ಅರಣ್ಯಕಾಂಡ 12 - ಕನ್ನಡ ಸಮಕಾಲಿಕ ಅನುವಾದಮಿರ್ಯಾಮಳು ಮತ್ತು ಆರೋನ್ ಮೋಶೆಯನ್ನು ವಿರೋಧಿಸಿದ್ದು 1 ಮೋಶೆಯು ಕೂಷ್ ದೇಶದ ಸ್ತ್ರೀಯನ್ನು ವಿವಾಹವಾಗಿದ್ದನು. ಆಕೆಯ ನಿಮಿತ್ತವಾಗಿ ಮಿರ್ಯಾಮಳೂ ಆರೋನನೂ ಮೋಶೆಗೆ ವಿರುದ್ಧವಾಗಿ ಮಾತನಾಡಲಿಕ್ಕೆ ಪ್ರಾರಂಭಿಸಿದರು. 2 ಅವರು, “ಯೆಹೋವ ದೇವರು ಮೋಶೆಯ ಮುಖಾಂತರ ಮಾತ್ರವೇ ಮಾತನಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ?” ಎಂದರು. ಅವರು ಆಡಿದ ಮಾತು ಯೆಹೋವ ದೇವರಿಗೆ ಕೇಳಿಸಿತು. 3 ಆದರೆ ಮೋಶೆ ಎಂಬವನು ಭೂಲೋಕದಲ್ಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ದೀನನಾಗಿದ್ದನು. 4 ಯೆಹೋವ ದೇವರು ಫಕ್ಕನೆ ಮೋಶೆಗೂ ಆರೋನನಿಗೂ ಮಿರ್ಯಾಮಳಿಗೂ, “ನೀವು ಮೂವರು ಹೊರಗೆ ದೇವದರ್ಶನ ಗುಡಾರದ ಸಮೀಪಕ್ಕೆ ಬನ್ನಿರಿ,” ಎಂದರು. ಆಗ ಆ ಮೂವರೂ ಹೊರಗೆ ಬಂದರು. 5 ಯೆಹೋವ ದೇವರು ಮೇಘ ಸ್ತಂಭದಲ್ಲಿ ಇಳಿದು ಗುಡಾರದ ಬಾಗಿಲ ಬಳಿಯಲ್ಲಿ ನಿಂತು, ಆರೋನನನ್ನೂ ಮಿರ್ಯಾಮಳನ್ನೂ ಕರೆದಾಗ, ಅವರಿಬ್ಬರು ಮುಂದೆ ಬಂದರು. 6 ಯೆಹೋವ ದೇವರು ಅವರಿಗೆ ಹೀಗೆ ಹೇಳಿದನು, “ನನ್ನ ಮಾತುಗಳನ್ನು ಈಗ ಕೇಳಿರಿ: “ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಯೆಹೋವ ದೇವರಾದ ನಾನು ದರ್ಶನದಲ್ಲಿ ಪ್ರಕಟಿಸುವೆನು, ಇಲ್ಲವೆ ಕನಸಿನಲ್ಲಿಯೂ ನಾನು ಅವನೊಡನೆ ಮಾತನಾಡುವೆನು. 7 ಆದರೆ ನನ್ನ ಸೇವಕನಾದ ಮೋಶೆಯು ಹಾಗಲ್ಲ. ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಾನೆ. 8 ನಾನು ಗೂಢವಾಗಿ ಅಲ್ಲ ಸ್ಪಷ್ಟವಾಗಿ, ಮುಖಾಮುಖಿಯಾಗಿ ಅಂದರೆ, ಪ್ರತ್ಯಕ್ಷವಾಗಿ ಅವನ ಸಂಗಡ ಮಾತನಾಡುತ್ತೇನೆ. ಅವನು ಯೆಹೋವ ದೇವರ ರೂಪವನ್ನು ದೃಷ್ಟಿಸುವನು. ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡುವುದಕ್ಕೆ ಏಕೆ ಭಯಪಡಲಿಲ್ಲ?” 9 ಆಗ ಯೆಹೋವ ದೇವರು ಅವರ ಮೇಲೆ ಕೋಪಗೊಂಡು ಹೊರಟು ಹೋದರು. 10 ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು. ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ, ಇಗೋ, ಅವಳು ಕುಷ್ಠರೋಗಿಯಾಗಿದ್ದಳು. 11 ಆರೋನನು ಮೋಶೆಗೆ, “ಅಯ್ಯೋ ನನ್ನ ಒಡೆಯನೇ, ನಾವು ಪಾಪಮಾಡಿದೆವು. ಬುದ್ಧಿ ಇಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ. 12 ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತು ಹೋದ ಶಿಶುವಿನ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ,” ಎಂದನು. 13 ಮೋಶೆಯು ಯೆಹೋವ ದೇವರಿಗೆ, “ದೇವರೇ, ಅವಳನ್ನು ಈಗ ಗುಣಪಡಿಸು, ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ,” ಎಂದನು. 14 ಆಗ ಯೆಹೋವ ದೇವರು ಮೋಶೆಗೆ, “ಆಕೆಯ ತಂದೆ ಅವಳ ಮುಖದ ಮೇಲೆ ಉಗುಳಿದರೆ, ಆಕೆ ಏಳು ದಿನ ನಾಚಿಕೆಯಿಂದ ಮರೆಯಾಗಿರುವುದಿಲ್ಲವೇ? ಹಾಗಾದರೆ ಆಕೆಯು ಏಳು ದಿವಸ ಪಾಳೆಯದ ಹೊರಗೆ ಇರಲಿ, ತರುವಾಯ ಅವಳನ್ನು ನೀನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು,” ಎಂದರು. 15 ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿ ಇಟ್ಟರು. ಮಿರ್ಯಾಮಳು ತಿರುಗಿ ಒಳಗೆ ಬರುವವರೆಗೆ ಜನರು ಪ್ರಯಾಣ ಮಾಡಲಿಲ್ಲ. 16 ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.