Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 4 - ಕನ್ನಡ ಸಮಕಾಲಿಕ ಅನುವಾದ


ಈಷ್ಬೋಶೆತನ ಕೊಲೆ

1 ಅಬ್ನೇರನು ಹೆಬ್ರೋನಿನಲ್ಲಿ ಮರಣ ಹೊಂದಿದನೆಂದು ಸೌಲನ ಮಗ ಈಷ್ಬೋಶೆತನು ಕೇಳಿದಾಗ, ಅವನು ಧೈರ್ಯವನ್ನು ಕಳೆದುಕೊಂಡನು. ಇಸ್ರಾಯೇಲರೆಲ್ಲರು ಕಳವಳಗೊಂಡರು.

2 ಆದರೆ ಸೌಲನ ಮಗನಿಗೆ ಸೇನಾಪತಿಗಳು ಇಬ್ಬರಿದ್ದರು. ಒಬ್ಬನ ಹೆಸರು ಬಾಣನು. ಮತ್ತೊಬ್ಬನ ಹೆಸರು ರೇಕಾಬನು. ಇವರು ಬೆನ್ಯಾಮೀನ್ ಗೋತ್ರದಲ್ಲಿ ಬೇರೋತ್ ಗ್ರಾಮದವನಾದ ರಿಮ್ಮೋನನ ಮಕ್ಕಳು. ಏಕೆಂದರೆ ಬೇರೋತ್ ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ.

3 ಆದರೆ ಬೇರೋತ್ಯರು ಗಿತ್ತಯಿಮಿಗೆ ಓಡಿಹೋಗಿ ಇಂದಿನವರೆಗೂ ಅಲ್ಲಿ ಪ್ರವಾಸಿಗಳಾಗಿದ್ದಾರೆ.

4 ಸೌಲನ ಮಗ ಯೋನಾತಾನನಿಗೆ ಕಾಲು ಕುಂಟಾದ ಒಬ್ಬ ಮಗನಿದ್ದನು. ಸೌಲನೂ, ಯೋನಾತಾನನೂ ಮರಣ ಹೊಂದಿದರೆಂಬ ವರ್ತಮಾನ ಇಜ್ರೆಯೇಲ್ ಎಂಬ ಪಟ್ಟಣದಿಂದ ಬಂದಾಗ, ಅವನು ಐದು ವರ್ಷದವನಾಗಿದ್ದನು. ಆಗ ಅವನ ದಾದಿಯು ಅವನನ್ನು ಎತ್ತಿಕೊಂಡು ಓಡಿ ಹೋದಳು. ಅವಳು ತ್ವರೆಯಾಗಿ ಓಡಿದಾಗ, ಅವನು ಬಿದ್ದು ಕುಂಟನಾದನು. ಅವನ ಹೆಸರು ಮೆಫೀಬೋಶೆತನು.

5 ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನೂ, ಬಾಣನೂ ಹೊರಟು ಮಧ್ಯಾಹ್ನದ ಬಿಸಿಲು ಹೊತ್ತಿನಲ್ಲಿ ಈಷ್ಬೋಶೆತನ ಮನೆಗೆ ಬಂದರು. ಅವನು ಮಂಚದ ಮೇಲೆ ಮಲಗಿಕೊಂಡಿದ್ದನು.

6 ಅವರು ಗೋಧಿಯನ್ನು ತೆಗೆದುಕೊಂಡು ಹೋಗುವವರಂತೆ ನಡುಮನೆಯೊಳಗೆ ಹೋಗಿ ಅವನ ಹೊಟ್ಟೆಯಲ್ಲಿ ತಿವಿದರು. ರೇಕಾಬನೂ ಅವನ ಸಹೋದರ ಬಾಣನೂ ಗುಟ್ಟಾಗಿ ಒಳಗೆ ಜಾರಿಕೊಂಡರು.

7 ಅವರು ಮನೆಯೊಳಗೆ ಪ್ರವೇಶಿಸಿದಾಗ, ಅರಸನು ಮಲಗುವ ಕೋಣೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಅವರಿಬ್ಬರು ಅವನನ್ನು ಹೊಡೆದು, ಕೊಂದುಹಾಕಿ, ತಲೆಯನ್ನು ಕಡಿದು, ಅದನ್ನು ತೆಗೆದುಕೊಂಡು ರಾತ್ರಿಯೆಲ್ಲಾ ಅರಾಬಾ ತಗ್ಗಿನಲ್ಲಿ ನಡೆದರೆ.

8 ಅನಂತರ ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಈಷ್ಬೋಶೆತನ ತಲೆಯನ್ನು ತಂದು ಅರಸನಿಗೆ, “ಇಗೋ, ನಿನ್ನ ಪ್ರಾಣವನ್ನು ಹುಡುಕಿದ ನಿನ್ನ ಶತ್ರುವಾಗಿದ್ದ ಸೌಲನ ಮಗ ಈಷ್ಬೋಶೆತನ ತಲೆಯು. ಈ ದಿನದಲ್ಲಿ ಯೆಹೋವ ದೇವರು ಅರಸನಾದ ನಮ್ಮ ಒಡೆಯನಿಗೋಸ್ಕರ ಸೌಲನಿಗೂ, ಅವನ ಸಂತಾನಕ್ಕೂ ಮುಯ್ಯಿ ತೀರಿಸಿದ್ದಾರೆ,” ಎಂದರು.

9 ಆಗ ದಾವೀದನು ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನಿಗೂ, ಅವನ ಸಹೋದರ ಬಾಣನಿಗೂ ಉತ್ತರವಾಗಿ, “ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಯೆಹೋವ ದೇವರ ಜೀವದಾಣೆ,

10 ಶುಭವರ್ತಮಾನವನ್ನು ತಂದವನು ನಾನು, ತನ್ನ ವರ್ತಮಾನಕ್ಕೋಸ್ಕರ ಬಹುಮಾನವನ್ನು ಕೊಡುವೆನೆಂದು ನೆನಸಿ ಒಬ್ಬನು ನನಗೆ, ‘ಇಗೋ, ಸೌಲನು ಮರಣಹೊಂದಿದನು,’ ಎಂದು ಹೇಳಿದ್ದರಿಂದ, ನಾನು ಚಿಕ್ಲಗಿನಲ್ಲಿ ಅವನಿಗೆ ಮರಣದಂಡನೆಯನ್ನು ವಿಧಿಸಿದೆನು.

11 ಹಾಗಾದರೆ, ತನ್ನ ಮನೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದ ನಿರ್ದೋಷಿಯನ್ನು ಕೊಲೆಮಾಡಿದ ದುಷ್ಟ ಮನುಷ್ಯರನ್ನು ಎಷ್ಟೋ ಹೆಚ್ಚಾಗಿ ಕೊಲ್ಲಿಸುವೆನು. ಈಗ ನಾನು ನಿಮ್ಮ ಕೈಯಿಂದ ಅವನ ರಕ್ತ ವಿಚಾರಣೆ ಮಾಡಿ, ನಿಮ್ಮನ್ನು ಭೂಮಿಯಿಂದ ತೆಗೆದುಬಿಡುವೆನು,” ಎಂದನು.

12 ದಾವೀದನು ತನ್ನ ಜನರಿಗೆ ಆಜ್ಞಾಪಿಸಿದ್ದರಿಂದ, ಅವರು ಅವರನ್ನು ಕೊಂದುಹಾಕಿ, ಅವರ ಕೈಕಾಲುಗಳನ್ನು ಕಡಿದು, ಹೆಬ್ರೋನಿನ ಕೊಳದ ಬಳಿಯಲ್ಲಿ ತೂಗುಹಾಕಿದರು. ಈಷ್ಬೋಶೆತನ ತಲೆಯನ್ನು ತೆಗೆದುಕೊಂಡು, ಅದನ್ನು ಹೆಬ್ರೋನಿನಲ್ಲಿರುವ ಅಬ್ನೇರನ ಸಮಾಧಿಯಲ್ಲಿ ಹೂಳಿಟ್ಟರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು