Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 36 - ಕನ್ನಡ ಸಮಕಾಲಿಕ ಅನುವಾದ


ಚಲ್ಪಹಾದನ ಪುತ್ರಿಯರ ಸೊತ್ತಿನ ಹಕ್ಕು

1 ಆಗ ಯೋಸೇಫನ ಪುತ್ರರ ಕುಟುಂಬದವರಾದ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಮಕ್ಕಳ ಕುಟುಂಬಗಳ ಮುಖ್ಯಸ್ಥರು ಮೋಶೆ ಹಾಗೂ ಇಸ್ರಾಯೇಲರ ಕುಲನಾಯಕರ ಸಮೀಪಕ್ಕೆ ಬಂದು ಮಾತನಾಡಿ,

2 “ಚೀಟುಹಾಕಿ ನಾಡನ್ನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವುದಕ್ಕೆ ಯೆಹೋವ ದೇವರು ನಮ್ಮ ಒಡೆಯನಾದ ನಿನಗೆ ಆಜ್ಞಾಪಿಸಿದರು. ನಮ್ಮ ಸಹೋದರನಾದ ಚಲ್ಪಹಾದನ ಸೊತ್ತನ್ನು ಅವನ ಪುತ್ರಿಯರಿಗೆ ಕೊಡಬೇಕೆಂದು ದೇವರಿಂದ ಅಪ್ಪಣೆಯಾಗಿತ್ತು.

3 ಆದರೆ ಅವರು ಇಸ್ರಾಯೇಲರ ಬೇರೆ ಗೋತ್ರದವರಿಗೆ ಮದುವೆಯಾದರೆ, ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಸೊತ್ತಿನಿಂದ ಅವರನ್ನು ಮದುವೆಮಾಡಿಕೊಂಡ ಗೋತ್ರದವರಿಗೆ ಸೊತ್ತು ಹೋಗುತ್ತದೆ. ಇದರಿಂದ ನಮ್ಮ ಸೊತ್ತಿನ ಭಾಗ ಕಡಿಮೆಯಾಗಿ ಹೋಗುವುದು.

4 ಇಸ್ರಾಯೇಲರಿಗೆ ಜೂಬಿಲಿ ವರ್ಷ ಬಂದಾಗ ಅವರ ಸೊತ್ತು ಅವರು ಸೇರಿಕೊಳ್ಳುವ ಗೋತ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಗೋತ್ರದ ಸೊತ್ತಿನಿಂದ ತೆಗೆಯಲಾಗುವುದು.”

5 ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಇಸ್ರಾಯೇಲರಿಗೆ ಆಜ್ಞಾಪಿಸಿ, “ಯೋಸೇಫನ ಪುತ್ರರ ಗೋತ್ರದವರು ಸರಿಯಾಗಿ ಮಾತನಾಡುತ್ತಾರೆ.

6 ಯೆಹೋವ ದೇವರು ಚಲ್ಪಹಾದನ ಪುತ್ರಿಯರ ವಿಷಯದಲ್ಲಿ ಆಜ್ಞಾಪಿಸಿದ ಮಾತು ಏನೆಂದರೆ: ಅವರು ತಮ್ಮ ಮನಸ್ಸು ಬಂದವರೊಂದಿಗೆ ಮದುವೆಮಾಡಿಕೊಳ್ಳಲಿ, ಆದರೆ ತಮ್ಮ ತಂದೆಯ ಕುಟುಂಬದ ಗೋತ್ರದವರಿಗೆ ಮಾತ್ರ ಮದುವೆ ಮಾಡಿಕೊಳ್ಳಬಹುದು.

7 ಇಸ್ರಾಯೇಲರ ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರದ ಕೈಗೆ ಹೋಗಬಾರದು. ಏಕೆಂದರೆ ಇಸ್ರಾಯೇಲರು, ಒಬ್ಬೊಬ್ಬನು ತನ್ನ ಪಿತೃಗಳ ಗೋತ್ರದ ಸೊತ್ತನ್ನು ತಾನೇ ಹೊಂದಿರಬೇಕು.

8 ಇದಕ್ಕಾಗಿ ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಪಿತೃಗಳ ಸೊತ್ತನ್ನು ಸ್ವಾಧೀನ ಮಾಡಿಕೊಳ್ಳುವಂತೆ ಇಸ್ರಾಯೇಲರ ಗೋತ್ರಗಳೊಳಗೆ ಸೊತ್ತನ್ನು ಹೊಂದಿರುವ ಒಬ್ಬೊಬ್ಬ ಪುತ್ರಿಯು ತನ್ನ ಪಿತೃವಿನ ಕುಟುಂಬದ ಗೋತ್ರದಲ್ಲಿರುವವನೊಂದಿಗೇ ಮದುವೆ ಮಾಡಿಕೊಳ್ಳಬೇಕು.

9 ಒಂದು ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ಹಸ್ತಾಂತರಗೊಳ್ಳಬಾರದು ಆದರೆ ಇಸ್ರಾಯೇಲರ ಗೋತ್ರಗಳಲ್ಲಿ ಒಬ್ಬೊಬ್ಬನು ತನ್ನ ಸೊತ್ತಿಗೆ ತಾನೇ ಹೊಂದಿಕೊಳ್ಳಬೇಕು,” ಎಂದನು.

10 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾದನ ಪುತ್ರಿಯರು ಮಾಡಿದರು.

11 ಚಲ್ಪಹಾದನ ಪುತ್ರಿಯರಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ, ತಮ್ಮ ಚಿಕ್ಕಪ್ಪಂದಿರ ಪುತ್ರರನ್ನು ಮದುವೆಯಾದರು.

12 ಯೋಸೇಫನ ಮಗನಾದ ಮನಸ್ಸೆಯ ಪುತ್ರರ ಕುಟುಂಬದವರೊಡನೆ ಮದುವೆಯಾದರು. ಈ ಪ್ರಕಾರ ಅವರ ಸೊತ್ತು ತಮ್ಮ ಪಿತೃವಿನ ಗೋತ್ರದಲ್ಲಿಯೇ ಉಳಿಯಿತು.

13 ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲರಿಗೆ ಆಜ್ಞಾಪಿಸಿದ ಆಜ್ಞೆಗಳೂ, ನ್ಯಾಯಗಳೂ ಇವೇ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು