿಗೆ ಬದಲಾಗಿ ನಾನು ಯೆಹೋವ ದೇವರಿಗೆ ಏನು ಮಾಡಲಿ? 13 ನಾನು ರಕ್ಷಣೆಯ ಪಾತ್ರೆಯನ್ನು ತೆಗೆದುಕೊಂಡು, ಯೆಹೋವ ದೇವರ ಹೆಸರನ್ನು ಕರೆಯುವೆನು. 14 ನಾನು ಹೊತ್ತ ಹರಕೆಗಳನ್ನು ದೇವಜನರೆಲ್ಲರ ಮುಂದೆಯೇ ದೇವರಿಗೆ ಸಲ್ಲಿಸುವೆನು. 15 ದೇವರ ಭಕ್ತರ ಮರಣವು ಯೆಹೋವ ದೇವರ ದೃಷ್ಟಿಯಲ್ಲಿ ಅಮೂಲ್ಯವಾಗಿದೆ. 16 ಯೆಹೋವ ದೇವರೇ, ನಿಜವಾಗಿ ನಾನು ನಿಮ್ಮ ಸೇವಕನು; ಹೌದು, ನನ್ನ ತಾಯಿ ನಿಮಗೆ ಸೇವೆಮಾಡಿದಂತೆ ನಾನು ಸಹ ನಿಮ್ಮ ಸೇವಕನು; ನೀವು ನನ್ನ ಬಂಧನಗಳಿಂದ ನನ್ನನ್ನು ಬಿಡಿಸಿದ್ದೀರಿ. 17 ನಾನು ನಿಮಗೆ ಕೃತಜ್ಞತೆಯ ಬಲಿಯನ್ನು ಅರ್ಪಿಸುವೆನು; ಯೆಹೋವ ದೇವರ ಹೆಸರನ್ನು ಕರೆಯುವೆನು. 18 ಯೆರೂಸಲೇಮೇ, ನನ್ನ ಹರಕೆಗಳನ್ನು ದೇವಜನರೆಲ್ಲರ ಮುಂದೆಯೇ ಸಲ್ಲಿಸುವೆನು, 19 ಯೆಹೋವ ದೇವರ ಆಲಯದ ಅಂಗಳಗಳಲ್ಲಿ ಯೆರೂಸಲೇಮ ಮಧ್ಯದಲ್ಲಿಯೇ ಯೆಹೋವ ದೇವರಿಗೆ ಸಲ್ಲಿಸುವೆನು. ಯೆಹೋವ ದೇವರನ್ನು ಸ್ತುತಿಸಿರಿ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.