ಕೀರ್ತನೆಗಳು 10 - ಕನ್ನಡ ಸಮಕಾಲಿಕ ಅನುವಾದಕೀರ್ತನೆ 10 1 ಯೆಹೋವ ದೇವರೇ, ನೀವು ದೂರದಲ್ಲಿ ನಿಂತುಕೊಳ್ಳುವುದು ಏಕೆ? ಇಕ್ಕಟ್ಟಿನ ಕಾಲಗಳಲ್ಲಿ ನೀವು ಮರೆಯಾಗಿರುವುದೂ ಏಕೆ? 2 ದುಷ್ಟನು ಗರ್ವದಿಂದ ದೀನನನ್ನು ಬೇಟೆಯಾಡುತ್ತಾನೆ, ಅವನು ಕಲ್ಪಿಸಿದ ಕುಯುಕ್ತಿಗಳಲ್ಲಿ ಅವನೇ ಸಿಕ್ಕಿಬೀಳುತ್ತಾನೆ. 3 ದುಷ್ಟನು ತನ್ನ ಹೃದಯಭಿಲಾಷೆಯಲ್ಲಿ ಕೊಚ್ಚಿಕೊಳ್ಳುತ್ತಾನೆ; ಅವನು ದುರಾಶೆಯುಳ್ಳವರನ್ನು ಆಶೀರ್ವದಿಸುವವನೂ ಯೆಹೋವ ದೇವರನ್ನು ಶಪಿಸುವವನೂ ಆಗಿದ್ದಾನೆ. 4 ದುಷ್ಟನು ತನ್ನ ಗರ್ವದಲ್ಲಿ ದೇವರನ್ನು ಹುಡುಕುವುದಿಲ್ಲ; ಅವನ ಎಲ್ಲ ಯೋಚನೆಗಳಲ್ಲಿಯೂ ದೇವರಿಗೆ ಸ್ಥಳವೇ ಇಲ್ಲ. 5 ಅವನ ಮಾರ್ಗಗಳು ಯಾವಾಗಲೂ ಸಮೃದ್ಧಿಯಾಗಿರುತ್ತವೆ; ಆದರೆ ನಿಮ್ಮ ನಿಯಮಗಳು ಅವನ ದೃಷ್ಟಿಗೆ ಬಹು ದೂರವಾಗಿವೆ; ಅವನು ತನ್ನ ಎಲ್ಲಾ ವೈರಿಗಳನ್ನು ಹೀಯಾಳಿಸುತ್ತಾನೆ. 6 ಅವನು ತನ್ನ ಹೃದಯದಲ್ಲಿ ಹೀಗೆ ಹೇಳುವನು, “ಯಾವುದೂ ಎಂದೂ ನನ್ನನ್ನು ಕದಲಿಸುವುದಿಲ್ಲ.” ಅವನು ಹೀಗೆ ಶಪಥ ಮಾಡುವನು, “ಯಾರೂ ಎಂದಿಗೂ ನನಗೆ ಕೇಡುಮಾಡಲಾರರು.” 7 ಅವನ ಬಾಯಿ ಸುಳ್ಳಿನಿಂದಲೂ ಬೆದರಿಕೆಯಿಂದಲೂ ತುಂಬಿದೆ. ಕೇಡೂ ನಾಶನವೂ ಅವನ ನಾಲಿಗೆಯ ಕೆಳಗೆ ಇರುತ್ತವೆ. 8 ಅವನು ಗ್ರಾಮಗಳಲ್ಲಿ ಹೊಂಚಿಕೊಂಡು ಮರೆಯಾದ ಸ್ಥಳಗಳಲ್ಲಿ, ನಿರಪರಾಧಿಯನ್ನು ಕೊಲ್ಲುತ್ತಾನೆ. ಅವನ ಕಣ್ಣುಗಳು ನಿರ್ಗತಿಕರನ್ನು ಹೊಂಚಿ ನೋಡುತ್ತವೆ; 9 ಸಿಂಹದ ಹಾಗೆ, ಮರೆಯಲ್ಲಿ ಹೊಂಚುಹಾಕುತ್ತಾನೆ; ಅಸಹಾಯಕರನ್ನು ಹಿಡಿಯಲು ಕಾಯುತ್ತಾನೆ ಕುಗ್ಗಿದವನನ್ನು ಹಿಡಿದೆಳೆದು ತನ್ನ ಬಲೆಯಲ್ಲಿ ಹಾಕುತ್ತಾನೆ. 10 ಅವನ ಕೈಯಲ್ಲಿ ಸಿಕ್ಕುವವರು ಜಜ್ಜಿಹೋಗುತ್ತಾರೆ, ಅವನ ಬಲದ ಎದುರು ಸೋತುಹೋಗುತ್ತಾರೆ. 11 “ದೇವರು ಮರೆತುಬಿಟ್ಟಿದ್ದಾರೆ; ತಮ್ಮ ಮುಖ ಮರೆ ಮಾಡಿಕೊಂಡಿದ್ದಾರೆ; ಇನ್ನೆಂದೂ ಕಾಣಲಾರರು,” ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ. 12 ಯೆಹೋವ ದೇವರೇ, ಎದ್ದೇಳಿರಿ! ದೇವರೇ, ನಿಮ್ಮ ಕೈ ಎತ್ತಿರಿ. ನಿಸ್ಸಹಾಯಕರನ್ನು ಮರೆಯಬೇಡಿರಿ. 13 ದುಷ್ಟರು ದೇವರನ್ನು ಅಲಕ್ಷ್ಯ ಮಾಡುವುದು ಏಕೆ? “ದೇವರು ನನ್ನನ್ನು ಲೆಕ್ಕ ಕೇಳುವುದಿಲ್ಲ,” ಎಂದು ಅವನು ತನಗೆ ತಾನೇ ಹೇಳಿಕೊಳ್ಳುವುದು ಏಕೆ? 14 ದೇವರೇ, ನೀವಾದರೋ ಬಾಧೆಪಡುವವರ ಕಷ್ಟಗಳನ್ನು ನೋಡಿದ್ದೀರಿ; ಅವರ ಸಂಕಟವನ್ನು ಪರಿಗಣಿಸಿ, ನೀವೇ ನೋಡಿಕೊಳ್ಳಿರಿ. ಗತಿಯಿಲ್ಲದವರು ತಮ್ಮನ್ನು ನಿಮಗೇ ಒಪ್ಪಿಸಿಕೊಡುತ್ತಾರೆ; ನೀವೇ ದಿಕ್ಕಿಲ್ಲದವರಿಗೆ ಸಹಾಯ ಮಾಡುವವರು. 15 ದುಷ್ಟನ ಭುಜಬಲವನ್ನು ಮುರಿದುಬಿಡಿರಿ; ಕೆಟ್ಟದ್ದನ್ನು ಮಾಡುವವರಿಗೆ ಅವರ ಕೆಟ್ಟತನಕ್ಕೆ ಲೆಕ್ಕ ಕೇಳಿರಿ; ಇಲ್ಲದಿದ್ದರೆ ನೀವು ಅವನನ್ನು ಲೆಕ್ಕ ಕೇಳುವುದಿಲ್ಲ ಅಂದುಕೊಳ್ಳುವನು. 16 ಯೆಹೋವ ದೇವರು ಯುಗಯುಗಾಂತರಗಳಿಗೂ ಅರಸರಾಗಿದ್ದಾರೆ; ರಾಷ್ಟ್ರಗಳು ಅವರ ದೇಶದೊಳಗಿಂದ ಹೊರಹಾಕಲಾಯಿತು. 17 ಯೆಹೋವ ದೇವರೇ, ನೀವು ಬಾಧೆಪಡುವವರ ಬಯಕೆಯನ್ನು ಆಲಿಸುತ್ತೀರಿ; ಅವರನ್ನು ಪ್ರೋತ್ಸಾಹಿಸಿ, ಅವರ ಕೂಗನ್ನು ಲಾಲಿಸುತ್ತೀರಿ. 18 ಅನಾಥರಿಗೂ, ಕುಗ್ಗಿದವರಿಗೂ ನ್ಯಾಯವನ್ನು ನಡಿಸಿಕೊಡಿರಿ. ಹೀಗಾದರೆ ಕೇವಲ ಮಣ್ಣಿನ ಮಾನವರಿಂದ ಅವರಿಗೆ ಇನ್ನೆಂದಿಗೂ ಭಯ ಉಂಟಾಗುವುದಿಲ್ಲ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.