ಅಪೊಸ್ತಲರ ಕೃತ್ಯಗಳು 6 - ಕನ್ನಡ ಸಮಕಾಲಿಕ ಅನುವಾದಏಳು ಜನರ ಆಯ್ಕೆ 1 ಆ ದಿನಗಳಲ್ಲಿ ಶಿಷ್ಯರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಅವರಲ್ಲಿ ಗ್ರೀಕ್ ಮಾತನಾಡುವ ಯೆಹೂದ್ಯರು, ಹೀಬ್ರೂ ಭಾಷೆ ಮಾತನಾಡುವ ಯೆಹೂದ್ಯರ ವಿರೋಧವಾಗಿ ಗೊಣಗುಟ್ಟುತ್ತಿದ್ದರು. ಏಕೆಂದರೆ, “ಅನುದಿನದ ಉಪಚಾರದಲ್ಲಿ ಅವರು ತಮ್ಮ ವಿಧವೆಯರನ್ನು ಅಲಕ್ಷ್ಯಮಾಡುತ್ತಿದ್ದಾರೆ,” ಎಂದರು. 2 ಆದ್ದರಿಂದ ಆ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯರನ್ನು ಸೇರಿಸಿ, “ನಾವು ದೇವರ ವಾಕ್ಯ ಬೋಧಿಸುವ ಸೇವೆಯನ್ನು ಕಡೆಗಣಿಸಿ, ಆಹಾರ ವಿತರಣೆಗಾಗಿ ಸಮಯ ಕಳೆಯುತ್ತಿರುವುದು ಸರಿಯಲ್ಲ. 3 ಸಹೋದರರೇ, ನಿಮ್ಮಲ್ಲಿ ಪವಿತ್ರಾತ್ಮಭರಿತರೂ ಜ್ಞಾನವಂತರೂ ಎಂದು ಸಾಕ್ಷಿ ಹೊಂದಿರುವ ಏಳು ಜನರನ್ನು ಆಯ್ಕೆ ಮಾಡಿರಿ. ನಾವು ಅವರನ್ನು ಈ ಕಾರ್ಯಕ್ಕಾಗಿ ನೇಮಿಸುವೆವು. 4 ನಾವಾದರೋ ಪ್ರಾರ್ಥನೆ ಮಾಡುವುದರಲ್ಲಿಯೂ ದೇವರ ವಾಕ್ಯ ಬೋಧಿಸುವುದರಲ್ಲಿಯೂ ನಿರತರಾಗಿರುವೆವು,” ಎಂದು ಹೇಳಿದರು. 5 ಈ ಮಾತು ಇಡೀ ಸಮೂಹಕ್ಕೆ ಮೆಚ್ಚುಗೆಯಾಯಿತು. ಅವರು ಪೂರ್ಣನಂಬಿಕೆಯುಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೆಫನನ್ನು ಆರಿಸಿಕೊಂಡರು; ಅಲ್ಲದೆ ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮಾರ್ಗ ಅನುಸರಿಸುತ್ತಿದ್ದ ಅಂತಿಯೋಕ್ಯದ ನಿಕೊಲಾಯನನ್ನು ಆಯ್ಕೆಮಾಡಿದರು. 6 ಇವರನ್ನು ಅಪೊಸ್ತಲರ ಮುಂದೆ ತಂದು ನಿಲ್ಲಿಸಿದರು. ಅವರು ಪ್ರಾರ್ಥನೆಮಾಡಿ ಅವರ ಮೇಲೆ ತಮ್ಮ ಹಸ್ತಗಳನ್ನಿಟ್ಟು ನೇಮಿಸಿದರು. 7 ದೇವರ ವಾಕ್ಯವು ಅಭಿವೃದ್ಧಿಯಾಗುತ್ತಾ ಬಂತು. ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆಯು ಬಹಳವಾಗಿ ಹೆಚ್ಚಿತು. ಯಾಜಕರಲ್ಲಿಯೂ ಅನೇಕ ಜನರು ನಂಬಿಕೆಗೆ ವಿಧೇಯರಾದರು. ಸ್ತೆಫನನ ಬಂಧನ 8 ದೇವರ ಕೃಪೆಯಿಂದಲೂ ಶಕ್ತಿಯಿಂದಲೂ ತುಂಬಿದ್ದ ಸ್ತೆಫನನಿಂದ ಜನರಲ್ಲಿ ಮಹಾ ಅದ್ಭುತಗಳೂ ಸೂಚಕಕಾರ್ಯಗಳೂ ನಡೆದವು. 9 ಆದರೆ, “ಬಿಡುಗಡೆ ಹೊಂದಿದವರು” ಎಂಬ ಯೆಹೂದ್ಯ ಸಭಾಮಂದಿರಕ್ಕೆ ಸೇರಿದವರಿಂದ ವಿರೋಧ ಉಂಟಾಯಿತು. ಅವರು ಕುರೇನ್ಯ ಅಲೆಕ್ಸಾಂದ್ರಿಯ ಕಿಲಿಕ್ಯ ಮತ್ತು ಏಷ್ಯಾ ಪ್ರಾಂತಗಳಿಂದ ಬಂದ ಯೆಹೂದ್ಯರಾಗಿದ್ದರು. ಅವರು ಸ್ತೆಫನನೊಂದಿಗೆ ತರ್ಕಿಸುವುದಕ್ಕೆ ಪ್ರಾರಂಭಿಸಿದರು. 10 ಆದರೆ ಅವನು ಜ್ಞಾನದಿಂದಲೂ ಪವಿತ್ರಾತ್ಮ ದೇವರಿಂದಲೂ ಮಾತನಾಡಿದ್ದರಿಂದ ಅವರಿಗೆ ಅವನನ್ನು ಎದುರಿಸಲು ಸಾಧ್ಯವಾಗಲಿಲ್ಲ. 11 ಆಗ ಅವರು, “ಇವನು ಮೋಶೆಗೂ ದೇವರಿಗೂ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುವುದನ್ನು ನಾವು ಕೇಳಿದ್ದೇವೆ,” ಎಂದು ಕೆಲವರಿಗೆ ಲಂಚಕೊಟ್ಟು ಹೇಳುವಂತೆ ರಹಸ್ಯವಾಗಿ ಮನವೊಲಿಸಿದರು. 12 ಹೀಗೆ ಅವರು ಜನರನ್ನೂ ಹಿರಿಯರನ್ನೂ ನಿಯಮ ಬೋಧಕರನ್ನೂ ಪ್ರಚೋದಿಸಿ ಸ್ತೆಫನನನ್ನು ಬಂಧಿಸಿ ನ್ಯಾಯಸಭೆಯ ಮುಂದೆ ತಂದು ನಿಲ್ಲಿಸಿದರು. 13 ಸುಳ್ಳುಸಾಕ್ಷಿಗಳನ್ನು ಹಾಜರುಪಡಿಸಿ, “ಈ ಮನುಷ್ಯನು ಈ ಪವಿತ್ರಸ್ಥಳಕ್ಕೂ ಮೋಶೆಯ ನಿಯಮಕ್ಕೂ ವಿರೋಧವಾಗಿ ಮಾತನಾಡುತ್ತಲೇ ಇದ್ದಾನೆ. 14 ನಜರೇತಿನ ಯೇಸು ಈ ಸ್ಥಳವನ್ನು ನಾಶಮಾಡಿಬಿಡುತ್ತಾರೆಂದೂ ನಮಗೆ ಒಪ್ಪಿಸಿದ ಮೋಶೆಯ ಪದ್ಧತಿಗಳನ್ನು ಬದಲಾಯಿಸುತ್ತಾರೆಂದೂ ಇವನು ಹೇಳುವುದನ್ನು ನಾವು ಕೇಳಿದ್ದೇವೆ,” ಎಂದು ಅವನ ವಿರುದ್ಧ ಸಾಕ್ಷಿ ಹೇಳಿಸಿದರು. 15 ನ್ಯಾಯಸಭೆಯಲ್ಲಿ ಕುಳಿತುಕೊಂಡಿದ್ದವರೆಲ್ಲರೂ ಸ್ತೆಫನನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವನ ಮುಖವು ದೇವದೂತನ ಮುಖದಂತೆ ಕಾಣಿಸುತ್ತಿತ್ತು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.