ಇಬ್ರಿಯರಿಗೆ 4 - ಕನ್ನಡ ಸಮಕಾಲಿಕ ಅನುವಾದದೇವಜನರಿಗೆ ಸಬ್ಬತ್ ಒಂದು ವಿಶ್ರಾಂತಿ ದಿನ 1 ಹೀಗಿರಲಾಗಿ ದೇವರ ವಿಶ್ರಾಂತಿಯಲ್ಲಿ ಸೇರುವೆವು ಎಂಬ ವಾಗ್ದಾನವು ಇನ್ನೂ ಉಳಿದಿರಲು ನಿಮ್ಮಲ್ಲಿ ಯಾರಾದರೂ ಅದನ್ನು ಹೊಂದದೆ ಇರಬಾರದು ಎಂದು ಎಚ್ಚರವಹಿಸೋಣ. 2 ಇಸ್ರಾಯೇಲರಿಗೆ ಸುವಾರ್ತೆಯು ಸಾರೋಣವಾದಂತೆಯೇ ನಮಗೂ ಸಾರಿಹೇಳಲಾಯಿತು. ಆದರೆ ಕೇಳಿದವರು ವಿಧೇಯರಾದವರ ನಂಬಿಕೆಯಲ್ಲಿ ಭಾಗವಹಿಸದೇ ಹೋದದ್ದರಿಂದ, ಸಾರಿದ ವಾಕ್ಯವು ಅವರಿಗೆ ಪ್ರಯೋಜನವಾಗಲಿಲ್ಲ. 3 ಈಗ ದೇವರು ಹೇಳಿದಂತೆಯೇ ವಿಶ್ವಾಸದಲ್ಲಿರುವ ನಾವು ಆ ವಿಶ್ರಾಂತಿಯಲ್ಲಿ ಪ್ರವೇಶಿಸಿದೆವು, “ ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ’ ಎಂದು ನಾನು ಕೋಪದಿಂದ ಪ್ರಮಾಣಮಾಡಿದೆನು,” ಆದರೂ ದೇವರ ಕೆಲಸವು ಜಗತ್ತಿನ ಸೃಷ್ಟಿಯ ಕಾರ್ಯದಿಂದಲೇ ಮುಗಿದಿದೆ. 4 ಪವಿತ್ರ ವೇದದ ಯಾವುದೋ ಒಂದು ಸ್ಥಳದಲ್ಲಿ ಏಳನೆಯ ದಿವಸವನ್ನು ಕುರಿತು, “ದೇವರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು,” ಎಂತಲೂ, 5 ಮೇಲಿನ ವಾಕ್ಯಕ್ಕೆ ಸಂಬಂಧಿಸಿ, “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,” ಎಂದೂ ದೇವರು ಇನ್ನೊಂದು ಕಡೆ ಹೇಳಿದ್ದಾರೆ. 6 ಆದ್ದರಿಂದ ಯಾರಿಗೆ ಮೊದಲು ಸುವಾರ್ತೆಯು ಸಾರಲಾಯಿತೋ ಅವರು ಅವಿಧೇಯತೆಯ ನಿಮಿತ್ತ ಆ ವಿಶ್ರಾಂತಿಯಲ್ಲಿ ಸೇರದೆಹೋದರು. ಆದರೂ ಕೆಲವರು ಆ ವಿಶ್ರಾಂತಿಯಲ್ಲಿ ಪ್ರವೇಶಿಸುವ ಅವಕಾಶ ಇನ್ನೂ ಇರುವುದರಿಂದ ಅವರು ಸೇರುವರು. 7 ದೇವರು “ಈ ಹೊತ್ತೇ” ಎಂದು ಬೇರೊಂದು ದಿವಸವನ್ನು ಗೊತ್ತು ಮಾಡುತ್ತಾರೆ. ಈ ದಿನವನ್ನು ಕುರಿತೇ ಬಹುಕಾಲದ ನಂತರ ದಾವೀದನ ಮೂಲಕ ಮೊದಲೇ ಹೀಗೆ ಹೇಳಿದ್ದಾರೆ: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.” 8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ದೇವರು ಬೇರೊಂದು ದಿವಸವನ್ನು ಕುರಿತು ಹೇಳುತ್ತಿರಲಿಲ್ಲವಲ್ಲ. 9 ಆದ್ದರಿಂದ ದೇವಜನರಿಗೆ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಇದೆ. 10 ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿ ವಿಶ್ರಾಂತಿ ಪಡೆದಂತೆ, ದೇವರ ವಿಶ್ರಾಂತಿಯನ್ನು ಪಡೆದವರು ಸಹ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ವಿಶ್ರಾಂತಿ ಪಡೆಯುತ್ತಾರೆ. 11 ಆದ್ದರಿಂದ ಈ ವಿಶ್ರಾಂತಿಯನ್ನು ಪಡೆಯಲು ನಾವು ಪ್ರಯತ್ನಿಸೋಣ. ನಮ್ಮಲ್ಲಿ ಯಾರೂ ಆ ಜನರ ಅವಿಧೇಯತೆಯನ್ನು ಅನುಸರಿಸಿ, ನಾಶರಾಗದೇ ಇರೋಣ. 12 ಯಾಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಕ್ರಿಯಾತ್ಮಕವಾದದ್ದು, ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು, ಪ್ರಾಣ ಮತ್ತು ಆತ್ಮಗಳ ಕೀಲು ಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ಛೇದಿಸುವಂಥದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸಿ ತೀರ್ಪು ನೀಡುವಂಥದ್ದು ಆಗಿದೆ. 13 ನಾವು ಲೆಕ್ಕ ಒಪ್ಪಿಸಬೇಕಾಗಿರುವ ದೇವರ ದೃಷ್ಟಿಗೆ ಸಮಸ್ತವೂ ಬಹಿರಂಗವಾದದ್ದಾಗಿಯೂ ಬಯಲಾದದ್ದಾಗಿಯೂ ಆಗಿದೆ. ಎಲ್ಲಾ ಸೃಷ್ಟಿಯಲ್ಲಿ ದೇವರ ದೃಷ್ಟಿಗೆ ಮರೆಯಾದದ್ದು ಯಾವುದೂ ಇಲ್ಲ. ಯೇಸುವೇ ಶ್ರೇಷ್ಠ ಮಹಾಯಾಜಕರು 14 ಆದ್ದರಿಂದ ಪರಲೋಕಗಳನ್ನು ದಾಟಿಹೋದ ದೇವಪುತ್ರ ಯೇಸು ಎಂಬ ಶ್ರೇಷ್ಠ ಮಹಾಯಾಜಕರು ನಮಗಿರುವುದರಿಂದ ನಾವು ಅರಿಕೆಮಾಡುವ ವಿಶ್ವಾಸವನ್ನು ಬಿಗಿಯಾಗಿ ಹಿಡಿಯೋಣ. 15 ನಮಗಿರುವ ಮಹಾಯಾಜಕ ನಮ್ಮ ಬಲಹೀನತೆಗಳನ್ನು ಕುರಿತು ಅನುಕಂಪಗೊಳ್ಳದೆ ಇರುವವರಲ್ಲ. ಅವರು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದರೂ ಪಾಪ ಮಾತ್ರ ಮಾಡಲಿಲ್ಲ. 16 ನಾವು ಕರುಣೆಯನ್ನು ಹೊಂದುವಂತೆಯೂ ತಕ್ಕ ಸಮಯದಲ್ಲಿ ಸಹಾಯ ಮಾಡುವ ಕೃಪೆಯನ್ನು ಪಡೆಯುವಂತೆಯೂ ಧೈರ್ಯದಿಂದ ಕೃಪಾಸನದ ಬಳಿಗೆ ಬರೋಣ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.